TOP NEWS

UT Khader: ಡಿಜಿಟಲ್ ಪಥದತ್ತ ಕರ್ನಾಟಕ ವಿಧಾನಮಂಡಲ: ಇನ್ಮುಂದೆ ಶಾಸಕರು ಹೈಟೆಕ್, ಕಲಾಪಕ್ಕೆ ಸಿಗಲಿದೆ ಐಪ್ಯಾಡ್ ಸ್ಪರ್ಶ!

UT Khader announced paperless Karnataka assembly sessions

ಮಂಗಳೂರು: ಕರ್ನಾಟಕದ ಶಾಸನಸಭೆಯ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಕ ಬದಲಾವಣೆಯೊಂದು ಬರಲಿದ್ದು, ಮುಂಬರುವ ಆರು ತಿಂಗಳಲ್ಲಿ ಉಭಯ ಸದನಗಳ ಕಲಾಪಗಳು ಸಂಪೂರ್ಣವಾಗಿ ಕಾಗದ ರಹಿತ (Paperless) ಆಗಲಿವೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ (UT Khader) ಪ್ರಕಟಿಸಿದ್ದಾರೆ. ಇನ್ಮುಂದೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ದಪ್ಪಗಿನ ಕಾಗದದ ಫೈಲ್‌ಗಳ ಬದಲಾಗಿ, ವಿಶೇಷ ಸಾಫ್ಟ್‌ವೇರ್ ಒಳಗೊಂಡಿರುವ ಅತ್ಯಾಧುನಿಕ ಐಪ್ಯಾಡ್‌ಗಳನ್ನು ಬಳಸಲಿದ್ದಾರೆ. ಈ ಹೊಸ ತಂತ್ರಜ್ಞಾನದಿಂದಾಗಿ ಪ್ರತಿವರ್ಷ ಮುದ್ರಣ ಕಾರ್ಯ ಹಾಗೂ ಸಾಗಾಟಕ್ಕಾಗಿ ಖರ್ಚಾಗುತ್ತಿದ್ದ ಕೋಟ್ಯಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಲಿದ್ದು, ಪರಿಸರ ಪೂರಕ ಆಡಳಿತಕ್ಕೆ ಹೊಸ ಶಕ್ತಿ ಸಿಗಲಿದೆ.

ಕೇಂದ್ರ-ರಾಜ್ಯ ಜಂಟಿ ಸಹಭಾಗಿತ್ವ, ₹130 ಕೋಟಿ ಹೂಡಿಕೆ: ಈ ಮಹತ್ವಾಕಾಂಕ್ಷಿ ಡಿಜಿಟಲೀಕರಣ ಪ್ರಕ್ರಿಯೆಗಾಗಿ ಕರ್ನಾಟಕ ವಿಧಾನಮಂಡಲವು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್’ (NeVA) ಯೋಜನೆಯೊಂದಿಗೆ ಕೈಜೋಡಿಸಿದ್ದು, ಅಧಿಕೃತ ಒಡಂಬಡಿಕೆಗೆ ಸಹಿ ಹಾಕಿದೆ. ‘ನೆವಾ’ ಮತ್ತು ರಾಜ್ಯದ ಉನ್ನತ ಮಟ್ಟದ ಸಮಿತಿಯು ಈ ಯೋಜನೆಯ ಜಾರಿಯ ಉಸ್ತುವಾರಿ ವಹಿಸಲಿವೆ. ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣಸೌಧ ಎರಡೂ ಕಡೆ ಈ ತಂತ್ರಜ್ಞಾನ ಅಳವಡಿಸಲು ಒಟ್ಟು 130 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ವಿಧಾನಸಭೆಗೆ 78 ಕೋಟಿ ರೂ. ಮತ್ತು ವಿಧಾನಪರಿಷತ್‌ಗೆ 52 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಒಟ್ಟು ಬಜೆಟ್‌ನಲ್ಲಿ ಶೇಕಡಾ 60 ರಷ್ಟು ಧನಸಹಾಯವನ್ನು ಕೇಂದ್ರ ಸರ್ಕಾರವೇ ಒದಗಿಸುತ್ತಿರುವುದು ವಿಶೇಷ.

ಕಣ್ಮರೆಯಾಗಲ್ಲ ಕಡತಗಳು; ಜನಪ್ರತಿನಿಧಿಗಳಿಗೆ ಸಿಗಲಿದೆ ಟ್ರೈನಿಂಗ್: ನೂತನ ಡಿಜಿಟಲ್ ನೀತಿಯ ಪ್ರಕಾರ, ಸದನದ ದೈನಂದಿನ ಅಜೆಂಡಾ, ಶಾಸಕರ ಪ್ರಶ್ನೋತ್ತರಗಳ ಪ್ರತಿ ಹಾಗೂ ಮಂಡನೆಯಾಗುವ ಎಲ್ಲಾ ಕರಡು ಮಸೂದೆಗಳನ್ನು ಜನಪ್ರತಿನಿಧಿಗಳ ಐಪ್ಯಾಡ್‌ಗಳಿಗೆ ನೇರವಾಗಿ ಇ-ಫಾರ್ಮ್ಯಾಟ್‌ನಲ್ಲಿ ಕಳುಹಿಸಿಕೊಡಲಾಗುತ್ತದೆ. ಇದರಿಂದ ಮಹತ್ವದ ದಾಖಲೆಗಳು ಕಳೆದುಹೋಗುವ ಯಾವುದೇ ಭಯ ಇರುವುದಿಲ್ಲ. ಅಧಿವೇಶನದ ವೇಳೆ ಶಾಸಕರ ಸೀಟುಗಳ ಮುಂಭಾಗದಲ್ಲೇ ಈ ಡಿಜಿಟಲ್ ಪರದೆಗಳನ್ನು ಅಳವಡಿಸಲಾಗುತ್ತದೆಯಲ್ಲದೆ, ಕಲಾಪ ಮುಗಿದ ನಂತರ ಸುರಕ್ಷಿತವಾಗಿಡಲಾಗುತ್ತದೆ. ಹಿರಿಯ ಹಾಗೂ ತಂತ್ರಜ್ಞಾನದ ಹೊಸಬರಾಗಿರುವ ಶಾಸಕರಿಗೆ ಈ ಸಾಧನಗಳನ್ನು ಸುಲಭವಾಗಿ ಬಳಸಲು ಅನುವಾಗುವಂತೆ ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರತ್ಯೇಕ ತರಬೇತಿ ಶಿಬಿರಗಳನ್ನು ಆಯೋಜಿಸಲು ಪ್ಲಾನ್ ಮಾಡಲಾಗಿದೆ.

ಡಿಜಿಟಲ್ ಹಾಜರಾತಿ ಹಾಗೂ ಸಾರ್ವಜನಿಕರಿಗೆ ಮಾಹಿತಿ ಕಿಯೋಸ್ಕ್: ದಾಖಲೆಗಳಷ್ಟೇ ಅಲ್ಲದೆ, ಶಾಸಕರ ದೈನಂದಿನ ಹಾಜರಾತಿಯನ್ನು ಸಹ ಇನ್ಮುಂದೆ ಬಯೋಮೆಟ್ರಿಕ್ ಅಥವಾ ಡಿಜಿಟಲ್ ತಂತ್ರಜ್ಞಾನದ ಮೂಲಕವೇ ಪಡೆಯಲು ನಿರ್ಧರಿಸಲಾಗಿದೆ. ಇನ್ನು ಶಾಸನಸಭೆಯ ಕಲಾಪಗಳನ್ನು ವೀಕ್ಷಿಸಲು ಅಥವಾ ಇಲಾಖೆಗಳ ಕೆಲಸಕ್ಕಾಗಿ ವಿಧಾನಸೌಧಕ್ಕೆ ಭೇಟಿ ನೀಡುವ ಸಾರ್ವಜನಿಕರ ಅನುಕೂಲಕ್ಕಾಗಿ ಇನ್ಫಾರ್ಮೇಷನ್ ಕಿಯೋಸ್ಕ್‌ಗಳನ್ನು (ಮಾಹಿತಿ ಕೇಂದ್ರ) ಆವರಣದಲ್ಲಿ ಸ್ಥಾಪಿಸಲಾಗುತ್ತಿದೆ. ವಿಧಾನಮಂಡಲದ ಐಟಿ ವಿಭಾಗ ಸಿದ್ಧಪಡಿಸುತ್ತಿರುವ ಈ ಡಿಜಿಟಲ್ ಕಿಯೋಸ್ಕ್‌ಗಳ ನೆರವಿನಿಂದ ಸೌಧದ ಒಳಗಿರುವ ವಿವಿಧ ಇಲಾಖೆಗಳು, ಅಲ್ಲಿನ ಅಧಿಕಾರಿಗಳು ಮತ್ತು ಕಚೇರಿಗಳ ಸಂಪೂರ್ಣ ವಿವರಗಳನ್ನು ಜನಸಾಮಾನ್ಯರು ಒಂದೇ ಕ್ಲಿಕ್‌ನಲ್ಲಿ ಪಡೆದುಕೊಳ್ಳಬಹುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಆದ ಮೇಲೂ ಬೆಂಗಳೂರು ಅಭಿವೃದ್ಧಿ ಖಾತೆ ಉಳಿಸಿಕೊಳ್ಳುತ್ತಾರಾ ಡಿಕೆಶಿ? ಸಚಿವ ಸ್ಥಾನದ ಮೇಲ ಕಣ್ಣಿಟ್ಟ ಕೈ ನಾಯಕರು!

Leave a Reply

Your email address will not be published. Required fields are marked *