CM Siddaramaiah: ಉತ್ತರ ಕನ್ನಡ ಕಡಲತೀರದಲ್ಲಿ ಘೋರ ದುರಂತ, ಪರಿಹಾರ ಘೋಷಿಸಿದ ಸಿಎಂ

cm siddaramaiah condolence for Uttar kannada tragedy

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರ ನದಿಯ ತಟ್ಟೆಹಕ್ಕಲು ಕಡಲ ತೀರದ ಸಮೀಪ ಕಪ್ಪೆಚಿಪ್ಪು ಸಂಗ್ರಹಿಸಲು ಹೋದ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸಂತಾಪ ಸೂಚಿಸಿದ್ದಾರೆ. ಈ ಹೃದಯವಿದ್ರಾವಕ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯತೆಯ ಆಧಾರದ ಮೇಲೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಪರಿಹಾರವನ್ನು ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.

ವಿಷಾದ ವ್ಯಕ್ತಪಡಿಸಿದ ಸಿಎಂ

ಈ ದುರದೃಷ್ಟಕರ ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಳವಾದ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಒಂದೇ ಕುಟುಂಬದ ಎಂಟು ಮಂದಿ ಜಲಸಮಾಧಿಯಾಗಿರುವ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ. ಇದರೊಂದಿಗೆ, ಅಪಘಾತದಲ್ಲಿ ಇನ್ನೂ ಕೆಲವರು ನಾಪತ್ತೆಯಾಗಿರುವ ಆತಂಕಕಾರಿ ಮಾಹಿತಿ ಲಭ್ಯವಾಗಿದ್ದು, ಅವರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕಾಣೆಯಾದವರು ಸುರಕ್ಷಿತವಾಗಿ ಮರಳಿ ಬಂದು ತಮ್ಮ ಕುಟುಂಬವನ್ನು ಸೇರಿಕೊಳ್ಳಲಿ ಎಂದು ಪ್ರಾರ್ಥಿಸೋಣ ಎಂದು ಸಿಎಂ ಆಶಿಸಿದ್ದಾರೆ.

ಏನಿದು ಭೀಕರ ಘಟನೆ? ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣ ತಲ್ಲಣಗೊಳಿಸಿರುವ ಈ ದುರಂತವು ಭಟ್ಕಳದ ವೆಂಕಟಾಪುರ ನದಿಯಲ್ಲಿ ಕಪ್ಪೆಚಿಪ್ಪು (ಸ್ಥಳೀಯ ಭಾಷೆಯಲ್ಲಿ ಮರಕಲ) ತೆಗೆಯಲು ಇಳಿದಾಗ ಸಂಭವಿಸಿದೆ. ಲಭ್ಯವಿರುವ ಪ್ರಾಥಮಿಕ ವಿವರಗಳ ಪ್ರಕಾರ, ಶಿರಾಲಿಯ ಸಾರದಹೊಳೆ ಗ್ರಾಮದ ಮೂಲದ ಒಟ್ಟು 14 ಜನರ ತಂಡವೊಂದು ಕಪ್ಪೆಚಿಪ್ಪುಗಳನ್ನು ಆಯಲು ಒಟ್ಟಿಗೆ ತೆರಳಿತ್ತು. ನದಿಯ ಒಳಗೆ ಸಾಗುತ್ತಿದ್ದಂತೆ ನೀರಿನ ತೀವ್ರ ಸೆಳೆತ ಹಾಗೂ ಅನಿರೀಕ್ಷಿತ ಆಳಕ್ಕೆ ಸಿಲುಕಿ ಇವರೆಲ್ಲರೂ ಮುಳುಗಲಾರಂಭಿಸಿದ್ದಾರೆ. ಈ ತೀವ್ರ ಕಷ್ಟದ ಸಂದರ್ಭದಲ್ಲಿ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಮೂವರನ್ನು ಸಾಹಸಪೂರ್ವಕವಾಗಿ ರಕ್ಷಿಸಿದ್ದು, ಸದ್ಯ ಅವರಿಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಒದಗಿಸಲಾಗುತ್ತಿದೆ.

ನದಿಯ ನೀರಿನಲ್ಲಿ ಮುಳುಗಿ ಈಗಾಗಲೇ 10 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಆದರೆ ನೀರಿನ ರಭಸಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿರುವ ಇನ್ನು ಮೂವರು ಜನರಿಗಾಗಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕೋಸ್ಟ್ ಗಾರ್ಡ್ ನೆರವಿನೊಂದಿಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ದುರಂತದ ಮಾಹಿತಿ ಸಿಗುತ್ತಿದ್ದಂತೆಯೇ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಸದ್ಯ ಒಂದೇ ಗ್ರಾಮದ ಹತ್ತಾರು ಜೀವಗಳು ಬಲಿಯಾಗಿರುವುದರಿಂದ ಇಡೀ ಸಾರದಹೊಳೆ ಗ್ರಾಮದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂತಕದ ಛಾಯೆ ಆವರಿಸಿದೆ.

ಇದನ್ನೂ ಒದಿ: ಮೇ ತಿಂಗಳಲ್ಲಿ ‘ಅನ್ನಭಾಗ್ಯ’ ಗ್ಯಾರಂಟಿಗೆ ಬ್ರೇಕ್: ಪಡಿತರ ಕೇಂದ್ರಗಳಲ್ಲಿ ರಾಜ್ಯದ ಪಾಲಿನ ಅಕ್ಕಿ ವಿತರಣೆ ಸ್ಥಗಿತ

Leave a Reply

Your email address will not be published. Required fields are marked *