ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ ತನಿಖೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಮತ್ತು ಸಮನ್ವಯದೊಂದಿಗೆ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಹೊಸ ನಿಯಮಾವಳಿ ಜಾರಿ
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಮೂಲಕ, ಪೊಲೀಸ್ ಇಲಾಖೆಯ ವಿವಿಧ ಹಂತಗಳಲ್ಲಿ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿ, ಅಪರಾಧ ಪ್ರಕರಣಗಳ ತನಿಖಾ ವಿವರಗಳು ಹಾಗೂ ಸಾರ್ವಜನಿಕ ಪ್ರಕಟಣೆಗಳ ಕುರಿತು ಸ್ಪಷ್ಟ ನಿಯಮಾವಳಿ ಜಾರಿಗೆ ತರಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯದಾದ್ಯಂತ ಪೊಲೀಸ್ ಠಾಣೆಗಳು, ಜಿಲ್ಲಾ ಪೊಲೀಸ್ ಕಚೇರಿಗಳು, ನಗರ ಪೊಲೀಸ್ ಆಯುಕ್ತಾಲಯಗಳು ಹಾಗೂ ವಿಶೇಷ ಘಟಕಗಳು ಮಾಧ್ಯಮಗಳಿಗೆ ಮಾಹಿತಿ ಹಂಚುವ ಸಂದರ್ಭದಲ್ಲಿ ಏಕೀಕೃತ ವಿಧಾನವನ್ನು ಅನುಸರಿಸಲಿದ್ದು, ಇದರಿಂದ ತಪ್ಪು ಮಾಹಿತಿ ಹರಡುವುದನ್ನು ತಡೆಯುವ ಜೊತೆಗೆ ತನಿಖೆಯ ಗೌಪ್ಯತೆ ಕಾಪಾಡಲು ಸಹಾಯವಾಗಲಿದೆ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಏನಿದೆ ಹೊಸ ಮಾರ್ಗಸೂಚಿಯಲ್ಲಿ?
ಹೊಸ ಮಾರ್ಗಸೂಚಿಗಳ ಪ್ರಕಾರ, ಠಾಣಾ ಮಟ್ಟದಲ್ಲಿ ಪೊಲೀಸ್ ಉಪನಿರೀಕ್ಷಕರು, ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಘಟನೆಗಳಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ನಗರ ಪ್ರದೇಶಗಳಲ್ಲಿ ಪೊಲೀಸ್ ಆಯುಕ್ತರು ಹಾಗೂ ವಿಶೇಷ ಘಟಕಗಳ ಮುಖ್ಯಸ್ಥರು ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಲಿದ್ದಾರೆ.
ಅಪರಾಧ ಪ್ರಕರಣಗಳ ತನಿಖೆ, ಗುಪ್ತಚರ ಮಾಹಿತಿ, ಸಂವೇದನಾಶೀಲ ಪ್ರಕರಣಗಳು, ಸೈಬರ್ ಅಪರಾಧಗಳು, ಸಂಘಟಿತ ಅಪರಾಧ ಚಟುವಟಿಕೆಗಳು ಹಾಗೂ ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಅನುಮತಿ ಇಲ್ಲದೆ ಬಹಿರಂಗಪಡಿಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಪ್ರಕರಣದ ತನಿಖೆಗೆ ಧಕ್ಕೆಯಾಗುವ ರೀತಿಯ ಮಾಹಿತಿ, ಸಾಕ್ಷ್ಯಾಧಾರಗಳು, ಆರೋಪಿಗಳ ಹೇಳಿಕೆಗಳು, ಗುಪ್ತಚರ ಮಾಹಿತಿ, ಪ್ರಥಮ ವರ್ತಮಾನ ವರದಿ ಅಥವಾ ಕೇಸ್ ಡೈರಿಗಳಂತಹ ದಾಖಲೆಗಳನ್ನು ಅನುಮತಿಯಿಲ್ಲದೆ ಹಂಚಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮ ವೇದಿಕೆಗಳಲ್ಲಿ ಪೊಲೀಸ್ ಸಿಬ್ಬಂದಿ ಜವಾಬ್ದಾರಿಯುತ ನಡೆ ತೋರಬೇಕು ಎಂಬುದಕ್ಕೂ ಮಾರ್ಗಸೂಚಿಯಲ್ಲಿ ಒತ್ತು ನೀಡಲಾಗಿದೆ. ಪೊಲೀಸ್ ಇಲಾಖೆಯ ಅಧಿಕೃತ ನಿಲುವು ಪ್ರಕಟಿಸುವ ಅಧಿಕಾರ ನಿಗದಿತ ಅಧಿಕಾರಿಗಳಿಗೆ ಮಾತ್ರ ಇರಲಿದ ಎಂದು ಸಚಿವರು ವಿವರ ನೀಡಿದ್ದಾರೆ.
ಈ ಕ್ರಮದಿಂದ ಪೊಲೀಸ್ ಇಲಾಖೆಯ ಮಾಹಿತಿ ಹಂಚಿಕೆ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಜವಾಬ್ದಾರಿ ಮತ್ತು ವೃತ್ತಿಪರತೆ ತರಲು ಸಾಧ್ಯವಾಗಲಿದ್ದು, ಸಾರ್ವಜನಿಕರಲ್ಲಿ ವಿಶ್ವಾಸ ಮತ್ತಷ್ಟು ಬಲವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸರ್ಕಾರದ ಸ್ಪಷ್ಟ ಉದ್ದೇಶ ಜನರಿಗೆ ಸರಿಯಾದ ಮಾಹಿತಿ ತಲುಪಿಸುವುದು ಹಾಗೂ ತನಿಖೆಯ ಗೌಪ್ಯತೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಶುದ್ಧತೆಯನ್ನು ಕಾಪಾಡುವುದಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಜಲಕ್ಷಾಮದ ಭೀತಿ: ಜಲಾಶಯದ ನೀರು ನಂಬಿ ಬೆಳೆ ಇಡಬೇಡಿ ಎಂದು ಸಿಎಂ ಡಿಕೆಶಿ ಮನವಿ!
