ಬೆಂಗಳೂರು: ಇಡೀ ರಾಜ್ಯವನ್ನೇ ನಡುಗಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆ ಇಂದಿನಿಂದ ಮಹತ್ವದ ಹಂತಕ್ಕೆ ತಲುಪಿದೆ. ನಟ ದರ್ಶನ್, (Actor Darshan) ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ವಿರುದ್ಧದ ಅಧಿಕೃತ ಕೋರ್ಟ್ ವಿಚಾರಣೆ (ಟ್ರಯಲ್) ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಇಂದಿನಿಂದ ಚಾಲನೆ ಪಡೆದುಕೊಂಡಿದೆ.
ಬೆಂಗಳೂರಿನ ಸಿಸಿಹೆಚ್-59 ನ್ಯಾಯಾಲಯದ ಪ್ರಮುಖ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರ ನೇತೃತ್ವದಲ್ಲಿ ಇಂದಿನ ಕಲಾಪ ಜರುಗಿತು. ಈ ಹಿಂದೆ ಪ್ರಕರಣದ ತನಿಖೆ ನಡೆಸುತ್ತಿದ್ದ ನ್ಯಾಯಾಲಯದಿಂದ ಎಲ್ಲಾ ಪ್ರಮುಖ ಕಡತಗಳು ಹಾಗೂ ಸಾಕ್ಷ್ಯಾಧಾರಗಳ ದಾಖಲೆಗಳನ್ನು ಅಧಿಕೃತವಾಗಿ ಹೊಸ ಕೋರ್ಟ್‌ಗೆ ವರ್ಗಾಯಿಸಲಾಗಿದ್ದು, ಇಂದಿನಿಂದ ವಿಚಾರಣಾ ಪ್ರಕ್ರಿಯೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ.
ಭದ್ರತೆಯ ನಡುವೆ ವರ್ಚುವಲ್ ಹಾಜರಾತಿ
ಸುರಕ್ಷತೆಯ ದೃಷ್ಟಿಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಮುಖ ಆರೋಪಿಗಳಿಗೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿತ್ತು. ಬದಲಿಗೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ದರ್ಶನ್ ಹಾಗೂ ಪವಿತ್ರಾ ಗೌಡ ಆನ್‌ಲೈನ್ ಮೂಲಕವೇ ವಿಚಾರಣೆಗೆ ಮುಖಾಮುಖಿಯಾದರು. ಇನ್ನು ಈ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಕೆಲವು ಆರೋಪಿಗಳು ಕೋರ್ಟ್‌ಗೆ ಖುದ್ದಾಗಿ ಆಗಮಿಸಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.
ನಿರಾಸಕ್ತಿಯಲ್ಲಿ ದರ್ಶನ್; ಆತಂಕವಿಲ್ಲದೆ ಪವಿತ್ರಾ ಗೌಡ!
ವಿಡಿಯೋ ಕಾನ್ಫರೆನ್ಸ್ ಪರದೆಯ ಮೇಲೆ ನೀಲಿ ಬಣ್ಣದ ಪುಲ್-ಓವರ್ ಧರಿಸಿ ಪ್ರತ್ಯಕ್ಷರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಾವಭಾವ ನೆರೆದಿದ್ದವರ ಗಮನ ಸೆಳೆಯಿತು. ವಿಚಾರಣೆಯುದ್ದಕ್ಕೂ ದರ್ಶನ್ ಮುಖದಲ್ಲಿ ತೀವ್ರ ಬೇಸರ ಹಾಗೂ ನಿರಾಸಕ್ತಿ ಎದ್ದು ಕಾಣುತ್ತಿತ್ತು ಎನ್ನಲಾಗಿದೆ.
ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಮತ್ತೊಬ್ಬ ಪ್ರಮುಖ ಆರೋಪಿ ಪವಿತ್ರಾ ಗೌಡ ಕಂಡುಬಂದರು. ಜೈಲಿನ ಮಹಿಳಾ ಬ್ಯಾರಕ್‌ನ ಪ್ರತ್ಯೇಕ ಸೆಲ್‌ನಿಂದ ವರ್ಚುವಲ್ ಆಗಿ ಕಲಾಪ ವೀಕ್ಷಿಸಿದ ಅವರ ಮುಖದಲ್ಲಿ ಯಾವುದೇ ಆತಂಕದ ಗೆರೆಗಳಿರಲಿಲ್ಲ. ದರ್ಶನ್ ತೀವ್ರ ಅಸಮಾಧಾನದಿಂದ ಕುಳಿತಿದ್ದರೆ, ಪವಿತ್ರಾ ಗೌಡ ಮಾತ್ರ ಯಾವುದೇ ಗಲಿಬಿಲಿ ಇಲ್ಲದೆ ಫುಲ್ ಹ್ಯಾಪಿ ಮೂಡ್‌ನಲ್ಲಿ ಕೋರ್ಟ್ ಪ್ರಕ್ರಿಯೆಗಳನ್ನು ಎದುರಿಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.
ಜೈಲಿನಲ್ಲೇ ಹೊಸ ಹವ್ಯಾಸ ಬೆಳೆಸಿಕೊಂಡ ದರ್ಶನ್-ಪವಿತ್ರಾ ಗೌಡ: ಕಾದಂಬರಿ ಓದಿನಲ್ಲಿ ‘ದಾಸ’, ಆತ್ಮಕಥೆ ಬರೆಯುತ್ತಿದ್ದಾರೆ ಪವಿತ್ರಾ!
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲಿನ ಕೋಣೆಯಲ್ಲೇ ತಮಗಾಗಿ ಹೊಸ ಹವ್ಯಾಸಗಳನ್ನು ಕಂಡುಕೊಂಡಿದ್ದಾರೆ.
ಕಾನೂನು ಹೋರಾಟದ ನಡುವೆ ಜೈಲಿನಲ್ಲಿ ಕಾಲ ಕಳೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ನಟ ದರ್ಶನ್ ಈಗ ಪುಸ್ತಕಗಳ ಮೊರೆ ಹೋಗಿದ್ದಾರೆ. ಸಹ ಕೈದಿಗಳೊಂದಿಗೆ ಬ್ಯಾರಕ್ ಹಂಚಿಕೊಂಡಿರುವ ಅವರು ವಾರಕ್ಕೆ ಕನಿಷ್ಠ 2 ರಿಂದ 3 ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಇತ್ತ ಪ್ರಕರಣದ ಪ್ರಮುಖ ಆರೋಪಿಯಾದ ಪವಿತ್ರಾ ಗೌಡ ಬರವಣಿಗೆಯಲ್ಲಿ ಬ್ಯುಸಿಯಾಗಿದ್ದು, ಜೈಲಿನಲ್ಲೇ ಕುಳಿತು ತಮ್ಮ ‘ಆತ್ಮಕಥೆ’ (Autobiography) ಬರೆಯುತ್ತಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮತ್ತೆ ಜೈಲು ಪಾಲಾಗಿದ್ದ ನಟ!
ರೇಣುಕಾಸ್ವಾಮಿ ಪ್ರಕರಣ ನಡೆದು ಈಗ ಎರಡು ವರ್ಷಗಳು ಕಳೆಯುತ್ತಾ ಬಂದಿದ್ದು, ಕಾನೂನು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. 2024ರ ಜೂನ್ ತಿಂಗಳಲ್ಲಿ ಮೈಸೂರಿನಲ್ಲಿ ಬಂಧಿತರಾಗಿದ್ದ ನಟ ದರ್ಶನ್, ಆ ಬಳಿಕ ವೈದ್ಯಕೀಯ ಕಾರಣಗಳನ್ನು ನೀಡಿ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಈ ಜಾಮೀನನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಜಾಮೀನನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ದರ್ಶನ್ ಸೇರಿದಂತೆ ಏಳು ಜನ ಆರೋಪಿಗಳು ಮತ್ತೆ ಕಂಬಿ ಎಣಿಸುವಂತಾಗಿದ್ದು, ಸದ್ಯ ಜೈಲಿನಲ್ಲೇ ದಿನ ದೂಡುತ್ತಿದ್ದಾರೆ.
ಐವರು ಆರೋಪಿಗಳ ಜಾಮೀನು ಎತ್ತಿಹಿಡಿದ ಹೈಕೋರ್ಟ್
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಪ್ರಕರಣದ ಇತರೆ ಆರೋಪಿಗಳಾದ ವಿನಯ್, ಪವನ್, ರಾಘವೇಂದ್ರ, ನಂದೀಶ್ ಮತ್ತು ಧನರಾಜ್‌ಗೆ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಬೇಕೆಂದು ಕೋರಿ ಕಾಮಾಕ್ಷಿಪಾಳ್ಯ ಪೊಲೀಸರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠವು ಜೂನ್ 10 ರಂದು ಆದೇಶ ಪ್ರಕಟಿಸಿದ್ದು, ಪೊಲೀಸರ ಮನವಿಯನ್ನು ತಿರಸ್ಕರಿಸಿದೆ. ಆ ಮೂಲಕ ಈ ಐವರು ಆರೋಪಿಗಳ ಜಾಮೀನನ್ನು ಕೋರ್ಟ್ ಕಾಯ್ದುಕೊಂಡಿದೆ. ಆದರೆ, ಪ್ರಮುಖ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡಗೆ ಸದ್ಯಕ್ಕೆ ಜೈಲೇ ಗತಿಯಾಗಿದ್ದು, ಕಂಬಿ ಹಿಂದೆಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಮುಂದುವರಿದಿದೆ.
