TOP NEWS

West Bengal: ಭವಾನಿಪುರ ಚುನಾವಣಾ ಫಲಿತಾಂಶ ಇವಿಎಂ ಪಿತೂರಿ; ಕೋರ್ಟ್ ಮೆಟ್ಟಿಲೇರಲು ಮಮತಾ ಬ್ಯಾನರ್ಜಿ ಸಿದ್ಧತೆ, ವಿರೋಧ ಪಕ್ಷಗಳ ಒಕ್ಕೂಟಕ್ಕೆ ಕರೆ

West bengal election result mamata banerjee decided to go on court regarding her defeat

ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮೂರು ವಾರಗಳು ಕಳೆದಿದ್ದರೂ, ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎದುರಾದ ಅನಿರೀಕ್ಷಿತ ಪರಾಜಯದ ವಿವಾದ ಇನ್ನು ತಣ್ಣಗಾಗಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತ ಚುರುಕುಗೊಳಿಸಿದ್ದರೂ, ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಚುನಾವಣಾ ಫಲಿತಾಂಶವನ್ನು ವ್ಯವಸ್ಥಿತ ಆಡಳಿತಾತ್ಮಕ ಪಿತೂರಿ ಎಂದು ಕರೆದಿರುವ ಅವರು, ಈ ರಾಜಕೀಯ ಹೋರಾಟವನ್ನು ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ.

ಕಳೆದ 2011 ರಿಂದಲೂ ಭವಾನಿಪುರ ಕ್ಷೇತ್ರವನ್ನು ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದ ಮಮತಾ ಬ್ಯಾನರ್ಜಿ, ಈ ಬಾರಿಯ ಫಲಿತಾಂಶವು ಜನರ ನೈಜ ತೀರ್ಪಲ್ಲ ಎಂದು ಪ್ರತಿಪಾದಿಸಿದ್ದಾರೆ. ಮತದಾರರು ತಮ್ಮ ಪರವಾಗಿಯೇ ನಿಂತಿದ್ದರು, ಆದರೆ ವ್ಯವಸ್ಥೆಯ ದುರುಪಯೋಗದ ಮೂಲಕ ಫಲಿತಾಂಶದ ಅಂಕಿ-ಅಂಶಗಳನ್ನು ತಿರುಚಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುವೇಂದು ಅಧಿಕಾರಿಗೆ ಕೋರ್ಟ್ ಸವಾಲ್ ಹಾಗೂ ಇವಿಎಂ ತನಿಖೆಗೆ ಒತ್ತಾಯ ಭವಾನಿಪುರ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ನೇರ ಸವಾಲು ಹಾಕಿರುವ ದೀದಿ, “ನಿಮ್ಮಲ್ಲಿ ಧೈರ್ಯ ಮತ್ತು ಸತ್ಯದ ಬಲವಿದ್ದರೆ ನ್ಯಾಯಾಲಯಕ್ಕೆ ಬನ್ನಿ, ಅಲ್ಲಿಯೇ ಮುಖಾಮುಖಿ ಚರ್ಚಿಸೋಣ” ಎಂದು ಗುಡುಗಿದ್ದಾರೆ. ಜನರ ಮತಗಳು ನಮಗೇ ಚಲಾವಣೆಯಾಗಿದ್ದರೂ, ಅಂತಿಮ ಪಟ್ಟಿಯಲ್ಲಿ ಅದನ್ನು ಬದಲಾಯಿಸಿ ತೋರಿಸಲಾಗಿದೆ ಎಂದಿರುವ ಅವರು, ಮತ ಎಣಿಕೆಗೆ ಬಳಸಲಾದ ವಿದ್ಯುನ್ಮಾನ ಮತಯಂತ್ರಗಳ (EVM) ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಭವಾನಿಪುರ ಕ್ಷೇತ್ರದ ಎಲ್ಲಾ ಇವಿಎಂಗಳನ್ನು ತಕ್ಷಣವೇ ವಿಧಿವಿಜ್ಞಾನ (ಫೋರೆನ್ಸಿಕ್) ಪರೀಕ್ಷೆಗೆ ಒಳಪಡಿಸಬೇಕು, ಇದರಿಂದ ಬಿಜೆಪಿಯ ಅಸಲಿ ಮುಖವಾಡ ಕಳಚಿ ಬೀಳಲಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಚುನಾವಣಾ ಆಯೋಗ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಗಂಭೀರ ದೂರು ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಕಚೇರಿಯ ನೇರ ಉಸ್ತುವಾರಿಯಲ್ಲೇ ಈ ಇಡೀ ವಂಚನೆ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಕೇಂದ್ರದ ಹಿರಿಯ ಅಧಿಕಾರಿಗಳು ಮತ್ತು ಬಿಜೆಪಿಯ ತಂತ್ರಜ್ಞರು ಸೇರಿಕೊಂಡು ಸ್ಥಳೀಯವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರಿದ್ದಾರೆ. ಮತ ಎಣಿಕೆಯ ದಿನದಂದು ಟಿಎಂಸಿ ಏಜೆಂಟರನ್ನು ಬಲವಂತವಾಗಿ ಕೇಂದ್ರದಿಂದ ಹೊರಹಾಕಿ, ಮುಚ್ಚಿದ ಕೊಠಡಿಗಳಲ್ಲಿ ತಮಗೆ ಬೇಕಾದಂತೆ ಮತಗಳನ್ನು ತಿರುಚಲಾಗಿದೆ ಎಂದು ದೂರಿದ್ದಾರೆ. ಅಷ್ಟೇ ಅಲ್ಲದೆ, ಚುನಾವಣಾ ಭದ್ರತೆಯಲ್ಲಿದ್ದ ಸಿಆರ್‌ಪಿಎಫ್ (CRPF) ಸಿಬ್ಬಂದಿಯ ಪೈಕಿ ಅನೇಕರು ನೈಜ ಸೈನಿಕರಲ್ಲ, ಬದಲಿಗೆ ಬಿಜೆಪಿಯ ಐಟಿ ಸೆಲ್ ಸದಸ್ಯರು ಮತ್ತು ಕಾರ್ಯಕರ್ತರಾಗಿದ್ದರು. ಅವರು ಡೇಟಾ ಸೆಂಟರ್‌ಗಳ ಒಳಗೆ ಅಕ್ರಮವಾಗಿ ಕುಳಿತು ಇಡೀ ಪ್ರಕ್ರಿಯೆಯನ್ನು ನಿಯಂತ್ರಿಸುತ್ತಿದ್ದರು ಎಂದು ಆರೋಪಿಸಿರುವ ದೀದಿ, ಇವೆಲ್ಲವನ್ನೂ ನ್ಯಾಯಾಲಯದಲ್ಲಿ ಪುರಾವೆಗಳೊಂದಿಗೆ ಸಾಬೀತುಪಡಿಸುವುದಾಗಿ ಹೇಳಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಹೋರಾಟಕ್ಕೆ ತಂತ್ರ ಭವಾನಿಪುರ ಕ್ಷೇತ್ರದ ಈ ಬಿಕ್ಕಟ್ಟನ್ನು ಕೇವಲ ಪಶ್ಚಿಮ ಬಂಗಾಳಕ್ಕೆ ಸೀಮಿತಗೊಳಿಸದೆ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ. ದೇಶದಲ್ಲಿ ಹೆಚ್ಚಾಗುತ್ತಿರುವ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕಾದ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ. ಮುಂಬರುವ ಜೂನ್ ತಿಂಗಳಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟದ ಮಹತ್ವದ ಸಭೆಯಲ್ಲಿ, ಸರ್ಕಾರಿ ಯಂತ್ರದ ದುರುಪಯೋಗದ ವಿರುದ್ಧ ರಾಷ್ಟ್ರೀಯ ಮಟ್ಟದ ಜಂಟಿ ಕಾರ್ಯತಂತ್ರ ರೂಪಿಸಲು ತೀರ್ಮಾನಿಸಲಾಗಿದೆ. ಭವಾನಿಪುರದ ಘಟನೆ ಕೇವಲ ಒಂದು ಕ್ಷೇತ್ರದ ಸೋಲಲ್ಲ, ಇದು ದೇಶದ ಒಟ್ಟಾರೆ ಪ್ರಜಾಪ್ರಭುತ್ವದ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಬಲವಾಗಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಇ-ಸ್ಕೂಟರ್ ಖರೀದಿದಾರರಿಗೆ ಮತ್ತೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರದ ಬಂಪರ್ ಯೋಜನೆ

Leave a Reply

Your email address will not be published. Required fields are marked *