TOP NEWS

Toxic: ‘ತಬಾಹಿ’ ಬೆನ್ನಲ್ಲೇ ಮತ್ತೊಂದು ಸೌಂಡ್ ಮಾಡಿದ ಕಿಯಾರಾ ಅಡ್ವಾನಿ; ಹುಟ್ಟುಹಬ್ಬದ ದಿನವೇ ರಿಲೀಸ್ ಆಯ್ತು ‘ಟಾಕ್ಸಿಕ್’ ಚಿತ್ರದ ಗ್ಲಾಮರಸ್ ಲುಕ್!

Toxic Team Shares Birthday Gift for Kiara Advani Actress Turns Up the Heat as Nadiya

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾದ ‘ತಬಾಹಿ’ ಗೀತೆಯಲ್ಲಿ ತಮ್ಮ ಅಪ್ರತಿಮ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕಿಯಾರಾ ಅವರ ಜನ್ಮದಿನದ ಅಂಗವಾಗಿ ‘ಟಾಕ್ಸಿಕ್’ ಚಿತ್ರತಂಡವು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದು, ಅವರ ಹೊಚ್ಚ ಹೊಸ ಲುಕ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದೆ.

ನಾದಿಯಾ ಪಾತ್ರದ ಹೊಸ ಝಲಕ್

ಈಗಾಗಲೇ ತೆರೆಮೇಲೆ ಯಶ್ ಮತ್ತು ಕಿಯಾರಾ ಜೋಡಿಯ ಅದ್ಭುತ ಜುಗಲ್‌ಬಂದಿ ಹಾಗೂ ಕೆಮಿಸ್ಟ್ರಿ ಅಭಿಮಾನಿಗಳಿಗೆ ಭರಪೂರ್ ರಸದೌತಣ ಉಣ ಬಡಿಸಿದೆ. ಚಿತ್ರದಲ್ಲಿ ‘ನಾದಿಯಾ’ ಎಂಬ ವಿಶಿಷ್ಟ ಪಾತ್ರಕ್ಕೆ ಜೀವ ತುಂಬಿರುವ ಕಿಯಾರಾ ಅವರ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಚಿತ್ರತಂಡ ಈ ಪೋಸ್ಟರ್ ಬಿಡುಗಡೆ ಮಾಡಿದೆ.

ಕೆಂಪು ಸುಂದರಿಯ ಮಾದಕ ನೋಟ

ಹೊಸದಾಗಿ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಕಡು ಕೆಂಪು ಬಣ್ಣದ ಸ್ಟೈಲಿಶ್ ಉಡುಗೆ ತೊಟ್ಟಿರುವ ಕಿಯಾರಾ, ಅತ್ಯಂತ ಗ್ಲಾಮರಸ್ ಹಾಗೂ ತೀಕ್ಷ್ಣ ನೋಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಿಯಾರಾ ಅವರ ಈ ರಗಡ್ ಆಂಡ್ ಕ್ಲಾಸಿ ಲುಕ್ ಸದ್ಯ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಚಿತ್ರದ ಮೇಲಿನ ಹೈಪ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಭರ್ಜರಿ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಸಿಲಿಕಾನ್ ಸಿಟಿಯಲ್ಲಿ ವೇದಿಕೆ ಸಿದ್ಧವಾಗಿದೆ. ಮುಂದಿನ ತಿಂಗಳು ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರದ ಪ್ರಚಾರ ಕಾರ್ಯವನ್ನು ಸಿನಿಮಾ ತಂಡ ಅತ್ಯಂತ ದೊಡ್ಡ ಮಟ್ಟದಲ್ಲಿ ಹಮ್ಮಿಕೊಂಡಿದೆ.

ಆಗಸ್ಟ್ 8ಕ್ಕೆ ಟ್ರೇಲರ್ ಧಮಾಕಾ

ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಿನಿಮಾ ಕಾರ್ಯಕ್ರಮವೊಂದನ್ನು ಆಯೋಜಿಸುವುದಾಗಿ ಈ ಹಿಂದೆ ಸುಳಿವು ನೀಡಿದ್ದ ಚಿತ್ರತಂಡ, ಇದೀಗ ಅಧಿಕೃತ ದಿನಾಂಕವನ್ನು ಪ್ರಕಟಿಸಿದೆ. ಆಗಸ್ಟ್ 8ರಂದು ‘ಟಾಕ್ಸಿಕ್’ ಚಿತ್ರದ ಅಧಿಕೃತ ಟ್ರೇಲರ್ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಅನಾವರಣಗೊಳ್ಳಲಿದ್ದು, ಯಶ್ ಅಬ್ಬರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.

ರಕ್ತಸಿಕ್ತ ಮಾಸ್ ಲುಕ್‌ನಲ್ಲಿ ರಾಕಿ ಭಾಯ್

ಇತ್ತೀಚೆಗಷ್ಟೇ ಅಂದರೆ ಜುಲೈ 26 ರಂದು ಬಿಡುಗಡೆಯಾಗಿರುವ ಸಿನಿಮಾದ ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಈ ಹಿಂದಿನ ಪೋಸ್ಟರ್‌ಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಯಶ್ ಅತ್ಯಂತ ರಗಡ್ ಹಾಗೂ ಸ್ಟೈಲಿಶ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಲೆ ಮಾಡಿ ಬಂದವರಂತೆ ರಕ್ತಸಿಕ್ತವಾಗಿರುವ ಕೈಗಳಲ್ಲಿ ಸಿಗರೇಟ್ ಹಿಡಿದು ಧೂಮಪಾನ ಮಾಡುತ್ತಿರುವ ಅವರ ವಿಶಿಷ್ಟ ಶೈಲಿ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.

ಆಗಸ್ಟ್ 26ಕ್ಕೆ ವರ್ಲ್ಡ್‌ವೈಡ್ ರಿಲೀಸ್

ಭಾರೀ ಹೈಪ್ ಸೃಷ್ಟಿಸಿರುವ ಈ ಚಿತ್ರವು ಆಗಸ್ಟ್ 26 ರಂದು ಜಾಗತಿಕ ಮಟ್ಟದಲ್ಲಿ ಗ್ರ್ಯಾಂಡ್ ಆಗಿ ತೆರೆಕಾಣಲಿದೆ. ವಿಶೇಷವೆಂದರೆ, ಈ ಸಿನಿಮಾವನ್ನು ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೇ ಸಿದ್ಧಪಡಿಸಲಾಗುತ್ತಿರುವುದು ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

ಮೂರನೇ ಹಾಡಿಗೆ ಶುರುವಾಯ್ತು ಕೌಂಟ್‌ಡೌನ್

ಈಗಾಗಲೇ ಬಿಡುಗಡೆಯಾಗಿರುವ ‘ತಬಾಹಿ’ ಹಾಗೂ ‘ಮನಮೋಹಕ’ ಗೀತೆಗಳು ಸೂಪರ್ ಹಿಟ್ ಆಗಿದ್ದು, ಇದೀಗ ಮೂರನೇ ಹಾಡಿನ ಬಿಡುಗಡೆಗೆ ಕೌಂಟ್‌ಡೌನ್ ಆರಂಭವಾಗಿದೆ. ವಿಶಾಲ್ ಮಿಶ್ರಾ ಸಂಗೀತ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಹೊಸ ಹಾಡು ಕೂಡ ಪಕ್ಕಾ ರೊಮ್ಯಾಂಟಿಕ್ ಶೈಲಿಯಲ್ಲಿರಲಿದೆ. ಇದು ಗ್ಯಾಂಗ್‌ಸ್ಟರ್ ಹಾಗೂ ಮಾದಕ ದ್ರವ್ಯ ಜಾಲದ ಕಥೆಯಾದ್ದರಿಂದ ಕೇವಲ ಮಾಸ್ ಹಾಡುಗಳಿರುತ್ತವೆ ಎಂದು ಅಂದಾಜಿಸಿದ್ದ ಪ್ರೇಕ್ಷಕರಿಗೆ ಚಿತ್ರತಂಡ ಮೆಲೋಡಿ ಹಾಡುಗಳ ಮೂಲಕ ಅಚ್ಚರಿ ನೀಡಿದೆ. ಚಿತ್ರದಲ್ಲಿ ಯಶ್ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಡುವಿನ ಪ್ರೇಮಕಥೆಯೇ ಹೈಲೈಟ್ ಆಗಿದ್ದು, ಇವರಿಬ್ಬರ ಕೆಮಿಸ್ಟ್ರಿಯ ಝಲಕ್ ಈ ಮೂರನೇ ಹಾಡಿನಲ್ಲಿ ಕಾಣ ಸಿಗಲಿದೆ.

ಇದನ್ನೂ ಓದಿ: ಜಗನ್ನಾಥನ ಮೂರ್ತಿ ಕಂಡ ತಕ್ಷಣ ಶೂ ಬಿಚ್ಚಿಟ್ಟ ಅಲ್ಲು ಅರ್ಜುನ್!; ಐಕಾನ್ ಸ್ಟಾರ್ ಸರಳತೆಗೆ ಫ್ಯಾನ್ಸ್ ಫಿದಾ, ವಿಡಿಯೋ ವೈರಲ್!

Leave a Reply

Your email address will not be published. Required fields are marked *