ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಸದ್ಯದಲ್ಲೇ ಸಾರಿಗೆ ಪ್ರಯಾಣ ಮತ್ತಷ್ಟು ದುಬಾರಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಒಂದು ಕಡೆ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕೂ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಏರಿಕೆ ಮಾಡುವ ಸ್ಪಷ್ಟ ಮುನ್ಸೂಚನೆಯನ್ನು (Shocking) ಸಾರಿಗೆ ಸಚಿವ ಬೈರತಿ ಸುರೇಶ್ ನೀಡಿದ್ದರೆ, ಮತ್ತೊಂದೆಡೆ ಖಾಸಗಿ ಬಸ್‌ಗಳ ಮಾಲೀಕರ ಒಕ್ಕೂಟವೂ ಸಹ ದರ ಹೆಚ್ಚಳವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಆರ್ಥಿಕ ನಷ್ಟದ ಸುಳಿಯಲ್ಲಿ ಕೆಎಸ್‌ಆರ್‌ಟಿಸಿ
ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಇಡೀ ದೇಶದಲ್ಲಿ ಇಂಧನ ದರಗಳು ಗಗನಕ್ಕೇರಿರುವುದರಿಂದ ಸರ್ಕಾರಿ ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಪರಿಷ್ಕರಣೆ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಸದ್ಯ ಸಾರಿಗೆ ನಿಗಮಗಳು ಸುಮಾರು 5,000 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಸಿಬ್ಬಂದಿಗೆ ಸಕಾಲಕ್ಕೆ ಸಂಬಳ ನೀಡಲು ಹಾಗೂ ಬಸ್‌ಗಳಿಗೆ ಪ್ರತಿದಿನ ಡೀಸೆಲ್ ಹಾಕಿಸಲೂ ಹಣದ ತತ್ವಾರ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಸಚಿವರು, ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ ಎಂದಿನಂತೆ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಬಿಡದಿ ಟೌನ್‌ಶಿಪ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಹಿರಂಗ ಚರ್ಚೆಯ ಸವಾಲಿಗೆ ಟಾಂಗ್ ನೀಡಿರುವ ಬೈರತಿ ಸುರೇಶ್, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೀದಿಯಲ್ಲಿ ನಿಂತು ಚರ್ಚಿಸುವುದು ರಾಜ್ಯದ ಘನತೆಗೆ ಧಕ್ಕೆ ತರುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ಬಸ್ ದರ ಏರಿಕೆ
ಇನ್ನು ಸರ್ಕಾರಿ ಬಸ್‌ಗಳ ದರ ಏರಿಕೆಯ ಚರ್ಚೆಯ ಬೆನ್ನಲ್ಲೇ, ರಾಜ್ಯಾದ್ಯಂತ ಸಂಚರಿಸುವ ಸಾರ್ವಜನಿಕ ಖಾಸಗಿ ಬಸ್‌ಗಳ ಟಿಕೆಟ್ ದರದಲ್ಲಿ ಗಣನೀಯ ಹೆಚ್ಚಳವಾಗುತ್ತಿರುವುದು ಪ್ರಯಾಣಿಕರಿಗೆ ಮತ್ತೊಂದು ಆಘಾತ ಮೂಡಿಸಿದೆ. ಇಂಧನ ಬೆಲೆ ಏರಿಕೆ, ಟೋಲ್ ಗೇಟ್‌ಗಳ ಸುಂಕ ಹೆಚ್ಚಳ ಹಾಗೂ ವಾಹನಗಳ ಬಿಡಿಭಾಗಗಳ ಮಾರುಕಟ್ಟೆ ದರ ದುಬಾರಿಯಾಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಒಕ್ಕೂಟ ಸ್ಪಷ್ಟಪಡಿಸಿದ್ದು, ಸರ್ಕಾರದ ನಿಯಮಾವಳಿಗಳಿಗೆ ಒಳಪಟ್ಟೇ ಜೂನ್ ೯ ರಿಂದ ಹೊಸ ದರಪಟ್ಟಿ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ. ಒಕ್ಕೂಟದ ತೀರ್ಮಾನದಂತೆ ಪ್ರಯಾಣದ ವೆಚ್ಚದಲ್ಲಿ ಶೇಕಡಾ ೫ ರಿಂದ ೮ ರಷ್ಟು ಹೆಚ್ಚಳವಾಗಲಿದ್ದು, ಪ್ರಮುಖವಾಗಿ ಕರಾವಳಿ ಭಾಗದ ಮಂಗಳೂರು ಮತ್ತು ಉಡುಪಿ ನಡುವಿನ ಹಳೆಯ ಪ್ರಯಾಣ ದರ ಈಗ ನೂರು ರೂಪಾಯಿಗೆ ತಲುಪಲಿದೆ. ಹಾಗೆಯೇ ಉಡುಪಿಯಿಂದ ಮಣಿಪಾಲಕ್ಕೆ ತೆರಳಲು ಕನಿಷ್ಠ ಹದಿನೈದು ರೂಪಾಯಿ ನೀಡಬೇಕಾಗುತ್ತದೆ ಮತ್ತು ಕುಂದಾಪುರ ಮಾರ್ಗದ ದರದಲ್ಲೂ ಮೂರು ರೂಪಾಯಿಗಳಷ್ಟು ಏರಿಕೆಯಾಗಲಿದೆ. ಟೈರ್ ಮರುಜೋಡಣೆ ಸೇರಿದಂತೆ ದೈನಂದಿನ ಆಡಳಿತಾತ್ಮಕ ಹಾಗೂ ತಾಂತ್ರಿಕ ನಿರ್ವಹಣಾ ವೆಚ್ಚಗಳು ಭಾರೀ ಹೊರೆಯಾಗಿ ಪರಿಣಮಿಸಿರುವುದರಿಂದ ಸಂಸ್ಥೆಗಳ ಉಳಿವಿಗೆ ಈ ಕಠಿಣ ಕ್ರಮ ಕೈಗೊಳ್ಳಬೇಕಾಯಿತು ಎಂದು ಮಾಲೀಕರ ಸಂಘಟನೆಗಳು ಹೇಳಿದ್ದು, ಈ ಹಠಾತ್ ದರ ಏರಿಕೆಯು ನಿತ್ಯ ಪ್ರಯಾಣಿಸುವ ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.
