TOP NEWS

DK Shivakumar: ಕಾಲ ಕೂಡಿ ಬಂತು, ಕನಸು ನನಸಾಯ್ತು: ಡಿಕೆಶಿ ಹಳೆಯ ಭಗವದ್ಗೀತೆ ಶ್ಲೋಕದ ವಿಡಿಯೋ ವೈರಲ್!

dk shivakumar Bhagavat Geeta video viral

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಜವಾಬ್ದಾರಿ ವಹಿಸಿಕೊಳ್ಳುವ ಐತಿಹಾಸಿಕ ಕ್ಷಣ ಹತ್ತಿರವಾಗುತ್ತಿದ್ದಂತೆ, ಅವರ ದೈವಚಿಂತನೆ ಮತ್ತು ಆಧ್ಯಾತ್ಮಿಕ ನಿಲುವಿನ ಕುರಿತ ಚರ್ಚೆಗಳು ಮುಂಚೂಣಿಗೆ ಬಂದಿವೆ. ವಿಶೇಷವಾಗಿ ಅವರು ಈ ಹಿಂದೆ ನಡೆಸಿದ್ದ ಸಂದರ್ಶನವೊಂದರ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜಕೀಯದ ಏಳುಬೀಳುಗಳು ಹಾಗೂ ಸಿಎಂ ಗದ್ದುಗೆಯ ಬಗ್ಗೆ ಅಂದು ಅವರು ಆಡಿದ್ದ ಭವಿಷ್ಯದ ಮಾತುಗಳು ಇಂದು ನಿಜವಾಗಿರುವುದನ್ನು ಕಂಡು ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ.

ಶುಭ ಮುಹೂರ್ತವನ್ನು ಯಾರೂ ತಡೆಯಲು ಸಾಧ್ಯವಿಲ್ಲ!

ಅಂದು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಡಿ.ಕೆ.ಶಿವಕುಮಾರ್ ಅವರು ಕಾಲದ ಮಹಿಮೆಯನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದರು.

“ಜೀವನದಲ್ಲಿ ನಮಗೆ ಒಳ್ಳೆಯ ಕಾಲ ಒದಗಿ ಬರಬೇಕಾದರೆ ಅದನ್ನು ಯಾರಿಂದಲೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಆಯಾ ಘಳಿಗೆ ಮತ್ತು ಮುಹೂರ್ತ ನಿಗದಿತ ಸಮಯಕ್ಕೆ ಬಂದೇ ತೀರುತ್ತದೆ. ನಾವು ಕೇವಲ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಾ ಸಾಗಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ ‘ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ತತ್ವವನ್ನು ನಾನು ನಂಬುತ್ತೇನೆ. ಅಂದರೆ, ಫಲಿತಾಂಶವನ್ನು ದೇವರಿಗೆ ಬಿಟ್ಟು ನಾವು ಕೇವಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಡಿಕೆಶಿ ನುಡಿದಿದ್ದರು.

ಕಾಲ ಕೂಡಿ ಬಂದಾಗ ಎಲ್ಲವೂ ತಾನಾಗಿಯೇ ಒದಗಿ ಬರುತ್ತದೆ ಎಂಬುದಕ್ಕೆ ಡಿಕೆಶಿ ಅವರ ಇಂದಿನ ಯಶಸ್ಸೇ ಸಾಕ್ಷಿ ಎಂದು ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ಹಳೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮುಗಿಬಿದ್ದು ಶೇರ್ ಮಾಡುತ್ತಿದ್ದಾರೆ.

ಇಂದು ಸಂಜೆ 4.05 ಕ್ಕೆ ನೂತನ ಸಿಎಂ ಪಟ್ಟಾಭಿಷೇಕ

ದಶಕಗಳ ರಾಜಕೀಯ ಪರಿಶ್ರಮದ ನಂತರ ಡಿ.ಕೆ.ಶಿವಕುಮಾರ್ ಅವರ ಪಾಲಿನ ಆ ಸುದಿನ ಇಂದು ಸಾಕಾರಗೊಳ್ಳುತ್ತಿದೆ. ಇಂದು ಸಂಜೆ ಸರಿಯಾಗಿ 4.05 ರ ನಿಖರವಾದ ಶುಭ ಮುಹೂರ್ತದಲ್ಲಿ ಲೋಕಭವನದ ಗಾಜಿನಮನೆಯಲ್ಲಿ ಆಯೋಜಿಸಲಾಗಿರುವ ಭವ್ಯ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದ ನಿಯಮಾವಳಿಗಳ ಪ್ರಕಾರ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರು ನೂತನ ಸಿಎಂ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಲಿದ್ದಾರೆ. ಇದರೊಂದಿಗೆ ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲಿದೆ.

ಇದನ್ನೂ ಓದಿ; ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಿಕೆಶಿ ರಾಜಕೀಯ ಸೌಹಾರ್ದತೆ: ತಾಯಿ, ದೊಡ್ಡಗೌಡರು ಹಾಗೂ ಬಿಎಸ್‌ವೈ ಆಶೀರ್ವಾದ ಪಡೆದ ನೂತನ ಮುಖ್ಯಮಂತ್ರಿ

Leave a Reply

Your email address will not be published. Required fields are marked *