TOP NEWS

DK Shivakumar: ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಿಕೆಶಿ ರಾಜಕೀಯ ಸೌಹಾರ್ದತೆ: ತಾಯಿ, ದೊಡ್ಡಗೌಡರು ಹಾಗೂ ಬಿಎಸ್‌ವೈ ಆಶೀರ್ವಾದ ಪಡೆದ ನೂತನ ಮುಖ್ಯಮಂತ್ರಿ

DK Shivakumar takes blessings of mother and dh devegowda bsy

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ (DK Shivakumar) ಅವರು ಹಿರಿಯರ ಆಶೀರ್ವಾದ ಪಡೆಯುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ. ರಾಜ್ಯದ ಅತ್ಯುನ್ನತ ಆಡಳಿತ ಚುಕ್ಕಾಣಿ ಹಿಡಿಯುವ ಮುನ್ನ ಅವರು ತಮ್ಮ ತಾಯಿ ಗೌರಮ್ಮ ಅವರ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು. ಮಗ ದೇಶದ ಪ್ರಭಾವಿ ಹುದ್ದೆಯೊಂದನ್ನು ಅಲಂಕರಿಸುತ್ತಿರುವ ಈ ಸಂಭ್ರಮದ ಕ್ಷಣದಲ್ಲಿ ತಾಯಿ ಗೌರಮ್ಮ ಅವರು ಆರತಿ ಬೆಳಗಿ, ಸಿಹಿ ತಿನಿಸಿ ಮಗನನ್ನು ಮನಸಾರೆ ಹರಸಿದರು.

ದೇವೇಗೌಡರ ನಿವಾಸಕ್ಕೆ ನಡೆದುಕೊಂಡೇ ಹೋದ ನಿಯೋಜಿತ ಸಿಎಂ

ಅಧಿಕಾರ ಗ್ರಹಣಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಡಿ.ಕೆ. ಶಿವಕುಮಾರ್ ಅವರು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಅಪರೂಪದ ಹಾಗೂ ಸೌಹಾರ್ದಯುತ ನಡೆ ಇಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ, ಅವರು ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ವಿಶೇಷವೆಂದರೆ, ಹಿರಿಯ ಮುತ್ಸದ್ದಿ ದೇವೇಗೌಡರ ಮನೆಗೆ ಡಿಕೆಶಿ ಖುದ್ದಾಗಿ ನಡೆದುಕೊಂಡೇ ಹೋಗುವ ಮೂಲಕ ವಿಶಿಷ್ಟ ಗೌರವ ಸಲ್ಲಿಸಿದರು. ದಶಕಗಳ ಹಿಂದೆ ಕನಕಪುರ ಮತ್ತು ಸಾತನೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಣದಲ್ಲಿ ತಮಗೆ ಮೊದಲ ರಾಜಕೀಯ ಎದುರಾಳಿಯಾಗಿದ್ದ ದೊಡ್ಡಗೌಡರ ಮನೆಗೆ ನಡೆದುಕೊಂಡು ಹೋಗಿ ಭೇಟಿಯಾದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದೊಡ್ಡಗೌಡರ ಕಾಲಿಗೆ ಬಿದ್ದು ನಮಸ್ಕರಿಸಿದ ಡಿಕೆಶಿ

ದೇವೇಗೌಡರ ಮನೆಗೆ ತಲುಪುತ್ತಿದ್ದಂತೆ ಅತ್ಯಂತ ವಿನಯದಿಂದ ವರ್ತಿಸಿದ ಡಿ.ಕೆ. ಶಿವಕುಮಾರ್, ಹಿರಿಯರಾದ ದೊಡ್ಡಗೌಡರ ಕಾಲಿಗೆ ಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದರು. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಸಹ ನೂತನ ಮುಖ್ಯಮಂತ್ರಿಯ ಬೆನ್ನು ತಟ್ಟಿ, ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡುವಂತೆ ಮನಃಪೂರ್ವಕವಾಗಿ ಹರಸಿ ಶುಭ ಹಾರೈಸಿದರು.

ಬಿಎಸ್‌ವೈ ನಿವಾಸದಲ್ಲಿ ಆತ್ಮೀಯ ಆಲಿಂಗನ, ದೇವರ ಮನೆಗೆ ನಮಸ್ಕಾರ

ಇದಕ್ಕೂ ಮುನ್ನ ಬೆಂಗಳೂರಿನ ಕಾವೇರಿ ನಿವಾಸದ ಬಳಿ ಇರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಯಡಿಯೂರಪ್ಪ ಅವರು ಡಿಕೆಶಿ ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು, ಆತ್ಮೀಯವಾಗಿ ಆಲಂಗಿಸಿ ಹೊಸ ಜವಾಬ್ದಾರಿಗೆ ಶುಭ ಕೋರಿದರು. ಬಿಎಸ್‌ವೈ ನಿವಾಸದ ದೇವರ ಮನೆಗೆ ತೆರಳಿ ಕೈಮುಗಿದು ಪ್ರಾರ್ಥಿಸಿದ ಡಿ.ಕೆ. ಶಿವಕುಮಾರ್ ಅವರಿಗೆ, ಯಡಿಯೂರಪ್ಪ ಅವರು ಶಾಲು ಹೊದಿಸಿ, ಹೂಗುಚ್ಛ ನೀಡಿ ಸನ್ಮಾನಿಸಿದರು.

ಚುನಾವಣಾ ಕಣ ಹಾಗೂ ಪಕ್ಷ ರಾಜಕಾರಣದ ವೈಷಮ್ಯಗಳನ್ನು ಬದಿಗಿಟ್ಟು, ಅಧಿಕಾರ ವಹಿಸಿಕೊಳ್ಳುವ ಮುನ್ನ ರಾಜ್ಯದ ಇಬ್ಬರು ಧೀಮಂತ ಹಿರಿಯ ನಾಯಕರ ಮನೆಗೆ ತೆರಳಿ ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್ ಅವರ ಈ ಸೌಹಾರ್ದಯುತ ನಡೆ ಸದ್ಯ ಕರ್ನಾಟಕ ರಾಜಕೀಯ ವಲಯದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಬ್ಬರಿಗಷ್ಟೇ ಡಿಸಿಎಂ ಪಟ್ಟ? ಸಚಿವ ಸ್ಥಾನಕ್ಕಾಗಿ ಯತೀಂದ್ರ ಸಿದ್ದರಾಮಯ್ಯ ಭಾರಿ ಬೇಡಿಕೆ!

Leave a Reply

Your email address will not be published. Required fields are marked *