TOP NEWS

Crime: ಶಿಕಾರಿಪುರದಲ್ಲಿ ಬಯಲಾಯ್ತು ಒಂದು ವರ್ಷದ ಹಿಂದಿನ ಕರಾಳ ರಹಸ್ಯ

Crime Shikaripura Missing Case Twist Teen's Body Packed in Suitcase

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದಲ್ಲಿ ವರ್ಷದ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಕ್ತ ಹೆಪ್ಪುಗಟ್ಟಿಸುವ ಸತ್ಯವೊಂದು ಪೊಲೀಸರ (Crime) ತನಿಖೆಯಿಂದ ಹೊರಬಿದ್ದಿದೆ. ತಂಗಿದ್ದ ಪಿಜಿಯಲ್ಲೇ (PG) ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿಯ ಶವವನ್ನು, ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಭೀತಿಯಿಂದ ದೊಡ್ಡ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಪ್ರಪಾತಕ್ಕೆ ಎಸೆದು ಬಂದಿದ್ದ ಕೃತ್ಯ ಒಂದು ವರ್ಷದ ಬಳಿಕ ಅನಾವರಣಗೊಂಡಿದೆ. ಸಾಕ್ಷಿ ನಾಶ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಇಟ್ಟಿಗೆಹಳ್ಳಿಯ ಮುದ್ದನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾನಾಯ್ಕ, ಆತನ ಎರಡನೇ ಪತ್ನಿ ಸೌಭಾಗ್ಯ, ರಂಜಿತಾ ಹಾಗೂ ಪೀರಾನಾಯ್ಕ ಎಂಬ ನಾಲ್ವರು ಆರೋಪಿಗಳನ್ನು ಶಿಕಾರಿಪುರ ಪೊಲೀಸರು ಬಂಧಿಸಿದ್ದಾರೆ.

ಆಶ್ರಯ ನೀಡಿದ್ದ ಪಿಜಿಯಲ್ಲೇ ಹೆಣವಾದ ಬಾಲಕಿ

ಮೃತ ದುರ್ದೈವಿ ಬಾಲಕಿ ಸಂಗೀತಾಗೆ ತಾಯಿ ಇರಲಿಲ್ಲ. ತಂದೆಯೊಂದಿಗೆ ಮುನಿಸಿಕೊಂಡು ಕೆಲಸ ಹುಡುಕಿಕೊಂಡು ಶಿಕಾರಿಪುರಕ್ಕೆ ಬಂದಿದ್ದ ಆಕೆಗೆ ಸೌಭಾಗ್ಯ ತನ್ನ ಪಿಜಿಯಲ್ಲಿ ಆಶ್ರಯ ನೀಡಿದ್ದಳು. ಆರಂಭದಲ್ಲಿ ಮಗಳಂತೆ ನೋಡಿಕೊಂಡರೂ, ಬಳಿಕ ಆಕೆಯನ್ನು ಪಿಜಿಯ ಕೆಲಸದಾಳಾಗಿ ಇರಿಸಿಕೊಳ್ಳಲಾಗಿತ್ತು. ಕಳೆದ 2025ರ ಮೇ 18ರಂದು ಪಿಜಿಯಲ್ಲಿದ್ದ ರಂಜಿತಾ ಎಂಬಾಕೆಯೊಂದಿಗೆ ಸಂಗೀತಾಗೆ ಸಣ್ಣ ಜಗಳವಾಗಿತ್ತು. ಬಾಲಕಿಯು ಎಲ್ಲರ ಬಗ್ಗೆ ಚಾಡಿ ಹೇಳಿ ಮರ್ಯಾದೆ ಕಳೆಯುತ್ತಿದ್ದಾಳೆ ಎಂದು ಆರೋಪಿಸಿದ ಪಿಜಿ ಮಾಲೀಕರು, ಆಕೆಯನ್ನು ಕೆಳಗಿನ ಬ್ಯೂಟಿ ಪಾರ್ಲರ್‌ಗೆ ಕರೆಸಿಕೊಂಡು ತೀವ್ರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರು. ಇದರಿಂದ ತೀವ್ರ ಮನನೊಂದ ಬಾಲಕಿ ಅದೇ ದಿನ ಪಿಜಿಯ ರೂಮೊಂದರಲ್ಲಿ ನೇಣಿಗೆ ಶರಣಾಗಿದ್ದಳು.

ತನಿಖೆ ಹೆದರಿ ‘ಸೂಟ್‌ಕೇಸ್ ಡೆಡ್‌ಬಾಡಿ ಡೀಲ್’

ಬಾಲಕಿ ಶವವಾಗಿ ತೂಗಾಡುವುದನ್ನು ಕಂಡು ಬೆಚ್ಚಿಬಿದ್ದ ಆರೋಪಿಗಳು, ಪೊಲೀಸರಿಗೆ ವಿಷಯ ತಿಳಿದರೆ ತಮಗೆ ಸಂಕಷ್ಟ ಎದುರಾಗಬಹುದೆಂದು ಸಾಕ್ಷಿ ನಾಶದ ಸ್ಕೆಚ್ ಹಾಕಿದರು. ಬಾಲಕಿಯ ಮೃತದೇಹವನ್ನು ಗುಟ್ಟಾಗಿ ದೊಡ್ಡ ಸೂಟ್‌ಕೇಸ್‌ನೊಳಗೆ ತುರುಕಿದ ಇವರು, ಕಾರಿನಲ್ಲಿ ತಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ (ಜೋಗ ಜಲಪಾತದ ಬಳಿ) ಪ್ರಪಾತಕ್ಕೆ ಎಸೆದು ಪರಾರಿಯಾಗಿದ್ದರು. ಯಾರಿಗೂ ಸಂಶಯ ಬಾರದಿರಲು ಬಾಲಕಿಯ ಫೋನ್ ಬಚ್ಚಿಟ್ಟು, ಆಕೆ ಜೀವಂತವಾಗಿದ್ದಾಳೆಂದೇ ಬಿಂಬಿಸಿದ್ದರು.

ಇಬ್ಬರ ಜಗಳದಿಂದ ಬೀದಿಗೆ ಬಂದ ಸತ್ಯ!

ಕಳೆದ ಒಂದು ವರ್ಷದಿಂದ ಯಾರಿಗೂ ತಿಳಿಯದಿದ್ದ ಈ ಭೀಕರ ಸತ್ಯ, ಇತ್ತೀಚೆಗೆ ಆರೋಪಿಗಳಾದ ರಂಜಿತಾ ಹಾಗೂ ಪೀರಾನಾಯ್ಕ ನಡುವೆ ನಡೆದ ವೈಯಕ್ತಿಕ ಜಗಳದಿಂದಾಗಿ ಹೊರಬಿದ್ದಿದೆ. ಇವರ ಜಗಳದ ನಡುವೆ ಶವ ವಿಲೇವಾರಿಯ ಮರ್ಮ ಬಯಲಾಗುತ್ತಿದ್ದಂತೆ, ಕಳೆದ ಶುಕ್ರವಾರ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪೊಲೀಸರು ಶಂಕಿತ ರಂಜಿತಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಪಾಪದ ಪುರಾಣ ಬಿಚ್ಚಿಕೊಂಡಿದೆ.

ಪ್ರಕರಣದ ಕುರಿತು ಶಿವಮೊಗ್ಗದಲ್ಲಿ ಮಾಹಿತಿ ನೀಡಿರುವ ಎಸ್‌ಪಿ ನಿಖಿಲ್, ಬಾಲಕಿ ಆತ್ಮಹತ್ಯೆ ಮಾಡಿಕೊಂಡಾಗಲೇ ಪೊಲೀಸರಿಗೆ ತಿಳಿಸಿದ್ದರೆ ಇದು ಇಷ್ಟು ದೊಡ್ಡ ಅಪರಾಧವಾಗುತ್ತಿರಲಿಲ್ಲ. ಆದರೆ ಶವ ಮುಚ್ಚಿಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಮಾವಿನಗುಂಡಿ ಕಂದಕದಲ್ಲಿ ಶೋಧ ನಡೆಸಿದಾಗ ಸಿಕ್ಕಿರುವ ಅಸ್ಥಿಪಂಜರದ ಅವಶೇಷಗಳನ್ನು, ಅವು ಮೃತ ಬಾಲಕಿಯದ್ದೇ ಎಂದು ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಪ್ರೇಮಿಗಳ ಮದುವೆಗೆ ವಿರೋಧ: ರಕ್ಷಣೆ ಅರಸಿ ಬಂದ ನವವರನಿಗೆ ಪೊಲೀಸ್ ಠಾಣೆ ಮುಂದೆಯೇ ಇರಿದ ಮಾವ!

Leave a Reply

Your email address will not be published. Required fields are marked *