TOP NEWS

CJP: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ: ಜೂನ್ 6 ರಂದು ದೆಹಲಿಯಲ್ಲಿ ಸಿಜೆಪಿ ಬೃಹತ್ ಪ್ರತಿಭಟನೆ, ಸಂಸ್ಥಾಪಕ ಅಭಿಜೀತ್ ದೀಪ್ಕೆ ಕರೆ

cjp founder abhijeet dipke calls for big protest regarding central government tfailure

ನವದೆಹಲಿ: ದೇಶದ ಶಿಕ್ಷಣ ವಲಯದಲ್ಲಿ ಭಾರಿ ವಿವಾದ ಸೃಷ್ಟಿಸಿರುವ ಪರೀಕ್ಷಾ ಅಕ್ರಮಗಳು ಮತ್ತು ಸಾಲು ಸಾಲು ಲೋಪದೋಷಗಳ ವಿರುದ್ಧ ಬೃಹತ್ ಹೋರಾಟ ರೂಪಿಸಲು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಕಾಕ್ರೋಚ್ ಜನತಾ ಪಕ್ಷ’ (CJP) ಸಜ್ಜಾಗಿದೆ. ಪರೀಕ್ಷಾ ಎಡವಟ್ಟುಗಳಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದ್ದು, ಇದಕ್ಕೆ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಪದವಿಗೆ ರಾಜೀನಾಮೆ ನೀಡಬೇಕು ಎಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಮುಂಬರುವ ಜೂನ್ 6 ರಂದು ದೇಶದ ರಾಜಧಾನಿ ದೆಹಲಿಯಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ.

ವಿಡಿಯೋ ಶೇರ್‌ ಮಾಡಿದ ಅಭಿಜೀತ್

ಪ್ರಸ್ತುತ ವಿದೇಶದಲ್ಲಿರುವ ಅಭಿಜೀತ್ ದೀಪ್ಕೆ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ. ಜೂನ್ 6ರ ಶನಿವಾರದಂದು ಬೆಳಗ್ಗೆ ತಾವು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ದೇಶದಾದ್ಯಂತ ಇರುವ ತಮ್ಮ ಬೆಂಬಲಿಗರು ಅಂದೇ ವಿಮಾನ ನಿಲ್ದಾಣಕ್ಕೆ ಬಂದು ತಮ್ಮೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲೇ ನಾವೆಲ್ಲರೂ ಒಗ್ಗೂಡಿ ಶಾಂತಿಯುತವಾಗಿ ಧ್ವನಿ ಎತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಯುವಜನರೆಲ್ಲರೂ ಒಂದಾಗಿ ಹೋರಾಡಿದರೆ ಪ್ರಸ್ತುತ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ತಲೆಬಾಗಲೇಬೇಕಾಗುತ್ತದೆ ಎಂದು ಅವರು ವೀಡಿಯೋ ಸಂದೇಶದಲ್ಲಿ ಪ್ರತಿಪಾದಿಸಿದ್ದಾರೆ.

ತಮ್ಮ ಪ್ರತಿಭಟನೆಯ ಮುಂದಿನ ಕಾರ್ಯತಂತ್ರದ ಕುರಿತು ಮಾಹಿತಿ ನೀಡಿರುವ ಅವರು, ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ, ಅಲ್ಲಿ ನೆರೆಯುವ ಎಲ್ಲಾ ಬೆಂಬಲಿಗರೊಂದಿಗೆ ನೇರವಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಧಾವಿಸುವುದಾಗಿ ತಿಳಿಸಿದ್ದಾರೆ. ಅಲ್ಲಿ ದೆಹಲಿಯ ಐತಿಹಾಸಿಕ ಜಂತರ್ ಮಂತರ್‌ನಲ್ಲಿ ಶಾಂತಿಯುತ ಧರಣಿ ನಡೆಸಲು ಕಾನೂನುಬದ್ಧವಾಗಿ ಪೊಲೀಸರಿಂದ ಅಧಿಕೃತ ಅನುಮತಿ ಕೋರಲಾಗುವುದು ಎಂದಿದ್ದಾರೆ. ದೇಶದಲ್ಲಿ ಸಾಲು ಸಾಲು ಪರೀಕ್ಷೆಗಳ ವಿಶ್ವಾಸಾರ್ಹತೆಯೇ ಧಕ್ಕೆಯಾಗಿರುವ ಈ ಸಂದರ್ಭದಲ್ಲಿ, ಕಾಕ್ರೋಚ್ ಜನತಾ ಪಕ್ಷ ಹಮ್ಮಿಕೊಂಡಿರುವ ಈ ‘ದೆಹಲಿ ಚಲೋ’ ಚಳವಳಿಯು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ವಲಯದ ಆಕ್ರೋಶಕ್ಕೆ ಮತ್ತಷ್ಟು ತೀವ್ರತೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೋದಿ ಕೇವಲ ಮಾತಿನ ಮಲ್ಲ, ಎಲ್ಲ ರಂಗಗಳಲ್ಲೂ ಕೇಂದ್ರ ಸರ್ಕಾರ ದಿವಾಳಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Leave a Reply

Your email address will not be published. Required fields are marked *