TOP NEWS

Crime: ಕೇರಳದಲ್ಲಿ ಒಂದೂವರೆ ವರ್ಷದ ಕಂದಮ್ಮನ ಭೀಕರ ಕೊಲೆ: ಆಹಾರ ಸಿಲುಕಿ ಸಾವು ಎಂದಿದ್ದ ಪ್ರಕರಣದ ಹಿಂದೆ ಬಯಲಾಯ್ತು ಹೆತ್ತ ತಾಯಿ, ಪ್ರಿಯಕರನ ಕ್ರೌರ್ಯ!

crime 1 and half year old kid body tortured by stepfather in kerala

ಕೇರಳ: ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ ಮಗು ಸಾವನ್ನಪ್ಪಿದೆ ಎಂದು ನಂಬಿಸಲು ಯತ್ನಿಸಿದ್ದ ಪ್ರಕರಣವೊಂದರಲ್ಲಿ, ಮಗುವಿನ ಮೇಲೆ ನಡೆದಿರುವ (Crime) ಸಾಲು ಸಾಲು ದೌರ್ಜನ್ಯ ಮತ್ತು ಕೊಲೆ ಸಂಚಿನ ರೋಮಾಂಚನಕಾರಿ ಸತ್ಯ ಬಯಲಾಗಿದೆ. ಕೇರಳದ ರಾಜಧಾನಿ ತಿರುವನಂತಪುರಂನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ನೆಡುಮಂಗಾಡ್‌ನ ಪಾನವೂರಿನಲ್ಲಿ ಈ ಘೋರ ಕೃತ್ಯ ನಡೆದಿದ್ದು, ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕೇವಲ ಒಂದೂವರೆ ವರ್ಷದ ಮಗು ಆರ್ಶಿದ್‌ನನ್ನು ಆತನ ತಾಯಿಯ ಲಿವ್-ಇನ್ ಪಾರ್ಟ್‌ನರ್ (ಸಾಕುತಂದೆ) ಹೊಡೆದು ಕೊಂದಿದ್ದು, ಹೆತ್ತ ತಾಯಿಯೇ ಇದಕ್ಕೆ ಮೂಕಪ್ರೇಕ್ಷಕಳಾಗಿದ್ದಾಳೆ.

ಆಸ್ಪತ್ರೆಯಲ್ಲಿ ಬಯಲಾದ ಅಸಲಿ ರಹಸ್ಯ: ಕಳೆದ ಮೇ 29 ರಂದು ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಸಾಕುತಂದೆ ಅಶ್ಕರ್ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲಿ ನಾಟಕವಾಡಿದ್ದ ಅಶ್ಕರ್, ಮಗುವಿಗೆ ಊಟ ಸರಿಹೋಗದೆ ಗಂಟಲಿನಲ್ಲಿ ಸಿಲುಕಿ ಪ್ರಜ್ಞೆ ತಪ್ಪಿದ್ದಾನೆ ಎಂದು ಸುಳ್ಳು ಹೇಳಿದ್ದ. ಆದರೆ ಮಗುವಿನ ಸಾವಿನ ಬಗ್ಗೆ ಆತನ ಹತ್ತಿರದ ಸಂಬಂಧಿಕರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಶವಪರೀಕ್ಷೆಯ ವರದಿ ಬಂದಾಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಮಗುವಿನ ಸಾವಿಗೆ ಗಂಟಲಿನಲ್ಲಿ ಆಹಾರ ಸಿಲುಕಿರುವುದು ಕಾರಣವಲ್ಲ, ಬದಲಿಗೆ ನಿರಂತರವಾಗಿ ನಡೆಸಿದ ಭೀಕರ ಹಲ್ಲೆಯಿಂದಾದ ಆಂತರಿಕ ರಕ್ತಸ್ರಾವವೇ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿತ್ತು.

ದೇಹದ ತುಂಬಾ ಸಿಗರೇಟ್ ಚುಕ್ಕೆ, 51 ಗಾಯಗಳು: ಪೊಲೀಸರ ತನಿಖೆ ವೇಳೆ ಮಗುವಿನ ಇಡೀ ದೇಹದ ಮೇಲೆ ಬರೋಬ್ಬರಿ 51 ಗಾಯದ ಗುರುತುಗಳು ಪತ್ತೆಯಾಗಿವೆ. ಮಗುವಿನ ಜನನಾಂಗಕ್ಕೆ ತೀವ್ರವಾಗಿ ಹಲ್ಲೆ ಮಾಡಲಾಗಿದ್ದು, ಕಾಲುಗಳ ಮೇಲೆ ಸಿಗರೇಟ್‌ನಿಂದ ಸುಟ್ಟ ಭೀಕರ ಗಾಯಗಳಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮೇ 30ರ ರಾತ್ರಿ ಮಗುವಿನ ತಾಯಿ ಅಖಿಲಾ (21) ಮತ್ತು ಆಕೆಯ ಪ್ರಿಯಕರ ಅಶ್ಕರ್‌ನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ. ಸೋಮವಾರ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದಾಗ, ಮಗುವಿಗೆ ಹಿಂಸಿಸಲು ಬಳಸಿದ್ದ ಕೋಲು ಹಾಗೂ ಲೈಟರ್ ಪತ್ತೆಯಾಗಿದೆ. ಅಖಿಲಾ ಜೊತೆಗಿನ ತನ್ನ ಮುಂದಿನ ಜೀವನಕ್ಕೆ ಈ ಮಗು ಅಡ್ಡಿಯಾಗುತ್ತಿದ್ದಾನೆಂಬ ಕಾರಣಕ್ಕೆ ಮೂರು ತಿಂಗಳ ಹಿಂದೆಯೇ ಕೊಲೆಗೆ ಸಂಚು ರೂಪಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮೇ 29 ರಂದು ಮಗು ಜೋರಾಗಿ ಅತ್ತಾಗ ಆತನ ತಲೆಗೆ ಬಲವಾಗಿ ಹೊಡೆದಿದ್ದು, ಮಗು ಸತ್ತ ತಕ್ಷಣ ಮನೆಯಲ್ಲಿದ್ದ ಸಾಕ್ಷ್ಯಗಳನ್ನು ನಾಶಪಡಿಸಿ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ಅಶ್ಕರ್ ಬಾಯಿಬಿಟ್ಟಿದ್ದಾನೆ. ಮಗುವಿನ ಕಿರುಚಾಟ ಹೊರಗೆ ಕೇಳದಂತೆ ಬಾಯಿಗೆ ಬಟ್ಟೆ ತುರುಕುತ್ತಿದ್ದ ಕ್ರೌರ್ಯವನ್ನೂ ಆತ ಒಪ್ಪಿಕೊಂಡಿದ್ದಾನೆ.

ತಾಯಿತನಕ್ಕೇ ಕಪ್ಪುಚುಕ್ಕೆ ಇಟ್ಟ ಘಟನೆ: ಈ ಕೊಲೆ ನಡೆಯುವ ಒಂದು ತಿಂಗಳ ಹಿಂದೆಯೇ ಮಗುವಿನ ಎರಡೂ ಕೈಗಳು ಮುರಿದುಹೋಗಿದ್ದವು. ಆ ಬಗ್ಗೆ ನೆರೆಹೊರೆಯವರು ವಿಚಾರಿಸಿದಾಗ, ಮಗು ಸೈಕಲ್‌ನಿಂದ ಬಿದ್ದಿದ್ದಾನೆ ಎಂದು ಅಶ್ಕರ್ ಸುಳ್ಳು ಹೇಳಿ ನಂಬಿಸಿದ್ದ. ಅಷ್ಟೇ ಅಲ್ಲದೆ, ಮಗುವಿನ ಕೈಗೆ ಪ್ಲಾಸ್ಟರ್ ಹಾಕಿರುವ ಫೋಟೋವನ್ನು ತಾಯಿ ಅಖಿಲಾ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಳು. ಮಗು ಕೊಲೆಯಾಗುವ ಎರಡು ವಾರಗಳ ಮುನ್ನ ಬಸ್ ನಿಲ್ದಾಣದಲ್ಲಿ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರನ್ನು ಇವರು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ತೆಗೆದ ಚಿತ್ರದಲ್ಲೂ ಮಗುವಿನ ಎರಡೂ ಕೈಗಳಿಗೆ ಬ್ಯಾಂಡೇಜ್ ಇರುವುದು ಕಂಡುಬಂದಿದ್ದು, ಅಲ್ಲೂ ಸಹ ತಾಯಿ ಸೈಕಲ್ ಅಪಘಾತದ ಸುಳ್ಳನ್ನೇ ಹೇಳಿದ್ದಳು. ಪೊಲೀಸರ ವಿಚಾರಣೆ ವೇಳೆ, ಪ್ರಿಯಕರ ಮಗುವಿಗೆ ಕೋಲಿನಿಂದ ಅಮಾನುಷವಾಗಿ ಬಡಿಯುತ್ತಿದ್ದಾಗ ತಾನು ಮೌನವಾಗಿ ನೋಡುತ್ತ ನಿಂತಿದ್ದೆ ಎಂದು ತಾಯಿ ಅಖಿಲಾ ಒಪ್ಪಿಕೊಂಡಿದ್ದು, ಮಗುವನ್ನು ರಕ್ಷಿಸಲು ಹೆತ್ತ ತಾಯಿಯೇ ಮುಂದಾಗದಿರುವುದು ತಾಯಿತನಕ್ಕೇ ಕಪ್ಪುಚುಕ್ಕೆಯಾಗಿದೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣ: ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಮುಂಗಡ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

Leave a Reply

Your email address will not be published. Required fields are marked *