TOP NEWS

DK Shivakumar: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರ ಬ್ರೇಕ್

cm dk shivakumar about privatizing power department and OC for apartments

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಹಾಗೂ ರಾಜಧಾನಿಯ ಅಪಾರ್ಟ್‌ಮೆಂಟ್‌ಗಳಿಗೆ ಓಸಿ ನಿಯಮ ಸಡಿಲಿಕೆ ಮಾಡುವ ಕುರಿತಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಇಂದು ಬೆಂಗಳೂರಿನಲ್ಲಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಧನ ಇಲಾಖೆ ಹಾಗೂ ಎಸ್ಕಾಂಗಳಿಗೆ ಈ ನಿಟ್ಟಿನಲ್ಲಿ ಮಹತ್ವದ ಆದೇಶಗಳನ್ನು ನೀಡಿದ್ದಾರೆ.

ವಿದ್ಯುತ್ ಸರಬರಾಜು ಖಾಸಗೀಕರಣಕ್ಕೆ ಸರ್ಕಾರದ ಆಕ್ಷೇಪ ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಸಿಎಂ, “ಪ್ರಸಿದ್ಧ ಟಾಟಾ (Tata) ಕಂಪನಿಯು ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಅರ್ಜಿ ಸಲ್ಲಿಸಿದೆಯೇ ಹೊರತು ರಾಜ್ಯ ಸರ್ಕಾರಕ್ಕಲ್ಲ. ಈ ಅರ್ಜಿಗೆ ಸಂಬಂಧಿಸಿದಂತೆ ಕೆಆರ್‌ಸಿ ನಮ್ಮ ಎಸ್ಕಾಂಗಳ (Escoms) ಅನಿಸಿಕೆಯನ್ನು ಕೇಳಿತ್ತು. ನಾನು ಈಗಾಗಲೇ ಎಲ್ಲಾ ಪವರ್ ಕಾರ್ಪೊರೇಷನ್‌ಗಳು ಹಾಗೂ ಎಸ್ಕಾಂಗಳಿಗೆ ಈ ಖಾಸಗೀಕರಣದ ಪ್ರಸ್ತಾವನೆಯನ್ನು ಕಡ್ಡಾಯವಾಗಿ ವಿರೋಧಿಸಿ ಆಕ್ಷೇಪಣೆ ಸಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಸರ್ಕಾರದ ಅಧಿಕೃತ ಮತ್ತು ಸ್ಪಷ್ಟ ನಿಲುವನ್ನು ಈಗಾಗಲೇ ಕೆಆರ್‌ಸಿಗೆ ತಲುಪಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

ಓಸಿ (OC) ಇಲ್ಲದ ಅಪಾರ್ಟ್‌ಮೆಂಟ್‌ಗಳಿಗೆ ತಾತ್ಕಾಲಿಕ ರಿಲೀಫ್ ಬೆಂಗಳೂರಿನಲ್ಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಹಾಗೂ ಸಿಸಿ (Commencement Certificate) ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ಸಿಗದೆ ಪರದಾಡುತ್ತಿದ್ದ ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಆಧರಿಸಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಓಸಿ ಹೊಂದಿಲ್ಲದ ಕಟ್ಟಡಗಳ ಮಾಲೀಕರು ವಿದ್ಯುತ್ ಸಂಪರ್ಕ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಮುಂಬರುವ ಆಗಸ್ಟ್ 15 ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಅರ್ಹರು ಈ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಜಲಕ್ಷಾಮದ ಭೀತಿ: ಜಲಾಶಯದ ನೀರು ನಂಬಿ ಬೆಳೆ ಇಡಬೇಡಿ ಎಂದು ಸಿಎಂ ಡಿಕೆಶಿ ಮನವಿ!

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಜಲಕ್ಷಾಮ ಹಾಗೂ ಆತಂಕಕಾರಿ ಬರಗಾಲದ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಉನ್ನತ ಮಟ್ಟದ ಸಂಪುಟ ಸಭೆ ನಡೆಸಿದ ಬಳಿಕ ಹೈ ಅಲರ್ಟ್ ಘೋಷಿಸಿದ್ದಾರೆ. ಇಡೀ ದೇಶದಲ್ಲೇ ಈ ಬಾರಿ ಭೀಕರ ಬರಗಾಲ ಆವರಿಸುವ ಲಕ್ಷಣಗಳಿದ್ದು, ಕರ್ನಾಟಕದ ಬಹುತೇಕ ಪ್ರಮುಖ ಜಲಾಶಯಗಳಿಗೆ ಬರುತ್ತಿದ್ದ ನೀರಿನ ಒಳಹರಿವು ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

ಜಲಾಶಯಗಳಲ್ಲಿ ಒಣಗಿದ ಒಳಹರಿವು ರಾಜ್ಯದ ಬರ ಪರಿಸ್ಥಿತಿಯ ಕುರಿತು ಕಂದಾಯ ವಿಭಾಗಗಳ ಆಧಾರದ ಮೇಲೆ ಸುದೀರ್ಘ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, “ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಬರಗಾಲದ ಕರಾಳ ಛಾಯೆ ಹರಡಿದೆ. ಕರ್ನಾಟಕದ ಜೀವನಾಡಿಗಳಂತಿರುವ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು (Inflow) ಇಲ್ಲದಂತಾಗಿದ್ದು, ಸಂಪೂರ್ಣ ಶೂನ್ಯ ಹಂತಕ್ಕೆ ತಲುಪಿದೆ. ರಾಜ್ಯಕ್ಕೆ ಅತ್ಯಂತ ಪ್ರಮುಖವಾಗಿರುವ ಕಾವೇರಿ ಜಲಾನಯನ ಪ್ರದೇಶದಲ್ಲೂ (ಕಾವೇರಿ ಬೇಸಿನ್) ನೀರಿನ ಒಳಹರಿವು ತೀರಾ ನಗಣ್ಯವಾಗಿದೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಇಡೀ ಭಾರತದಲ್ಲೇ ಈ ಬಾರಿ ಭೀಕರ ಬರಗಾಲ ತಲೆದೋರಲಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೂ ಈಗಾಗಲೇ ಮುನ್ಸೂಚನೆ ನೀಡಲಾಗಿದೆ,” ಎಂದು ಪರಿಸ್ಥಿತಿಯ ಗಂಭೀರತೆಯನ್ನು ಬಿಚ್ಚಿಟ್ಟರು.

ಅನ್ನದಾತರಿಗೆ ಸಿಎಂ ಕಟ್ಟುನಿಟ್ಟಿನ ಸಂದೇಶ: ಡ್ಯಾಂ ನೀರು ನಂಬಬೇಡಿ! ಇದೇ ವೇಳೆ ರಾಜ್ಯದ ರೈತ ಬಾಂಧವರಿಗೆ ಮಹತ್ವದ ಮನವಿ ಮಾಡಿರುವ ಮುಖ್ಯಮಂತ್ರಿಗಳು, “ಯಾರೂ ಕೂಡ ಜಲಾಶಯಗಳಲ್ಲಿ ಸದ್ಯಕ್ಕೆ ಬಾಕಿ ಇರುವ ನೀರನ್ನು ನಂಬಿಕೊಂಡು ಹೊಸದಾಗಿ ಯಾವುದೇ ಬೆಳೆಗಳನ್ನು ಬಿತ್ತಲು ಮುಂದಾಗಬೇಡಿ. ಸದ್ಯಕ್ಕೆ ಕೇವಲ ಮಳೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ಕೃಷಿ ಚಟುವಟಿಕೆ ಮಾಡಬೇಕು. ಡ್ಯಾಂನಲ್ಲಿ ನೀರಿದೆ ಎಂದು ಬೆಳೆ ಹಾಕಿದರೆ ಮುಂದೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ವರುಣದೇವ ಕೃಪೆ ತೋರಿ ಉತ್ತಮ ಮಳೆಯಾದರೆ ಮಾತ್ರ ನಾವು ರೈತರ ಬೆಳೆಗಳಿಗೆ ನೀರು ಹರಿಸಲು ಸಾಧ್ಯ,” ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

ವಿದ್ಯುತ್ ಕ್ಷಾಮ ಎದುರಿಸಲು ಮುನ್ನೆಚ್ಚರಿಕೆ ಬರಗಾಲದ ಹೊಡೆತವು ಕೇವಲ ಕುಡಿಯುವ ನೀರಿಗೆ ಮಾತ್ರವಲ್ಲದೆ ಭವಿಷ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮಕ್ಕೂ ಕಾರಣವಾಗಬಹುದು ಎಂಬುದನ್ನು ಸಿಎಂ ಪರೋಕ್ಷವಾಗಿ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಈ ಕಠಿಣ ಸವಾಲುಗಳನ್ನು ನಿಭಾಯಿಸಲು ಸರ್ಕಾರ ಈಗಿನಿಂದಲೇ ಕೌಂಟರ್ ಪ್ಲಾನ್ ರೆಡಿ ಮಾಡುತ್ತಿದೆ. ಭವಿಷ್ಯದ ಆಪತ್ತನ್ನು ಎದುರಿಸಲು ರಾಜ್ಯದಲ್ಲಿ ಇಂದಿನಿಂದಲೇ ವಿದ್ಯುತ್ ಸಂಗ್ರಹಣೆಗೆ (Power Storage) ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ ಇಂಧನ ಇಲಾಖೆ ಸಂಪೂರ್ಣ ಸಜ್ಜಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಲೋಪ ಒಪ್ಪಿಕೊಂಡ ಶಾಸಕ ರಾಯರೆಡ್ಡಿ

Leave a Reply

Your email address will not be published. Required fields are marked *