ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕಂಬಳ (Kambala) ಕ್ರೀಡಾಕೂಟಕ್ಕೆ ವಿವಾದಗಳ ಬೆನ್ನಲ್ಲೇ ಈಗ ಮತ್ತೊಂದು ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಕಂಬಳದ ಟ್ರ್ಯಾಕ್ ನಿರ್ಮಾಣಕ್ಕಾಗಿ ಮೈಸೂರಿನ ಸಾತಗಳ್ಳಿ ಪ್ರದೇಶದಲ್ಲಿ ಜಾಗವನ್ನು ಸಿದ್ಧಪಡಿಸುವ ವೇಳೆ, ಯಾವುದೇ ಮುನ್ಸೂಚನೆ ಹಾಗೂ ಪೂರ್ವಾನುಮತಿ ಇಲ್ಲದೆ ಕಾನೂನುಬಾಹಿರವಾಗಿ ಮರಗಳನ್ನು ಕತ್ತರಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಮೂವರ ವಿರುದ್ಧ ಎಫ್‌ಐಆರ್
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕಠಿಣ ಕ್ರಮ ಜರುಗಿಸಿದ್ದು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು (ಡಿಡಿ) ಸೇರಿದಂತೆ ಒಟ್ಟು ಮೂವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದೆ. ಸ್ಥಳದಲ್ಲಿದ್ದ 20 ಜಾಲಿ ಮರಗಳು ಸೇರಿದಂತೆ ಒಟ್ಟು 25 ಮರಗಳನ್ನು ನಿಯಮಬಾಹಿರವಾಗಿ ಕಡಿದುರುಳಿಸಿದ್ದಕ್ಕಾಗಿ, ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 25, 33/2 ಮತ್ತು 33/3ರ ಅಡಿಯಲ್ಲಿ ಈ ಮೊಕದ್ದಮೆ ಹೂಡಲಾಗಿದೆ.
ಇತ್ತ ಅರಣ್ಯ ನಾಶದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕೃತಿ ಹಾಗೂ ಹಸಿರನ್ನು ಬಲಿಗೊಟ್ಟು ಇಂತಹ ಸಾಂಪ್ರದಾಯಿಕ ಕ್ರೀಡೆಗಳನ್ನು ಆಚರಿಸುವ ಅಗತ್ಯವಾದರೂ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಮರಗಿಡಗಳನ್ನು ಕಡಿಯುವ ಬದಲು ಕಂಬಳವನ್ನು ಪರಿಸರಕ್ಕೆ ತೊಂದರೆಯಾಗದ ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು ಅಥವಾ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪರಿಸರ ಪ್ರೇಮಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ, ಪ್ರತಾಪ್ ಸಿಂಹ ಕಿಡಿ
ನಾಡಹಬ್ಬ ಮೈಸೂರು ದಸರಾದಲ್ಲಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ರಾಜ್ಯ ಸರ್ಕಾರದ ನಿರ್ಧಾರ ಈಗ ಭಾರೀ ವಿವಾದಕ್ಕೆ ಹಾಗೂ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ದಸರಾದಲ್ಲಿ ಕಂಬಳ ಬೇಡ ಎಂಬ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಿಲುವಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಾವಿತ್ರ್ಯತೆಗೆ ಧಕ್ಕೆ ತರಬೇಡಿ ಎಂದ ಹೆಚ್‌ಡಿಕೆ: ದಸರಾದಲ್ಲಿ ಕಂಬಳವನ್ನು ಸೇರಿಸುವ ಮೂಲಕ ಮೈಸೂರಿನ ಸಾಂಪ್ರದಾಯಿಕ ಉತ್ಸವಕ್ಕೆ ಧಕ್ಕೆ ತರುವ ಪ್ರಯತ್ನ ಬೇಡ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಕಂಬಳವು ಕರಾವಳಿಯ ಜನರ ನಂಬಿಕೆ, ದೈವಿಕ ಹಿನ್ನೆಲೆ ಹಾಗೂ ಅಲ್ಲಿನ ಭೌಗೋಳಿಕ ಪರಿಸರಕ್ಕೆ ಮಾತ್ರ ಸೀಮಿತವಾದ ವಿಶಿಷ್ಟ ಆಚರಣೆಯಾಗಿದೆ. ಕರಾವಳಿಯ ಹಸಿರು ಮತ್ತು ಜಲಮೂಲಗಳ ನಡುವೆ ಕಂಬಳವನ್ನು ನೋಡುವುದೇ ಒಂದು ಸುಂದರ ಅನುಭವ. ಹೀಗಿರುವಾಗ ಅದನ್ನು ಮೈಸೂರಿಗೆ ತಂದು ಅದರ ಪಾವಿತ್ರ್ಯತೆಯನ್ನು ಹಾಳುಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ಮೈಸೂರು ಹಾಗೂ ಕರಾವಳಿ ಜನರ ಭಾವನೆಗಳಿಗೆ ಘಾಸಿ ಮಾಡಬಾರದು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಕೃತಕವಾಗಿ ತುರುಕುವ ಅಗತ್ಯವಿಲ್ಲ: ಪ್ರತಾಪ್ ಸಿಂಹ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಯದುವೀರ್ ಅವರ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. “ಕರಾವಳಿಯ ಕಂಬಳವಿರಲಿ, ಮೈಸೂರು ದಸರಾ ಇರಲಿ ಅಥವಾ ಸವದತ್ತಿ ಯಲ್ಲಮ್ಮನ ಜಾತ್ರೆಯಿರಲಿ, ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಮತ್ತು ಘನತೆ ಇದೆ. ನಮಗೆ ಕಂಬಳದ ಮೇಲೆ ಅಪಾರ ಗೌರವವಿದೆ. ಆದರೆ ಮೈಸೂರು ದಸರಾದ ಸಾಂಪ್ರದಾಯಿಕ ಚೌಕಟ್ಟು ಹಾಗೂ ವೈಭವವೇ ಬೇರೆ. ಹೀಗಾಗಿ ನಮ್ಮದೇ ಆದ ವಿಶಿಷ್ಟ ಪರಂಪರೆಯುಳ್ಳ ದಸರಾ ಮಹೋತ್ಸವದಲ್ಲಿ ಬೇರೆ ಭಾಗದ ಸಂಸ್ಕೃತಿಯನ್ನು ಬಲವಂತವಾಗಿ ತುರುಕುವ ಯಾವುದೇ ಅವಶ್ಯಕತೆಯಿಲ್ಲ” ಎಂದು ಪ್ರತಾಪ್ ಸಿಂಹ ಖಡಕ್ ಆಗಿ ನುಡಿದಿದ್ದಾರೆ.
ಇದನ್ನೂ ಓದಿ: ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ಶಾಕ್: ಗಡಿಪಾರು ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ
