TOP NEWS

Assault: ಚಿಕ್ಕೋಡಿಯಲ್ಲಿ ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಪೋಷಕರಿಂದ ಕಾಮುಕನಿಗೆ ಸಾರ್ವಜನಿಕವಾಗಿ ಧರ್ಮದೇಟು!

teacher who assault students parents hit them in Belagavi

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ತಲ್ಲಣ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಹತ್ತನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕವಾಗಿ (Assault) ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನಿಗೆ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಹಿಡಿದು ಶಾಲಾ ಆವರಣದಲ್ಲೇ ಚೆನ್ನಾಗಿ ಥಳಿಸಿ ಸಾರ್ವಜನಿಕವಾಗಿ ಧರ್ಮದೇಟು ನೀಡಿರುವ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಶ್ರೀಶೈಲ್ ಕುಂಬಾರ ಎಂಬಾತನೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಕಿರಾತಕ.

ಪಾಸ್ ಮಾಡುವ ಆಮಿಷ ಒಡ್ಡಿ ಕಾಮಕ್ರೀಡೆ; ಐದಕ್ಕೂ ಹೆಚ್ಚು ಬಾಲಕಿಯರಿಗೆ ಸಂಕಷ್ಟ

ಆರೋಪಿ ಶಿಕ್ಷಕ ಶ್ರೀಶೈಲ್ ಕುಂಬಾರ, ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕಗಳನ್ನು ನೀಡಿ ಪಾಸ್ ಮಾಡಿಸುವುದಾಗಿ ವಿದ್ಯಾರ್ಥಿನಿಯರಿಗೆ ಆಮಿಷ ಒಡ್ಡುತ್ತಿದ್ದ ಎನ್ನಲಾಗಿದೆ. ಇದನ್ನೇ ದಾಳವಾಗಿಸಿಕೊಂಡು ಶಾಲೆಯ ಬಿಡುವಿನ ಸಮಯದಲ್ಲಿ ಬಾಲಕಿಯರನ್ನು ಜನರಿಲ್ಲದ ಕೊಠಡಿ ಹಾಗೂ ಶೌಚಾಲಯದ ಕಡೆಗೆ ಬಲವಂತವಾಗಿ ಕರೆದೊಯ್ದು ಲೈಂಗಿಕವಾಗಿ ಪೀಡಿಸುತ್ತಿದ್ದ ಎಂಬ ಗಂಭೀರ ಸಂಗತಿ ಬಹಿರಂಗವಾಗಿದೆ. ಈತನ ವಿಕೃತ ನಡವಳಿಕೆಯಿಂದ ಶಾಲೆಯ ಸುಮಾರು ಐದಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನೊಂದಿದ್ದು, ಕೊನೆಗೂ ಈ ದೌರ್ಜನ್ಯದ ವಿಷಯ ಪೋಷಕರ ಗಮನಕ್ಕೆ ಬಂದಿದೆ.

ಶಾಲೆಗೆ ನುಗ್ಗಿ ಗ್ರಾಮಸ್ಥರ ಆಕ್ರೋಶ; ಆರೋಪಿ ಈಗ ಪೊಲೀಸ್ ವಶ

ತಮ್ಮ ಹೆಣ್ಣುಮಕ್ಕಳಿಗೆ ಆಗಿರುವ ಘೋರ ಅನ್ಯಾಯವನ್ನು ಕೇಳಿ ರೊಚ್ಚಿಗೆದ್ದ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಮಂಗಳವಾರ ಶಾಲೆಗೆ ನುಗ್ಗಿದ್ದಾರೆ. ಅಲ್ಲಿ ಹೆದರಿ ಕುಳಿತಿದ್ದ ಶಿಕ್ಷಕನನ್ನು ಹೊರಗೆ ಎಳೆದು ತಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಶಾಲೆಯ ಮೈದಾನದಲ್ಲೇ ಸಾರ್ವಜನಿಕವಾಗಿ ಜಖಂ ಮಾಡಿದ್ದಾರೆ. ಈ ಘಟನೆಯಿಂದಾಗಿ ಇಡೀ ಶಾಲಾ ಆವರಣದಲ್ಲಿ ಕೆಲಕಾಲ ಭಾರಿ ಗದ್ದಲ ಹಾಗೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಲಾಟೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ ಪೊಲೀಸರು ಜನಾಕ್ರೋಶದಿಂದ ಶಿಕ್ಷಕನನ್ನು ಪಾರು ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ. ಆರೋಪಿ ಶ್ರೀಶೈಲ್ ಕುಂಬಾರನ ವಿರುದ್ಧ ಪೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಬೆಳಗಾವಿ ಕ್ರೈಂ ಟ್ವಿಸ್ಟ್: ಆಸ್ಪತ್ರೆಯಲ್ಲೇ ನಿವೃತ್ತ ಯೋಧನಿಗೆ ಸ್ಲೋ ಪಾಯ್ಸನ್?

ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದಲ್ಲಿ ನಡೆದಿದ್ದ ಮಾಜಿ ಸೈನಿಕ ಸಂದೀಪ ಮಾಂಜರಿ ಅವರ ನಿಗೂಢ ಸಾವಿನ ಪ್ರಕರಣವು ಇಡೀ ರಾಜ್ಯವೇ ಬೆಚ್ಚಿಬೀಳುವಂತಹ (Crime) ತಿರುವು ಪಡೆದುಕೊಂಡಿದೆ. ಕೇವಲ ಎರಡು ಕೋಟಿ ರೂಪಾಯಿ ಭಾರಿ ಮೊತ್ತದ ಇನ್ಶೂರೆನ್ಸ್ ಹಣವನ್ನು ಲೂಟಿ ಮಾಡಲು ಮತ್ತು ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ತಾವೇ ಸ್ಕೆಚ್ ಹಾಕಿ ಕೊಂದಿದ್ದಾರೆ ಎಂಬ ಗಂಭೀರ ಆರೋಪ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೇಳಿಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಮಣ್ಣು ಮಾಡಲಾಗಿದ್ದ ಶವವನ್ನು ಬರೋಬ್ಬರಿ ಮೂರು ತಿಂಗಳ ನಂತರ ಕಬರ್ರಿನಿಂದ ಹೊರತೆಗೆದು ತನಿಖೆ ನಡೆಸಿರುವುದು ಸದ್ಯ ಗಡಿ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.

ಆಸ್ಪತ್ರೆಯಲ್ಲಿ ವಿಷ ನೀಡಿ ಕೊಲೆ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸಂದೀಪ ಅವರು ಕೆಲ ತಿಂಗಳ ಹಿಂದೆ ಹುಕ್ಕೇರಿ ಜಾತ್ರೆ ಮುಗಿಸಿಕೊಂಡು ಊರಿಗೆ ಮರಳುವಾಗ ಭೀಕರ ರಸ್ತೆ ಅಪಘಾತಕ್ಕೊಳಗಾಗಿದ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆಸ್ಪತ್ರೆಯ ಬೆಡ್ ಮೇಲಿದ್ದ ಸಂದೀಪ ಅವರು ಚಿಕಿತ್ಸೆಗೆ ಸ್ಪಂದಿಸದೆ ಹಠಾತ್ತನೆ ಕೊನೆಯುಸಿರೆಳೆದಿದ್ದರು. ಆರಂಭದಲ್ಲಿ ಇದನ್ನು ಕೇವಲ ರಸ್ತೆ ಅಪಘಾತದಿಂದ ಸಂಭವಿಸಿದ ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ದಿನಗಳು ಉರುಳಿದಂತೆ ಸಂದೀಪ ಅವರ ಪತ್ನಿ ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕನ ನಡವಳಿಕೆಯ ಮೇಲೆ ಮೃತನ ಮನೆಯವರಿಗೆ ತೀವ್ರ ಅನುಮಾನ ಮೂಡಲಾರಂಭಿಸಿದೆ.

ಅಂತಿಮವಾಗಿ ಸಂದೀಪ ಅವರ ಸಾವಿನ ಹಿಂದೆ ಪಕ್ಕಾ ಪ್ಲಾನ್ಡ್ ಮರ್ಡರ್ ಸಂಚು ಅಡಗಿದೆ ಎಂದು ಕುಟುಂಬಸ್ಥರು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಸಂದೀಪನನ್ನು ಮುಗಿಸಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ ಆರೋಪಿಗಳು, ಆಸ್ಪತ್ರೆಯಲ್ಲೇ ರಹಸ್ಯವಾಗಿ ವಿಷ ಪ್ರಾಶನ ಮಾಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸದ್ಯ ಈ ಪ್ರಕರಣದ ಆಳಕ್ಕೆ ಇಳಿದಿರುವ ಬೆಳಗಾವಿ ಉಪವಿಭಾಗಾಧಿಕಾರಿ (AC) ಶ್ರವಣಕುಮಾರ ಅವರ ಸಮ್ಮುಖದಲ್ಲಿ ಹೂತಿದ್ದ ದೇಹದ ಅವಶೇಷಗಳನ್ನು ಮರಳಿ ಸಂಗ್ರಹಿಸಿ, ವೈಜ್ಞಾನಿಕ ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಈ ಲ್ಯಾಬ್ ವರದಿ ಬಂದ ಬಳಿಕವಷ್ಟೇ ನಿವೃತ್ತ ಸೈನಿಕನಿಗೆ ವಿಷ ಉಣಿಸಿ ಕೊಂದ ಪತ್ನಿಯ ಅಸಲಿ ಮುಖವಾಡ ಕಳಚಲಿದ್ದು, ಇಡೀ ಗ್ರಾಮದಲ್ಲಿ ಸದ್ಯ ಆತಂಕ ಮತ್ತು ಉದ್ವಿಗ್ನ ವಾತಾವರಣ ಮನೆಮಾಡಿದೆ.

ಇದನ್ನು ಓದಿ: ಬೆಂಗಳೂರಿನ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್

Leave a Reply

Your email address will not be published. Required fields are marked *