TOP NEWS

Narendra Modi: ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್: ಕುತೂಹಲ ಮೂಡಿಸಿದ ರಾಜಕೀಯ ನಡೆ

Narendra Modi met sharad pawar NCP may support NDA

ನವದೆಹಲಿ: ಸಂಸತ್ತಿನ ಹೊರಗೆ ವಿರೋಧ ಪಕ್ಷಗಳ ಸಂಸದರು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಪ್ರಧಾನಮಂತ್ರಿ (Narendra Modi)ಕಾರ್ಯಾಲಯದಲ್ಲಿ (ಪಿಎಂಒ) ನಡೆದ ಪ್ರಮುಖ ಸಭೆಯೊಂದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಎನ್‌ಸಿಪಿ (ಎಸ್‌ಪಿ) ಅಧಿನಾಯಕ ಶರದ್ ಪವಾರ್ ಹಾಗೂ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾದ ಭೇಟಿ

ಈ ಭೇಟಿಯ ವೇಳೆ ಶರದ್ ಪವಾರ್ ಅವರನ್ನು ಪ್ರಧಾನಿ ಮೋದಿ ಸ್ವತಃ ಬಾಗಿಲ ಬಳಿ ಬಂದು ಗೌರವದಿಂದ ಬರಮಾಡಿಕೊಂಡಿದ್ದಾರೆ. ಇಬ್ಬರೂ ದಿಗ್ಗಜ ನಾಯಕರು ನಗುನಗುತ್ತಲೇ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ದೃಶ್ಯಗಳು ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಭೇಟಿಯ ಸಂದರ್ಭದಲ್ಲಿ ದೇಶದ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಶರದ್ ಪವಾರ್ ಅವರು ಪ್ರಧಾನಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಆದರೆ, ಕೇವಲ ರೈತರ ಸಮಸ್ಯೆ ಮಾತ್ರವಲ್ಲದೆ ಈ ಸಭೆಯ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರವಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ಗಡಿ ಮರುನಿರ್ಣಯ (ಡಿಲಿಮಿಟೇಶನ್) ವಿಧೇಯಕವನ್ನು ಅಂಗೀಕರಿಸಲು ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶರದ್ ಪವಾರ್ ಅವರ ಪಕ್ಷದ ೮ ಸಂಸದರ ಬೆಂಬಲ ಅತ್ಯಂತ ನಿರ್ಣಾಯಕವಾಗಿದೆ. ಸೀಟುಗಳ ಸಂಖ್ಯೆಯನ್ನು ಶೇಕಡಾ ೫೦ ರಷ್ಟು ಹೆಚ್ಚಿಸುವ ಕುರಿತು ಸರ್ಕಾರ ಲಿಖಿತ ಭರವಸೆ ನೀಡಿದರೆ ಬೆಂಬಲ ನೀಡುವ ಬಗ್ಗೆ ಆಲೋಚಿಸುವುದಾಗಿ ಸುಪ್ರಿಯಾ ಸುಳೆ ಇತ್ತೀಚೆಗೆ ಸುದ್ಧಿಗೋಷ್ಠಿಯಲ್ಲಿ ಸುಳಿವು ನೀಡಿದ್ದರು.

ಎನ್‌ಡಿಎ ಜೊತೆ ಪವಾರ್‌?

ಮತ್ತೊಂದೆಡೆ, ಶರದ್ ಪವಾರ್ ಅವರ ಪಕ್ಷದ ಒಂದು ವಿಭಾಗವು ಎನ್‌ಡಿಎ ಮೈತ್ರಿಕೂಟವನ್ನು ಸೇರಲು ಉತ್ಸುಕವಾಗಿದೆ ಎಂಬ ವಹಾಪೋಹಗಳೂ ಹರಿದಾಡುತ್ತಿವೆ. ಆದರೆ, ಮಹಾರಾಷ್ಟ್ರದಲ್ಲಿ ಸದ್ಯ ಸೀಳಾಗಿರುವ ಎನ್‌ಸಿಪಿಯ ಎರಡೂ ಬಣಗಳು ಒಂದಾದರೆ ಮಾತ್ರ ಎನ್‌ಡಿಎ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಗುವುದು, ಶರದ್ ಪವಾರ್ ಅವರನ್ನು ವೈಯಕ್ತಿಕವಾಗಿ ಮೈತ್ರಿಗೆ ಸೇರಿಸಿಕೊಳ್ಳಲು ಬಿಜೆಪಿ ಆಸಕ್ತವಾಗಿಲ್ಲ ಎಂದು ಆಡಳಿತ ಪಕ್ಷದ ಮೂಲಗಳು ತಿಳಿಸಿವೆ.

ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿ ಪ್ರತಿಭಟನೆ ನಡೆಸುತ್ತಿರುವ ನಿರ್ಣಾಯಕ ವೇಳೆಯಲ್ಲೇ, ‘ಇಂಡಿಯಾ’ ಒಕ್ಕೂಟದ ಹಿರಿಯ ನಾಯಕರಾಗಿರುವ ಶರದ್ ಪವಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವುದು ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಇದನ್ನೂ ಓದಿ: NEET-UG: ಸಂಸತ್ತಿನಲ್ಲಿ ನೀಟ್ ಬಿರುಗಾಳಿ: ಸ್ಪೀಕರ್ ಓಂ ಬಿರ್ಲಾ ಭೇಟಿ ಮಾಡಿ ಚರ್ಚೆಗೆ ಪಟ್ಟು ಹಿಡಿದ ರಾಹುಲ್ ಗಾಂಧಿ ನಿಯೋಗ!

Leave a Reply

Your email address will not be published. Required fields are marked *