ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ ಹಾಗೂ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳ ಬಗ್ಗೆ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಹತ್ವದ ಹೇಳಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ, ವೀಡಿಯೊಗಳನ್ನು ಪೋಸ್ಟ್ ಮಾಡುವುದು ಮತ್ತು ಸರ್ಕಾರದ ವಿರುದ್ಧ ಸುಮ್ಮನೆ ಟೀಕೆ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಖಡಕ್ ಆಗಿ ಸೂಚಿಸಿದ್ದಾರೆ. ಇಂತಹ ಕಾನೂನು ಕೈಗೆತ್ತಿಕೊಳ್ಳುವ “ವಿಜಿಲಾಂಟಿಸಂ” ಅಥವಾ “ನೈತಿಕ ಪೊಲೀಸ್ಗಿರಿ” (ಮಾರಲ್ ಪೊಲೀಸಿಂಗ್) ಕೃತ್ಯಗಳನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಪರಾಧ ಜಾಲಗಳು ಎಚ್ಚೆತ್ತುಕೊಳ್ಳುತ್ತವೆ
ಅಕ್ರಮ ವಲಸಿಗರ ಬಗ್ಗೆ ತಾವೇ ಮಾಹಿತಿ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅಂತರರಾಷ್ಟ್ರೀಯ ಮಟ್ಟದ ಅಪರಾಧ ಜಾಲಗಳು ಎಚ್ಚೆತ್ತುಕೊಳ್ಳುತ್ತವೆ. ಇದರಿಂದಾಗಿ ಅಕ್ರಮ ವಲಸಿಗರನ್ನು ಹಿಡಿಯಲು ಸರ್ಕಾರ ಹಮ್ಮಿಕೊಂಡಿರುವ ರಹಸ್ಯ ಕಾರ್ಯಾಚರಣೆಗಳಿಗೆ ತೀವ್ರ ಅಡ್ಡಿಯಾಗುತ್ತದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿಜವಾದ ದೇಶಭಕ್ತರು ಮತ್ತು ರಾಜ್ಯದ ಹಿತಾಸಕ್ತಿ ಬಯಸುವವರು ಯಾರೇ ಆದರೂ, ತಮ್ಮ ಬಳಿ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಖಚಿತ ಮಾಹಿತಿ ಇದ್ದರೆ ಅದನ್ನು ನೇರವಾಗಿ ಪೊಲೀಸರಿಗೆ ಅಥವಾ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಇಂತಹ ಕೃತ್ಯಗಳಿಂದ ದೇಶದ ಮತ್ತು ರಾಜ್ಯದ ಭದ್ರತೆಗೆ ದೊಡ್ಡ ಧಕ್ಕೆ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
1000 ವಲಸಿಗರನ್ನು ಪತ್ತೆ ಹಚ್ಚಲಾಗಿದೆ
ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕಳೆದ ಮೂರು ತಿಂಗಳಲ್ಲಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಬಂದು ಅಕ್ರಮವಾಗಿ ನೆಲೆಸಿದ್ದ ಸುಮಾರು 1000 ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಇವರೆಲ್ಲರನ್ನೂ ವಿನಾಯಿತಿ ಇಲ್ಲದೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಒ) ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಎಫ್ಆರ್ಒ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಅಕ್ರಮ ವಲಸಿಗರ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿದೆ: ಸಿಎಂ ಡಿ ಕೆ ಶಿವಕುಮಾರ್ ಭರವಸೆ
