TOP NEWS

Bhojshala: ಭೋಜ್‌ಶಾಲಾ ವಿವಾದ: ಶುಕ್ರವಾರದ ನಮಾಜ್‌ಗೆ ಪರ್ಯಾಯ ಜಾಗ ನೀಡಲು ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ!

Bhojshala Dispute SC Directs Madhya Pradesh Govt to Provide Alternative Open Space for Friday Prayers

ನವದೆಹಲಿ: ಭೋಜ್‌ಶಾಲಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Bhojshala) ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಧಾರ್ ಜಿಲ್ಲೆಯ ವಿವಾದಿತ ಭೋಜ್‌ಶಾಲಾ ಆವರಣದಲ್ಲಿ ಶುಕ್ರವಾರದ ನಮಾಜ್ ಸಲ್ಲಿಸಲು ಪರ್ಯಾಯವಾಗಿ ತೆರೆದ ಜಾಗವನ್ನು ಒದಗಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಎರಡೂ ಕಡೆಯ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು, ಮುಸ್ಲಿಂ ಸಮುದಾಯದ ಅರ್ಜಿದಾರರಿಗೆ ಮಧ್ಯಾಹ್ನ 1:00 ರಿಂದ 3:00 ರವರೆಗೆ ನಮಾಜ್ ಮಾಡಲು ಮುಕ್ತ ಸ್ಥಳಾವಕಾಶ ಕಲ್ಪಿಸಬೇಕು ಮತ್ತು ಇದಕ್ಕೆ ಅಗತ್ಯವಿರುವ ವ್ಯವಸ್ಥೆ ಹಾಗೂ ನಿರ್ವಹಣೆಯನ್ನು ಸರ್ಕಾರವೇ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಮುಸ್ಲಿಂ ಪರ ಸಂಘಟನೆ ಅರ್ಜಿ ವಿಚಾರಣೆ

ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಪರ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಸರ್ಕಾರ, ಭಾರತೀಯ ಪುರಾತತ್ವ ಇಲಾಖೆ (ASI) ಮತ್ತು ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಸೇರಿದಂತೆ ಇತರ ಹಿಂದೂ ಪರ ವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಭೋಜ್‌ಶಾಲಾ ಮಂದಿರದ ಒಳಗೆ ಮುಸ್ಲಿಂ ಸಮುದಾಯದವರು ನಮಾಜ್ ಮಾಡಲು ಸಾಧ್ಯವಿಲ್ಲ ಹಾಗೂ ಅವರಿಗಾಗಿ ಪರ್ಯಾಯ ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಭೋಜ್‌ಶಾಲಾ ಸಂಕೀರ್ಣದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಯಥಾಸ್ಥಿತಿಯೇ ಮುಂದುವರಿಯಲಿದೆ ಎಂದು ತಿಳಿಸಿದೆ.

ತಾಳ್ಮೆಯಿಂದ ಇರುವಂತೆ ಕೋರ್ಟ್‌ ಸೂಚನೆ

ಭೋಜ್‌ಶಾಲಾ ಪ್ರಕರಣವು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದರಿಂದ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರು ತಾಳ್ಮೆಯಿಂದ ಇರಬೇಕು ಎಂದು ಕೋರ್ಟ್ ಮನವಿ ಮಾಡಿದೆ. ಈ ವಿವಾದವನ್ನು ಬಗೆಹರಿಸಲು ದಿನನಿತ್ಯದ ಆಧಾರದ ಮೇಲೆ (ಡೇ-ಟು-ಡೇ ಬೇಸಿಸ್) ಸತತ ವಿಚಾರಣೆ ನಡೆಸಲು ತಾವು ಸಿದ್ಧರಿರುವುದಾಗಿ ನ್ಯಾಯಪೀಠ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಪ್ರಕರಣವನ್ನು ಆಲಿಸಿತು. ವಿಚಾರಣೆ ವೇಳೆ ಮಾತನಾಡಿದ ಪೀಠವು, ಇಂತಹ ಸಂವೇದನಾಶೀಲ ವಿಷಯಗಳಲ್ಲಿ ಬಳಸುವ ಪ್ರತಿಯೊಂದು ಪದದ ಬಗ್ಗೆಯೂ ನಾವು ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ನ್ಯಾಯಾಲಯದಲ್ಲಿ ಆಡುವ ಮಾತುಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸಬಹುದು ಅಥವಾ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸಬಹುದು ಎಂದು ಅಭಿಪ್ರಾಯಪಟ್ಟಿತು.

ಇದೇ ವೇಳೆ ಹಂಗಾಮಿ ವ್ಯವಸ್ಥೆಯ ಬಗ್ಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ತೀರ್ಪು ಮತ್ತು ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಎದುರಿಸುತ್ತಿರುವ ಅಸಹಾಯಕತೆಯನ್ನು ನಾವು ಗಮನಿಸಿದ್ದೇವೆ. ಸದ್ಯಕ್ಕೆ ಅಲ್ಲಿ ಯಾವ ವ್ಯವಸ್ಥೆ ಜಾರಿಯಲ್ಲಿದೆಯೋ ಅದು ಹಾಗೆಯೇ ಇರಲಿದ್ದು, ಮುಂದಿನ 10 ರಿಂದ 15 ದಿನಗಳ ಒಳಗೆ ಈ ಪ್ರಕರಣವನ್ನು ಸೂಕ್ತ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಮೌಖಿಕವಾಗಿ ತಿಳಿಸಿದರು. ಮುಸ್ಲಿಂ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಹುಜೆಫಾ ಅಹ್ಮದಿ ಮತ್ತು ನ್ಯಾಯವಾದಿ ನಿಜಾಮ್ ಪಾಶಾ ಅವರು ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿದ್ದರು. ಅರ್ಜಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿಗಳು, ಶೀಘ್ರದಲ್ಲೇ ವಿಚಾರಣೆ ನಡೆಸುವ ಭರವಸೆ ನೀಡಿದರು.

ಈ ಹಿಂದೆ ಮೇ 15 ರಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿ, ಧಾರ್ ಜಿಲ್ಲೆಯ ವಿವಾದಿತ ಭೋಜ್‌ಶಾಲಾ-ಕಮಾಲ್ ಮೌಲಾ ಮಸೀದಿ ಸಂಕೀರ್ಣವು ಮೂಲತಃ ಸರಸ್ವತಿ ದೇವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ ಎಂದು ಹೇಳಿತ್ತು. ಇದರೊಂದಿಗೆ, ಮುಸ್ಲಿಂ ಸಮುದಾಯದವರು ಪ್ರತಿ ಶುಕ್ರವಾರದಂದು ಈ ಸ್ಥಳದಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದ ಪುರಾತತ್ವ ಇಲಾಖೆಯ (ASI) ದಶಕಗಳ ಹಳೆಯ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶದ ವಿರುದ್ಧವೇ ಈಗ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿದ್ದು, ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಶಾಪಿಂಗ್ ಪ್ರಿಯರಿಗೆ ಶಾಕ್: ಇನ್ಮುಂದೆ ಸಿಗಲ್ಲ ಭರ್ಜರಿ ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಆಫರ್‌ಗಳು!

Leave a Reply

Your email address will not be published. Required fields are marked *