ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ (CM Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ಹೈಪ್ರೊಫೈಲ್ ವಿಚ್ಛೇದನ ಅರ್ಜಿ ವಿಚಾರಣೆಯು ಸೋಮವಾರ (ಜೂನ್ 15) ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳಿಲ್ಲದೆ ಮುಕ್ತಾಯಗೊಂಡಿದೆ. ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಸಿಎಂ ವಿಜಯ್ ಹಾಗೂ ಸಂಗೀತಾ ಇಬ್ಬರೂ ಬೆಳಿಗ್ಗೆ 10:30ಕ್ಕೆ ಆರಂಭವಾದ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದರು. ಇಬ್ಬರ ಉಪಸ್ಥಿತಿಯ ನಡುವೆಯೂ ಉಭಯ ಪಕ್ಷಗಳ ನಡುವೆ ಯಾವುದೇ ಒಪ್ಪಂದ ಅಥವಾ ಪ್ರಮುಖ ಬೆಳವಣಿಗೆಗಳು ನಡೆಯದ ಹಿನ್ನೆಲೆಯಲ್ಲಿ, ಕೋರ್ಟ್ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ವಿಜಯ್ ಮೇಲೆ ಆರೋಪಗಳ ಸುರಿಮಳೆ
ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಮುಕ್ತಿ ಹಾಡಲು ಬಯಸಿ ಸಂಗೀತಾ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ. 1954ರ ವಿಶೇಷ ವಿವಾಹ ಕಾಯ್ದೆಯಡಿ ಸಲ್ಲಿಕೆಯಾಗಿರುವ ಈ ಅರ್ಜಿಯಲ್ಲಿ ವಿಜಯ್ ವಿರುದ್ಧ ಪರಸ್ತ್ರೀ ಸಂಬಂಧ ಹಾಗೂ ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. 2021ರ ಏಪ್ರಿಲ್ನಲ್ಲಿ ವಿಜಯ್ ಅವರು ಸಹ-ನಟಿಯೊಬ್ಬರ ಜೊತೆ ಹೊಂದಿದ್ದ ಅಕ್ರಮ ಸಂಬಂಧ ತಮಗೆ ತಿಳಿಯಿತು ಎಂದು ಸಂಗೀತಾ ಹೇಳಿದ್ದಾರೆ. ಅರ್ಜಿಯಲ್ಲಿ ನಟಿಯ ಹೆಸರನ್ನು ಉಲ್ಲೇಖಿಸದಿದ್ದರೂ, ಚಿತ್ರರಂಗದಲ್ಲಿ ವಿಜಯ್ ಹೆಸರು ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಸಂಬಂಧವನ್ನು ಕೊನೆಗಾಣಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಅದನ್ನು ಮೀರಿ ಆ ನಟಿಯೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಪ್ರವಾಸಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದರು. ಅಲ್ಲದೆ ಆ ನಟಿ ವಿಜಯ್ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಾಗ ವಿಜಯ್ ಯಾವುದೇ ಆಕ್ಷೇಪ ಎತ್ತದ ಕಾರಣ ತಮಗೆ ಹಾಗೂ ಮಕ್ಕಳಿಗೆ ಸಾರ್ವಜನಿಕವಾಗಿ ತೀವ್ರ ಅವಮಾನ ಮತ್ತು ಮಾನಸಿಕ ಯಾತನೆಯಾಗಿದೆ ಎಂದು ಸಂಗೀತಾ ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ಹಣಕಾಸಿನ ಕಿರುಕುಳ ನೀಡಿದ್ದರು ಎಂದಿದ್ದ ಸಂಗೀತಾ
ದಾಂಪತ್ಯದಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ಮತ್ತಷ್ಟು ವಿವರ ನೀಡಿರುವ ಸಂಗೀತಾ, ವಿಜಯ್ ತಮ್ಮೊಂದಿಗೆ ಮಾತನಾಡುತ್ತಿರಲಿಲ್ಲ ಹಾಗೂ ಸದಾ ತಿರಸ್ಕಾರದಿಂದ ಕಾಣುತ್ತಿದ್ದರು ಎಂದು ದೂರಿದ್ದಾರೆ. ವಿಜಯ್ ತಮ್ಮ ಸಾರ್ವಜನಿಕ ಹಾಗೂ ರಾಜಕೀಯ ಜೀವನದ ಕಡೆಗೆ ಮಾತ್ರ ಗಮನ ಹರಿಸಿ, ಮನೆಯ ವಾತಾವರಣವನ್ನು ಅತ್ಯಂತ ಕಠಿಣಗೊಳಿಸಿದ್ದರಿಂದ ತಾವೊಬ್ಬರೇ ಪ್ರತ್ಯೇಕವಾಗಿ ಬದುಕುವಂತಾಯಿತು ಎಂದು ಅವರು ಕಾನೂನಾತ್ಮಕವಾಗಿ ಆರೋಪಿಸಿದ್ದಾರೆ. ಇದರ ಜೊತೆಗೆ ವಿಜಯ್ ತಮಗೆ ತೀವ್ರ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದರು, ಮುಕ್ತ ಓಡಾಟಕ್ಕೆ ತಡೆ ಒಡ್ಡಿದ್ದರು ಹಾಗೂ ಮನೆಯ ದೈನಂದಿನ ಸೌಲಭ್ಯಗಳನ್ನು ಕಡಿತಗೊಳಿಸಿದ್ದರು ಎಂದು ಹಣಕಾಸಿನ ಕಿರುಕುಳದ ಆರೋಪವನ್ನೂ ಮಾಡಿದ್ದಾರೆ. 2024ರ ಆಗಸ್ಟ್ನಿಂದ 2025ರ ಫೆಬ್ರವರಿ ಅವಧಿಯಲ್ಲಿ ಲೀಗಲ್ ನೋಟಿಸ್ ಹಾಗೂ ವೈಯಕ್ತಿಕ ಮಾತುಕತೆಗಳ ಮೂಲಕ ಸಂಸಾರವನ್ನು ಸರಿಪಡಿಸಿಕೊಳ್ಳಲು ಸಂಗೀತಾ ಪ್ರಯತ್ನ ನಡೆಸಿದ್ದರು. ಇಬ್ಬರ ನಡುವಿನ ಕೊನೆಯ ಭೇಟಿ 2025ರ ನವೆಂಬರ್ 9 ರಂದು ನಡೆದಿದ್ದರೂ ಯಾವುದೇ ಫಲ ನೀಡಿಲ್ಲ. ಹೀಗಾಗಿ ಈ ಮದುವೆ ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ಸರಿಪಡಿಸಲಾರದಷ್ಟು ಮುರಿದುಬಿದ್ದಿದೆ ಎಂದು ಸಂಗೀತಾ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಏಪ್ರಿಲ್ 20 ರಂದು ನಿಗದಿಯಾಗಿದ್ದ ಮೊದಲ ವಿಚಾರಣೆಗೆ ವಿಜಯ್ ಮತ್ತು ಸಂಗೀತಾ ಇಬ್ಬರೂ ಗೈರಾಗಿದ್ದು, ಕೇವಲ ತಮ್ಮ ವಕೀಲರನ್ನು ಕಳುಹಿಸಿದ್ದರು. ಇಬ್ಬರ ಹೈಪ್ರೊಫೈಲ್ ಹಿನ್ನೆಲೆ ಮತ್ತು ಭದ್ರತೆಯ ಕಾರಣ ನೀಡಿ ಜೂನ್ ವಿಚಾರಣೆಗೆ ವರ್ಚುವಲ್ (ಆನ್ಲೈನ್) ಮೂಲಕ ಹಾಜರಾಗಲು ವಕೀಲರು ವಿನಂತಿಸಿದ್ದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಜೂನ್ 15 ರಂದು ಇಬ್ಬರೂ ಖುದ್ದಾಗಿ ಕೋರ್ಟ್ಗೆ ಬರಲೇಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿತ್ತು. 1990ರ ದಶಕದ ಕೊನೆಯಲ್ಲಿ ಆರಂಭವಾದ ಇವರ ಪ್ರೀತಿಯ ಪಯಣ ಈಗ ಅಂತ್ಯದ ಹಂತ ತಲುಪಿದೆ. ಆಗ ಲಂಡನ್ ನಿವಾಸಿಯಾಗಿದ್ದ ಸಂಗೀತಾ, ವಿಜಯ್ ನಟನೆಯ 1996ರ ಸೂಪರ್ ಹಿಟ್ ಚಿತ್ರ ‘ಪೂವೇ ಉನಕ್ಕಾಗ’ ನೋಡಿ ಅವರ ಅಭಿಮಾನಿಯಾಗಿದ್ದರು. ನಂತರ ಇಬ್ಬರ ನಡುವೆ ಪ್ರೀತಿ ಬೆಳೆದು 1998ರಲ್ಲಿ ಯುಕೆನಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬಳಿಕ 1999ರಲ್ಲಿ ಚೆನ್ನೈನಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಾಂಪ್ರದಾಯಿಕ ವಿವಾಹವಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ (2000) ಎಂಬ ಪುತ್ರ ಹಾಗೂ ದಿವ್ಯಾ ಸಾಶಾ (2005) ಎಂಬ ಪುತ್ರಿ ಇದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಕರಣ: ಕೋರ್ಟ್ ಟ್ರಯಲ್ ಆರಂಭ; ಜೈಲಿನಿಂದಲೇ ಭಾಗಿಯಾದ ದರ್ಶನ್, ಪವಿತ್ರಾ ಗೌಡ
