ಬಳ್ಳಾರಿ: ದೇಶದ ರಾಜಕೀಯ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ದಿನ ಪ್ರಧಾನ ಮಂತ್ರಿಯಾಗಿ ದೇಶ ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಅವರ ಅಭೂತಪೂರ್ವ ಮೈಲಿಗಲ್ಲನ್ನು ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಅವರ ಕುಟುಂಬವು ವಿಶೇಷ ರೀತಿಯಲ್ಲಿ ಆಚರಿಸಿದೆ. ಜನಾರ್ದನ ರೆಡ್ಡಿ ಅವರ ಧರ್ಮಪತ್ನಿ ಲಕ್ಷ್ಮಿ ಅರುಣಾ ಅವರು ತಮ್ಮ ಹುಟ್ಟುಹಬ್ಬದ ಸಡಗರದ ನಡುವೆಯೇ, ಪ್ರಧಾನಿ ಮೋದಿಯವರ ಈ ಐತಿಹಾಸಿಕ ದಾಖಲೆಯನ್ನು ಸ್ಮರಿಸುವ ಸಲುವಾಗಿ ಕೈಗಳ ಮೇಲೆ ಮೋದಿಯವರ ಮುಖದ ಮೆಹಂದಿ ಬಿಡಿಸಿಕೊಂಡು ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ವಿಶೇಷವಾಗಿ ಮೋದಿಗೆ ಗೌರವ ಸಲ್ಲಿಸಿದ ಕುಟುಂಬ
ಬಳ್ಳಾರಿಯ ತಮ್ಮ ನಿವಾಸದಲ್ಲಿ ಸರಳವಾಗಿ ಜನ್ಮದಿನ ಆಚರಿಸಿಕೊಂಡ ಲಕ್ಷ್ಮಿ ಅರುಣಾ ಅವರು, ಈ ವಿಶೇಷ ದಿನವನ್ನು ದೇಶದ ಪ್ರಧಾನಿಗೆ ಗೌರವ ಸಲ್ಲಿಸಲು ಬಳಸಿಕೊಂಡಿದ್ದಾರೆ. ತಮ್ಮ ಹಸ್ತದ ಮೇಲೆ ಬಿಜೆಪಿಯ ಚಿಹ್ನೆಯಾದ ಕಮಲದ ಹೂವು, ದೇಶದ ಸ್ವಾತಂತ್ರ್ಯದ ಸಂಕೇತವಾಗಿ ’75 ವರ್ಷ’ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಕರ್ಷಕ ಕಲಾಕೃತಿಯನ್ನು ಮದರಂಗಿ ಮೂಲಕ ಮೂಡಿಸಿಕೊಂಡಿದ್ದಾರೆ. ದೇಶಭಕ್ತಿ ಮತ್ತು ರಾಜಕೀಯ ಅಭಿಮಾನದ ಸಂಕೇತವಾಗಿ ಕೈಯಲ್ಲಿ ಅರಳಿರುವ ಈ ಮೆಹಂದಿಯ ದೃಶ್ಯಗಳನ್ನು ಶಾಸಕ ಜನಾರ್ದನ ರೆಡ್ಡಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ.
ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಸತತವಾಗಿ ಅತಿ ದೀರ್ಘಕಾಲ ಪ್ರಧಾನಿ ಹುದ್ದೆಯಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ನರೇಂದ್ರ ಮೋದಿಯವರು ಹೊಸ ಇತಿಹಾಸ ಬರೆದಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಅವರ ಸತತ ಆಡಳಿತದ ದಾಖಲೆಯನ್ನು ಹಿಂದಿಕ್ಕಿದ್ದ ಮೋದಿ, ಈಗ ಸುದೀರ್ಘ ಅವಧಿಗೆ ಸತತವಾಗಿ ದೇಶದ ಚುಕ್ಕಾಣಿ ಹಿಡಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಅಪ್ರತಿಮ ಕೀರ್ತಿಗೆ ಭಾಜನರಾಗಿದ್ದಾರೆ.
ಪ್ರಧಾನಿ ಮೋದಿಯವರ ಈ ಅಭೂತಪೂರ್ವ ಯಶಸ್ಸಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಜಾಲತಾಣಗಳ ಮೂಲಕ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. “ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಸತತವಾಗಿ ದೀರ್ಘಾವಧಿಗೆ ಜನರಿಂದ ಆಶೀರ್ವದಿಸಲ್ಪಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಡೀ ಜೀವನವನ್ನು ದೇಶಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಮೋದಿ ಅವರ ಮುಂಬರುವ ಪ್ರತಿಯೊಂದು ದೇಶಪರ ಕಾರ್ಯಗಳು ಯಶಸ್ವಿಯಾಗಲಿ. ಭಗವಂತ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಮತ್ತಷ್ಟು ಶಕ್ತಿಯನ್ನು ಕರುಣಿಸಲಿ” ಎಂದು ರೆಡ್ಡಿ ತಮ್ಮ ಪೋಸ್ಟ್‌ನಲ್ಲಿ ಆಶಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
