ಮೈಸೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಂಘ ಪರಿವಾರವನ್ನು ಸಮಾಧಾನಪಡಿಸುವ ಉದ್ದೇಶದಿಂದ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಹರಡಿ ಸಮಾಜದಲ್ಲಿ ಅಶಾಂತಿ ಹಾಗೂ ಗಲಭೆ ಸೃಷ್ಟಿಸಿದವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡಿರುವ ನಿರ್ಧಾರವು ರಾಜ್ಯದ ಜನತಂತ್ರ, ಕಾನೂನು ಸುವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ಮೂಲ ತತ್ವಗಳ ಮೇಲಿನ ನೇರ ದಾಳಿಯಾಗಿದೆ ಎಂದು ಎಸ್ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷೆ ನೀಡುವಂತೆ ಆಗ್ರಹ
ಇಂದು ಮೈಸೂರು ನಗರದ ಎಫ್ಟಿಎಸ್ ಸರ್ಕಲ್ ನಲ್ಲಿ ಎಸ್ಡಿಪಿಐ ಮೈಸೂರು ಜಿಲ್ಲಾ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆದು, ಸಮಾಜದಲ್ಲಿ ದ್ವೇಷ ಹರಡಿದ ಹಾಗೂ ಕೋಮು ಪ್ರಚೋದನೆ ಮೂಲಕ ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಿ ಸೂಕ್ತ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸಮಾಜದಲ್ಲಿ ದ್ವೇಷ ಭಾಷಣಗಳ ಮೂಲಕ ಅಶಾಂತಿ ಉಂಟುಮಾಡಿದವರು, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿದವರು, ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ನಿರಂತರವಾಗಿ ವಿಷಕಾರಿ ಹೇಳಿಕೆಗಳನ್ನು ನೀಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಕಾನೂನು ಎಲ್ಲರಿಗೂ ಸಮಾನ” ಎಂದು ಹೇಳಿಕೊಳ್ಳುವ ಸರ್ಕಾರವೇ ಸಮಾಜಘಾತುಕ ಶಕ್ತಿಗಳಿಗೆ ರಕ್ಷಣೆಯ ವಾತಾವರಣ ನಿರ್ಮಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೋಮು ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ವಿಶೇಷ ರಿಯಾಯಿತಿ ನೀಡುತ್ತಿರುವ ಸರ್ಕಾರದ ನಡೆ ಅತ್ಯಂತ ಪ್ರಶ್ನಾರ್ಹವಾಗಿದೆ ಎಂದು ಅವರು ಟೀಕಿಸಿದರು.
ಗುಪ್ತ ರಾಜಕೀಯ ಅಜೆಂಡಾ
ಅಮಾಯಕರ ಮೇಲಿನ ಪ್ರಕರಣಗಳು, ಕನ್ನಡಪರ ಹೋರಾಟಗಾರರು ಹಾಗೂ ರೈತರ ಹೋರಾಟಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪುನರಾವರ್ತಿತವಾಗಿ ಕೋಮು ಪ್ರಚೋದನೆ, ದ್ವೇಷ ಭಾಷಣ ಹಾಗೂ ಸಾಮಾಜಿಕ ವಿಭಜನೆಗೆ ಕಾರಣವಾಗಿರುವ ಬಿಜೆಪಿ–ಸಂಘ ಪರಿವಾರದ ನಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳಲ್ಲಿ “ಕಾನೂನು ಅಡಚಣೆ” ಎಂಬ ನೆಪ ಹೇಳಿ ನ್ಯಾಯ ವಿಳಂಬಗೊಳಿಸುತ್ತಿರುವ ಸರ್ಕಾರ, ದ್ವೇಷ ರಾಜಕಾರಣ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಾಗ ಯಾವುದೇ ಅಡಚಣೆಯನ್ನು ಕಾಣುವುದಿಲ್ಲ ಎಂಬುದು ಸರ್ಕಾರದ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಹುಬ್ಬಳ್ಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಮಾಯಕ ಯುವಕರು ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದರೂ, ಅವರ ಕುಟುಂಬಗಳ ನೋವು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಅವರು ಎತ್ತಿದರು.
ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರರಂತಹ ಕೋಮು ಪ್ರಚೋದಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಯಾವ “ಗುಪ್ತ ರಾಜಕೀಯ ಅಜೆಂಡಾ” ಜಾರಿಗೆ ತರುತ್ತಿದೆ ಎಂಬುದಕ್ಕೆ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ಅಬ್ದುಲ್ ಮಜೀದ್ ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಎಸ್. ಸ್ವಾಮಿ, ದ್ವೇಷ ರಾಜಕಾರಣಕ್ಕೆ ರಕ್ಷಣೆ ನೀಡಿ ಅಮಾಯಕ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಗುರಿಯಾಗಿಸುವ ನೀತಿಯನ್ನು ರಾಜ್ಯದ ಜನತೆ ಎಂದಿಗೂ ಒಪ್ಪುವುದಿಲ್ಲ. ಸರ್ಕಾರ ತನ್ನ ಜನವಿರೋಧಿ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಎಸ್ಡಿಪಿಐ ಜಿಲ್ಲಾ ಕಾರ್ಯಾಧ್ಯಕ್ಷ ಶಫಿಉಲ್ಲಾ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪರ್ದೇನ್ ಅಹಮದ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೀದೌಸ್, ಜಿಲ್ಲಾ ಕಾರ್ಯದರ್ಶಿ ಆಯೇಷಾ ಝಬಿ, ಜಿಲ್ಲಾ ಮುಖಂಡರಾದ ತಬ್ರೆಝ್ ಶೇಟ್, ಸುಹೇಲ್ ಆತಿಫ್, ಮನ್ಸೂರ್ ಖಾನ್ ಸೇರಿದಂತೆ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಉತ್ತರ ಕನ್ನಡ ಕಡಲತೀರದಲ್ಲಿ ಘೋರ ದುರಂತ, ಪರಿಹಾರ ಘೋಷಿಸಿದ ಸಿಎಂ
