ಅಮೃತಸರ: ಪಂಜಾಬ್ನ ಭಾರತ-ಪಾಕಿಸ್ತಾನ ಗಡಿಯಾದ ಅಟ್ಟಾರಿಯಲ್ಲಿ ಭಾನುವಾರ (ಜೂನ್ 7) ಒಂದು ಅಪರೂಪದ ಮತ್ತು ರೋಮಾಂಚನಕಾರಿ ಸಂಗೀತ ಸಂಜೆ ಸಾಕ್ಷಿಯಾಯಿತು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರು ಅಟ್ಟಾರಿ ಗಡಿಯ ಜಂಟಿ ಚೆಕ್ಪೋಸ್ಟ್ (ಜೆಸಿಪಿ) ಸ್ಟೇಡಿಯಂನಲ್ಲಿ ನಡೆದ ‘ಬೀಟಿಂಗ್ ರಿಟ್ರೀಟ್’ ಕಾರ್ಯಕ್ರಮದ ವೇಳೆ ಮೊದಲ ಬಾರಿಗೆ ಲೈವ್ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದರು. ‘ಜೈ ಹೋ – ಎ ಮ್ಯೂಸಿಕಲ್ ಸಲ್ಯೂಟ್ ಟು ದಿ ಬ್ರೇವ್ಹಾರ್ಟ್ಸ್’ ಹೆಸರಿನಲ್ಲಿ ಆಯೋಜನೆಗೊಂಡಿದ್ದ ಈ ವಿಶೇಷ ಸಂಗೀತ ಕಾರ್ಯಕ್ರಮವು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಭಾರತೀಯ ಸಶಸ್ತ್ರ ಪಡೆಗಳ ವೀರ ಯೋಧರಿಗೆ ಅರ್ಪಿತವಾಗಿತ್ತು. ಈ ಅಭೂತಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ ಸಾವಿರಾರು ಪ್ರೇಕ್ಷಕರು ನೆರೆದಿದ್ದರು.
ಸಿನಿಮಾ ರಿಲೀಸ್ ಹಿನ್ನಲೆ ವಿಶೇಷ ಕಾರ್ಯಕ್ರಮ
ಮುಂಬರುವ ಬಾಲಿವುಡ್ ಚಿತ್ರ ‘ಮೈ ವಾಪಸ್ ಆವುಂಗಾ’ ಚಿತ್ರದ ಪ್ರಚಾರದ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಹಿನ್ನೆಲೆಯನ್ನು ಹೊಂದಿರುವ ಈ ಸಿನಿಮಾ, ಇತಿಹಾಸದ ಅತಿ ದೊಡ್ಡ ವಲಸೆಯ ಸಂದರ್ಭದಲ್ಲಿ ನಡೆದ ಪ್ರೀತಿ, ವಿಯೋಗ ಮತ್ತು ಹಂಬಲದ ನೈಜ ಕಥೆಗಳಿಂದ ಪ್ರೇರಿತವಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಇಮ್ತಿಯಾಜ್ ಅಲಿ, ಉದ್ಯಮಿ ಅನನ್ಯಾ ಬಿರ್ಲಾ, ನಟ ವೇದಾಂತ್ ರೈನಾ ಮತ್ತು ನಿರ್ಮಾಪಕ ಮೋಹಿತ್ ಚೌಧರಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಗಡಿಯಲ್ಲಿ ದೇಶ ಕಾಯುವ ಬಿಎಸ್ಎಫ್ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಚಿತ್ರದ ಮುಂಬರುವ ಮ್ಯೂಸಿಕ್ ಆಲ್ಬಮ್ ಅನ್ನು ಭಾರತೀಯ ಯೋಧರ ಶೌರ್ಯ ಮತ್ತು ಬಲಿದಾನಕ್ಕೆ ಅರ್ಪಿಸಲಾಯಿತು.
ಸಂಗೀತ ಕಾರ್ಯಕ್ರಮವನ್ನು ಆರಂಭಿಸಿದ ಎ.ಆರ್. ರೆಹಮಾನ್, ಮೊದಲು ‘ಚಂದಾ ಸೂರಜ್ ಲಖೋ ತಾರೆ’ ಗೀತೆಯನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ತದನಂತರ ‘ಮೈ ವಾಪಸ್ ಆವುಂಗಾ’ ಚಿತ್ರದ ಹಾಡುಗಳ ಗಾಯನ ನಡೆಯಿತು. ಗಾಯಕಿ ನಿಲಂಜನಾ ಘೋಷ್ ಮತ್ತು ನಟ ವೇದಾಂತ್ ರೈನಾ ಅವರು ‘ಮಸ್ಕಾರಾ’ ಗೀತೆಯನ್ನು ಹಾಡಿದರೆ, ಖ್ಯಾತ ಗಾಯಕ ಮೋಹಿತ್ ಚೌಹಾಣ್ ಅವರು ಪೂಜಾ ತಿವಾರಿ ಮತ್ತು ನರ್ಗಿಸ್ ಅವರೊಂದಿಗೆ ಸೇರಿ ‘ಇಷ್ಕ್ ಮಸ್ತಾನಾ’ ಗೀತೆಯನ್ನು ಪ್ರಸ್ತುತಪಡಿಸಿದರು. ಇಡೀ ಕಾರ್ಯಕ್ರಮದ ಹೈಲೈಟ್ ಆಗಿ ಮೂಡಿಬಂದ ರೆಹಮಾನ್ ಅವರ ಐಕಾನಿಕ್ ದೇಶಭಕ್ತಿ ಗೀತೆ ‘ಮಾ ತುಜೆ ಸಲಾಮ್’ ಪ್ರದರ್ಶನದೊಂದಿಗೆ ಈ ಮ್ಯೂಸಿಕಲ್ ಸಂಜೆ ಸಂಪೂರ್ಣಗೊಂಡಿತು. ಈ ವೇಳೆ ಇಡೀ ಕ್ರೀಡಾಂಗಣ ದೇಶಭಕ್ತಿಯ ಘೋಷಣೆಗಳಿಂದ ಪ್ರತಿಧ್ವನಿಸಿತು.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ನಿರ್ದೇಶಕ ಇಮ್ತಿಯಾಜ್ ಅಲಿ, ಅಟ್ಟಾರಿ ಗೇಟ್ನ ಜೆಸಿಪಿ ಸ್ಟೇಡಿಯಂನಲ್ಲಿ ಎ.ಆರ್. ರೆಹಮಾನ್ ಅವರ ಲೈವ್ ಪ್ರದರ್ಶನ ನಡೆಸಿರುವುದು ಅತ್ಯಂತ ವಿಶಿಷ್ಟ ಮತ್ತು ಮಾಂತ್ರಿಕ ಕ್ಷಣವಾಗಿದೆ. ಇದು ನಮ್ಮ ರಾಷ್ಟ್ರೀಯ ಭಾವನೆ ಹಾಗೂ ಗಡಿಯಲ್ಲಿರುವ ಬಿಎಸ್ಎಫ್ ಮತ್ತು ಭಾರತೀಯ ಸೇನೆಯ ಯೋಧರ ಶೌರ್ಯಕ್ಕೆ ಸಲ್ಲಿಸಿದ ಗೌರವವಾಗಿದೆ. 1947ರ ದೇಶ ವಿಭಜನೆಯ ಸಮಯದಲ್ಲಿ ಕೇವಲ ಮನೆಗಳು ಮತ್ತು ಜೀವಗಳು ಮಾತ್ರ ನಷ್ಟವಾಗಲಿಲ್ಲ, ಜನರ ಹೃದಯಗಳೂ ಒಡೆದಿದ್ದವು. ಆ ಹಿನ್ನೆಲೆಯನ್ನು ಇಟ್ಟುಕೊಂಡು ಸಿದ್ಧವಾಗಿರುವ ‘ಮೈ ವಾಪಸ್ ಆವುಂಗಾ’ ಚಿತ್ರದ ಮೂಲಕ ನಾವು ಪ್ರೀತಿಯ ಸಂದೇಶವನ್ನು ಸಾರಲು ಬಯಸುತ್ತೇವೆ ಎಂದರು.
ಅಂದಹಾಗೆ, ಬಹುನಿರೀಕ್ಷಿತ ‘ಮೈ ವಾಪಸ್ ಆವುಂಗಾ’ ಚಿತ್ರದಲ್ಲಿ ಜನಪ್ರಿಯ ನಟ ದಿಲ್ಜಿತ್ ದೋಸಾಂಜ್, ಹಿರಿಯ ನಟ ನಾಸೀರ್ವುದ್ದೀಬ್ ಶಾ, ಶರ್ವರಿ ಮತ್ತು ವೇದಾಂತ್ ರೈನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ಇರ್ಷಾದ್ ಕಾಮಿಲ್ ಸಾಹಿತ್ಯ ಬರೆದಿದ್ದಾರೆ. ಬಿರ್ಲಾ ಸ್ಟುಡಿಯೋಸ್, ಅಪ್ಲಾಸ್ ಎಂಟರ್ಟೈನ್ಮೆಂಟ್ ಮತ್ತು ವಿಂಡೋ ಸೀಟ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಜೂನ್ 12, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟಿಪ್ಸ್ ಮ್ಯೂಸಿಕ್ ಸಂಸ್ಥೆಯು ಇದರ ಆಡಿಯೋ ಹಕ್ಕುಗಳನ್ನು ಹೊಂದಿದೆ.
ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ಫೋಟೋ ವೈರಲ್ ಪ್ರಕರಣ: ಸೈಬರ್ ಪೊಲೀಸರಿಂದ ತನಿಖೆ ಚುರುಕು
