TOP NEWS

K Sudhakar: ಚಿಕ್ಕಬಳ್ಳಾಪುರದಲ್ಲಿ ಚಪ್ಪಲಿ ರಾಜಕೀಯದ ಕಿಡಿ: ಕಾರ್ಯಕರ್ತರ ಕೇಸ್‌ಗೆ ಸುಧಾಕರ್ ಸಾಥ್

K Sudhakar is ready to fight fake case against bjp and jds workers

ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಕಡೆಗೆ ಚಪ್ಪಲಿ ತೂರಲು ಯತ್ನಿಸಿದ ಪ್ರಕರಣ ಜಿಲ್ಲೆಯಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದರೆ, ಇತ್ತ ಸಂಸದ ಡಾ. ಕೆ. ಸುಧಾಕರ್ (‌K Sudhakar) ಅವರು ಈ ಜಗಳದ ಹಿನ್ನೆಲೆಯಲ್ಲಿ ಪೊಲೀಸರಿಂದ ಕಾನೂನು ಕ್ರಮ ಎದುರಿಸುತ್ತಿರುವ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಬೆಂಬಲಕ್ಕೆ ಧಾವಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್

ಮೈತ್ರಿ ಪಕ್ಷಗಳ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಪ್ರಕರಣಗಳನ್ನು ಎದುರಿಸಲು ತಾವು ಸಂಪೂರ್ಣ ಸಾಥ್ ನೀಡುವುದಾಗಿ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, “ನಮ್ಮ ಕಾರ್ಯಕರ್ತರ ಮೇಲಿನ ಸುಳ್ಳು ಕೇಸ್‌ಗಳ ವಿರುದ್ಧ ಕೋರ್ಟ್‌ನಲ್ಲಿ ಹೋರಾಡಲು ಬೇಕಾಗುವ ವಕೀಲರ ಸಂಪೂರ್ಣ ಖರ್ಚನ್ನು ನಾನೇ ವೈಯಕ್ತಿಕವಾಗಿ ನೋಡಿಕೊಳ್ಳುತ್ತೇನೆ. ಯಾರೂ ಧೃತಿಗೆಡಬೇಕಾದ ಅಗತ್ಯವಿಲ್ಲ, ನಾನು ನಿಮ್ಮೊಂದಿಗಿದ್ದೇನೆ” ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಇಡೀ ವಿವಾದಕ್ಕೆ ಪ್ರದೀಪ್ ಈಶ್ವರ್ ಅವರ ಪ್ರಚೋದನಾತ್ಮಕ ಭಾಷೆಯೇ ಕಾರಣ ಎಂದು ಸುಧಾಕರ್ ಕಿಡಿಕಾರಿದ್ದಾರೆ. ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರಂತಹ ಹಿರಿಯ ಮುಖಂಡರ ವಿರುದ್ಧ ಶಾಸಕರು ಕೀಳಾಗಿ ಮಾತನಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಅವರು, ಸಾರ್ವಜನಿಕ ರಂಗದಲ್ಲಿರುವ ಜನಪ್ರತಿನಿಧಿಗಳು ಸಂಯಮದಿಂದ ಇರಬೇಕು ಎಂದಿದ್ದಾರೆ. ಅಧಿಕಾರ ಸಿಕ್ಕ ತಕ್ಷಣ ವೇದಿಕೆಗಳ ಮೇಲೆ ತೊಡೆ ತಟ್ಟುವುದು, ಭುಜ ಎಗರಿಸುವುದು ಸುಸಂಸ್ಕೃತ ನಾಯಕನ ಲಕ್ಷಣವಲ್ಲ. ಶಾಸಕರ ಇಂತಹ ವರ್ತನೆಯಿಂದ ಇಡೀ ಕ್ಷೇತ್ರವೇ ತಲೆತಗ್ಗಿಸುವಂತಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮೈತ್ರಿ ಕಾರ್ಯಕರ್ತರ ಸಭೆ ನಡೆಸಿ ಧೈರ್ಯ ತುಂಬಿದ ಸಂಸದರು, ಸ್ಥಳೀಯ ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಗಲಾಟೆಗೆ ಪ್ರಚೋದನೆ ನೀಡಿದವರನ್ನು ಬಿಟ್ಟು, ಕೇವಲ ಅಮಾಯಕ ಕಾರ್ಯಕರ್ತರನ್ನು ಗುರಿ ಮಾಡಿಕೊಂಡು ಪ್ರಕರಣ ದಾಖಲಿಸುತ್ತಿರುವುದು ಪೊಲೀಸ್ ಇಲಾಖೆಯ ಏಕಪಕ್ಷೀಯ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಸಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸೈಡ್‌ಲೈನ್ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ವಿಶ್ಲೇಷಣೆ!

Leave a Reply

Your email address will not be published. Required fields are marked *