TOP NEWS

CT Ravi: ಧರ್ಮಸ್ಥಳದ ವಿರುದ್ಧ ₹200 ಕೋಟಿ ಷಡ್ಯಂತ್ರ ಆರೋಪ: ತನಿಖೆಯನ್ನು ತಕ್ಷಣವೇ ಸಿಬಿಐಗೆ ವಹಿಸಲು ಸಿ.ಟಿ. ರವಿ ಬಹಿರಂಗ ಪತ್ರ!

ct ravi open letter to cm regarding dharmasthala case

ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಪವಿತ್ರ ಹಾಗೂ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡಲು ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚದ ಬೃಹತ್ ಷಡ್ಯಂತ್ರ ನಡೆದಿದೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಈ ಸಂಚಿನ ಆಳ ಮತ್ತು ವ್ಯಾಪ್ತಿ ಅತ್ಯಂತ ವಿಸ್ತಾರವಾಗಿರುವುದರಿಂದ, ಪ್ರಕರಣದ ಸಮಗ್ರ ತನಿಖೆಯನ್ನು ತಕ್ಷಣವೇ ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐಗೆ (CBI) ಒಪ್ಪಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ನ್ಯಾಯಾಲಯದ ಅರ್ಜಿಯಲ್ಲಿ ಪ್ರಕಾಶ್ ರಾಜ್ ಸೇರಿದಂತೆ ಪ್ರಮುಖರ ಹೆಸರು!

ಇತ್ತೀಚೆಗೆ ಮಾನ್ಯ ಉಚ್ಚ ನ್ಯಾಯಾಲಯದ (High Court) ಮುಂದೆ ಸಲ್ಲಿಕೆಯಾಗಿರುವ ಅರ್ಜಿಯೊಂದು ಈ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಮಾಧ್ಯಮಗಳ ವರದಿ ಹಾಗೂ ನ್ಯಾಯಾಲಯದ ಮುಂದಿರುವ ಕಡತಗಳನ್ನು ಉಲ್ಲೇಖಿಸಿ ಸಿ.ಟಿ. ರವಿ ಅವರು ಪತ್ರದಲ್ಲಿ ಜಂಟಿ ಆಕ್ರೋಶ ಹೊರಹಾಕಿದ್ದಾರೆ. ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿರುವ ಜಾಲದಲ್ಲಿ ಪ್ರಖ್ಯಾತ ನಟ ಪ್ರಕಾಶ್ ರಾಜ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ್‌ಗೌಡ, ಜಯಂತ್ ಹಾಗೂ ಪ್ರಮುಖ ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್ ಮತ್ತು ದಿನೇಶ್ ಅವರ ಹೆಸರುಗಳು ಕೇಳಿಬಂದಿವೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

200 ಕೋಟಿ ಫಂಡಿಂಗ್ ಹಿಂದಿರುವ ಅಸಲಿ ಕಿಂಗ್‌ಪಿನ್ ಯಾರು?

ಕ್ಷೇತ್ರದ ವಿರುದ್ಧ ಸಾರ್ವಜನಿಕರಲ್ಲಿ ಮತ್ತು ಭಕ್ತರಲ್ಲಿ ಗೊಂದಲ ಹಾಗೂ ಅಪನಂಬಿಕೆ ಮೂಡಿಸಲು ಇಷ್ಟೊಂದು ಬೃಹತ್ ಪ್ರಮಾಣದ ಆರ್ಥಿಕ ಸಂಪನ್ಮೂಲ ಬಳಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಿ.ಟಿ. ರವಿ, “ಧರ್ಮಸ್ಥಳದಂತಹ ಸಮಾಜಮುಖಿ ಸಂಸ್ಥೆಯ ಗೌರವಕ್ಕೆ ಧಕ್ಕೆ ತರಲು ಇಷ್ಟೊಂದು ಭಾರಿ ಮೊತ್ತದ ಹಣ ಹರಿದುಬಂದಿದ್ದು ಎಲ್ಲಿಂದ? ಇದರ ಹಿಂದಿರುವ ಅಸಲಿ ಸೂತ್ರಧಾರಿಗಳು ಯಾರು? ಇದು ಕೇವಲ ದೇಶೀಯ ಮಟ್ಟದ ದುಷ್ಟ ಆಲೋಚನೆಯೇ ಅಥವಾ ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆಯೇ? ಎಂಬ ನೈಜ ಸತ್ಯ ಸಾರ್ವಜನಿಕವಾಗಿ ಹೊರಬರಬೇಕಿದೆ” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು: ಅಕ್ರಮ ವಲಸೆ ತಡೆಯದ ಅಮಿತ್ ಶಾ ಅಸಮರ್ಥ

Leave a Reply

Your email address will not be published. Required fields are marked *