ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯು ಸಿಹಿ ಸುದ್ದಿಯೊಂದನ್ನು (Good News) ನೀಡಿದ್ದು, 2026-27ನೇ ಸಾಲಿನ ಶೈಕ್ಷಣಿಕ ವರ್ಷದ ‘ವಿದ್ಯಾ ವಿಕಾಸ’ ಯೋಜನೆಯಡಿ ಶೂ, ಸಾಕ್ಸ್ ಹಾಗೂ ಚಪ್ಪಲಿ ವಿತರಿಸಲು ಭರದ ಸಿದ್ಧತೆ ನಡೆಸಿದೆ. ಕಳೆದ ಎಂಟು ವರ್ಷಗಳಿಂದ ಜಾರಿಯಲ್ಲಿದ್ದ ಹಳೆಯ ನಿಯಮವನ್ನು ಬದಿಗೊತ್ತಿರುವ ಇಲಾಖೆ, ಈ ಬಾರಿ ಏಕರೂಪತೆ ಮತ್ತು ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಕೇಂದ್ರೀಕೃತ ಟೆಂಡರ್ ಪ್ರಕ್ರಿಯೆಯ ಮೂಲಕ ಖರೀದಿಗೆ ಮುಂದಾಗಿದೆ. ಈ ಹೊಸ ಪದ್ಧತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದ ಹಣ ಉಳಿತಾಯವಾಗಲಿದೆ.
ಬದಲಾದ ನಿಯಮ; ಕೋಟ್ಯಂತರ ರೂಪಾಯಿ ಉಳಿಯುತ್ತಾ?
2017-18ನೇ ಸಾಲಿನಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಯಾ ಶಾಲೆಗಳ ಎಸ್ಡಿಎಂಸಿ (SDMC) ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗುತ್ತಿತ್ತು. ಆದರೆ, ಈ ಬಾರಿ ಒಬ್ಬರೇ ಪ್ರಮುಖ ಸರಬರಾಜುದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮುಂಚೆ ಸರ್ಕಾರವು ಹಂತ ಹಂತವಾಗಿ 1 ರಿಂದ 5ನೇ ತರಗತಿಯ ಮಕ್ಕಳಿಗೆ ₹265, 6 ರಿಂದ 8ನೇ ತರಗತಿಗೆ ₹295 ಹಾಗೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ₹325 ನಿಗದಿಪಡಿಸಿತ್ತು. ಆದರೆ, ಪ್ರಸ್ತುತ ಜಾಗತಿಕ ಟೆಂಡರ್ನಿಂದಾಗಿ ಪ್ರತಿ ಜೊತೆಗೆ ಕೇವಲ ₹195 ದರ ನಿಗದಿಯಾಗಿದ್ದು, ಒಟ್ಟು 36.56 ಲಕ್ಷ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದ ₹104 ಕೋಟಿ ಬಜೆಟ್ನಲ್ಲಿ ಸುಮಾರು ₹30 ಕೋಟಿಯಷ್ಟು ಹಣ ಉಳಿತಾಯವಾಗುವ ನಿರೀಕ್ಷೆಯಿದೆ.
ಕರಾವಳಿ, ಮಲೆನಾಡಿನ ಮಕ್ಕಳಿಗೆ ವಿಶೇಷ ಆದ್ಯತೆ
ನಿರಂತರ ಮಳೆಯಾಗುವ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಗಾಲದ ಅವಧಿಯಲ್ಲಿ ಮಕ್ಕಳಿಗೆ ಶೂ ಧರಿಸಿ ಶಾಲೆಗೆ ಬರುವುದು ಕಷ್ಟವಾಗುತ್ತದೆ. ಇದನ್ನು ಮನಗಂಡಿರುವ ಶಿಕ್ಷಣ ಇಲಾಖೆ, ಟೆಂಡರ್ಗೂ ಮುನ್ನವೇ ಸ್ಥಳೀಯ ಶಾಲೆಗಳಿಂದ ಮಾಹಿತಿ ಪಡೆದಿದೆ. ಅದರಂತೆ ಅತಿ ಹೆಚ್ಚು ಬೇಡಿಕೆ ಇರುವ ಮಳೆ ಪೀಡಿತ ಪ್ರದೇಶಗಳ ಶಾಲೆಗಳಿಗೆ ಶೂಗಳ ಬದಲಾಗಿ ಉತ್ತಮ ಗುಣಮಟ್ಟದ ಆಲ್-ವೆದರ್ ಚಪ್ಪಲಿಗಳನ್ನು ವಿತರಿಸಲು ನಿರ್ಧರಿಸಿದೆ.
ಜುಲೈ 31ರ ಡೆಡ್ಲೈನ್; ವಿಳಂಬವಾದರೆ ಅಧಿಕಾರಿಗಳೇ ಹೊಣೆ
ಈಗಾಗಲೇ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದ್ದರೂ ಮಕ್ಕಳಿಗೆ ಶೂ ಭಾಗ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿತರಣಾ ಪ್ರಕ್ರಿಯೆಗೆ ವೇಗ ನೀಡಲು ಜಿಲ್ಲಾ, ತಾಲೂಕು ಮತ್ತು ಶಾಲಾ ಮಟ್ಟದಲ್ಲಿ ವಿಶೇಷ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಉಪನಿರ್ದೇಶಕರು (DDPI) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ನೇತೃತ್ವದ ಈ ಸಮಿತಿಗಳು ಪ್ರತಿ ಗುರುವಾರ ಇಲಾಖೆಯ ಆಯುಕ್ತಾಲಯಕ್ಕೆ ಪ್ರಗತಿ ವರದಿಯನ್ನು ಸಲ್ಲಿಸಬೇಕಿದೆ. ಅಲ್ಲದೆ, ಮಕ್ಕಳ ಶೂ ಅಳತೆಯಲ್ಲಿ ಏರುಪೇರಾದರೆ ತಕ್ಷಣ ಸರಿಪಡಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಯಾವುದೇ ಹವಾಮಾನಕ್ಕೂ ಹಾಳಾಗದ ದೀರ್ಘಕಾಲ ಬಾಳಿಕೆ ಬರುವ ಶೂಗಳನ್ನೇ ಪೂರೈಸಬೇಕು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸರಬರಾಜಾದ ನಂತರವೂ ವಿತರಣೆಯಲ್ಲಿ ವಿಳಂಬ ತೋರಿದರೆ ಆಯಾ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರಳ್ಳರ್ ವಿಕಾಸ್ ಕಿಶೋರ್ ಅವರು, ಮುಂಬರುವ ಜುಲೈ 31ರ ಒಳಗೆ ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯ ಮಕ್ಕಳ ಕೈಗೂ ಶೂ, ಸಾಕ್ಸ್ ಹಾಗೂ ಚಪ್ಪಲಿಗಳು ತಲುಪಲಿವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಫುಟ್ಪಾತ್ ಕ್ಲಿಯರೆನ್ಸ್: ಸಾರ್ವಜನಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ
