ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ವ್ಯಾಪ್ತಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕೃತ್ಯದ ಸಣ್ಣ ಎಳೆಯನ್ನು (Crime) ಪೊಲೀಸರು ಬಿಚ್ಚಿಟ್ಟಿದ್ದಾರೆ. ಆರೋಪಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಹೊಂದಿದ್ದ ಲಕ್ಷಾಂತರ ರೂಪಾಯಿ ಸಾಲ ಮತ್ತು ಆಸ್ತಿಯ ಜಗಳವೇ ಈ ರಕ್ತಪಾತಕ್ಕೆ ಪ್ರಮುಖ ಪ್ರೇರಣೆ ಎಂಬ ಅಂಶ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಪೋಷಕರು ಹಣಕಾಸಿನ ನೆರವು ನೀಡದ ಕೋಪಕ್ಕೆ ಇಡೀ ಕುಟುಂಬವನ್ನೇ ಮುಗಿಸಲಾಗಿದೆ ಎಂದು ಶಂಕಿಸಲಾಗಿದೆ.
ಹೆತ್ತವರ ನಿರಾಕರಣೆಯೇ ಕೊಲೆಯಲ್ಲಿ ಅಂತ್ಯ! ಈ ಜಂಟಿ ದಾಳಿಯಲ್ಲಿ ಶ್ವೇತಾಳ ತಂದೆ ಸೋಮಸುಂದರ್ (55), ತಾಯಿ ಮುತ್ತುಲಕ್ಷ್ಮಿ (48) ಮತ್ತು ಸಹೋದರಿ ಸುಪ್ರಿಯಾ (20) ಕೊಲೆಯಾಗಿದ್ದಾರೆ. ತನಿಖಾಧಿಕಾರಿಗಳ ಮಾಹಿತಿಯಂತೆ, ಪ್ರಿಯಕರನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಶ್ವೇತಾ ತನಗಿದ್ದ 30 ಲಕ್ಷ ರೂ. ಸಾಲದ ಹೊರೆಯನ್ನು ಇಳಿಸಲು ಪೋಷಕರ ಮೇಲೆ ಒತ್ತಡ ಹೇರಿದ್ದಳು. ಆದರೆ ಪೋಷಕರು ಇದಕ್ಕೆ ಒಪ್ಪದಿದ್ದಾಗ, ಮನೆಯ ಆಸ್ತಿಯಲ್ಲಿ ತನಗೆ ಬರಬೇಕಾದ ಪಾಲನ್ನು ತಕ್ಷಣವೇ ನೀಡುವಂತೆ ಹಠ ಹಿಡಿದಿದ್ದಳು. ಈ ವಿಷಯವಾಗಿ ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ನಿರಂತರವಾಗಿ ವಾಕ್ಸಮರ ನಡೆಯುತ್ತಿತ್ತು ಎನ್ನಲಾಗಿದೆ.
ಮರಣಶಾಸನ ಬರೆದ ತಂದೆಯ ಆಖೈರು ಹೇಳಿಕೆ ಘಟನೆ ನಡೆದ ದಿನದಂದು ಸಹ ಇದೇ ಸಾಲ ಮತ್ತು ಆಸ್ತಿ ಹಂಚಿಕೆಯ ನೆಪದಲ್ಲಿ ಶ್ವೇತಾ ಮನೆಯವರೊಂದಿಗೆ ದೊಡ್ಡ ಗಲಾಟೆ ಮಾಡಿದ್ದಾಳೆ. ಜಗಳ ವಿಕೋಪಕ್ಕೆ ಹೋದಾಗ ಶ್ವೇತಾ ಹಾಗೂ ಆಕೆಯ ಬಾಯ್ಫ್ರೆಂಡ್ ಕೆನತ್ ಇಬ್ಬರೂ ಸೇರಿ ಮನೆಯವರ ಮೇಲೆ ಚಾಕುವಿನಿಂದ ಬರ್ಬರವಾಗಿ ಇರಿದಿದ್ದಾರೆ.
ಸಾವಿನ ದಡದಲ್ಲೂ ಸತ್ಯ ಹೇಳಿದ ತಂದೆ: ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ನರಳಾಡುತ್ತಿದ್ದ ಸೋಮಸುಂದರ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಆದರೆ, ಮರಣ ಹೊಂದುವ ಮುನ್ನ ಪೊಲೀಸರಿಗೆ ನೀಡಿದ ಗಂಭೀರ ಹೇಳಿಕೆಯಲ್ಲಿ, ತಮ್ಮದೇ ಮಗಳು ಮತ್ತು ಆಕೆಯ ಪ್ರಿಯಕರ ಈ ಕ್ರೂರ ಕೃತ್ಯ ಎಸಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ, ಈ ಹಿಂದೆ ಶ್ವೇತಾಳ ಪ್ರೇಮ ವಿವಾಹ ಹಾಗೂ ಲಿವ್-ಇನ್ ಜೀವನ ಶೈಲಿಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿ, ಆಕೆಗೆ ಬುದ್ಧಿ ಹೇಳಲು ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿತ್ತು. ಆದರೆ ಪ್ರಸ್ತುತ ತನಿಖೆಯಲ್ಲಿ ಇದರ ಹಿಂದೆ ಕೇವಲ ಪ್ರೇಮ ವಿವಾದ ಮಾತ್ರವಲ್ಲದೆ, ಬೃಹತ್ ಸಾಲದ ಹಣ ಹಾಗೂ ಆಸ್ತಿಯ ದುರಾಸೆಯೂ ಇರುವುದು ಸಾಬೀತಾಗಿದೆ.
ಕೊಲೆಗಡುಕ ಪ್ರೇಮಿಗಳ ಬೆನ್ನುಬಿದ್ದ ನಾಲ್ಕು ಪೊಲೀಸ್ ತಂಡಗಳು ಹೆತ್ತವರ ಹಾಗೂ ತಂಗಿಯ ರಕ್ತ ಹರಿಸಿ ಸದ್ಯ ಪರಾರಿಯಾಗಿರುವ ಹಂತಕ ಜೋಡಿಯಾದ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ. ಈ ತ್ರಿವಳಿ ಹತ್ಯಾಕಾಂಡದ ಆರೋಪಿಗಳನ್ನು ಬಂಧಿಸಲು ಈಗಾಗಲೇ ನಾಲ್ಕು ಪ್ರತ್ಯೇಕ ವಿಶೇಷ ತನಿಖಾ ತಂಡಗಳನ್ನು (SIT) ರಚಿಸಲಾಗಿದ್ದು, ರಾಜ್ಯದಾದ್ಯಂತ ಹಾಗೂ ನೆರೆರಾಜ್ಯಗಳಲ್ಲೂ ತೀವ್ರ ಶೋಧ ನಡೆಸಲಾಗುತ್ತಿದೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಮೂಲಕ ಗಾಳ; ವಂಚಕಿ ಸೀರಿಯಲ್ ನಟಿ ವನಿತಾ ಪೊಲೀಸರ ವಶಕ್ಕೆ
