ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನಟನೆಯ, ಪ್ರೇಕ್ಷಕರು ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿರುವ ಅವರ ಕೊನೆಯ ಚಿತ್ರ ‘ಜನನಾಯಗನ್’ (Jana Nayagan) ಸಿನಿಮಾದ ಬಿಡುಗಡೆ ಇನ್ನು ಕೂಡ ಅನಿಶ್ಚಿತತೆಯಲ್ಲೇ ಮುಂದುವರಿದಿದೆ. ಹಲವು ತಿಂಗಳುಗಳಿಂದ ವಿಳಂಬವಾಗುತ್ತಿರುವ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಇನ್ನು ಕೂಡ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ ಎಂಬುದನ್ನು ಚಿತ್ರದ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ನಿರ್ದೇಶಕ ಎಚ್. ವಿನೋತ್ ಸಾರಥ್ಯದ ಈ ರಾಜಕೀಯ ಆಕ್ಷನ್ ಡ್ರಾಮಾ ಸಿನಿಮಾವು ಇದೇ ವರ್ಷದ ಜನವರಿಯಲ್ಲಿಯೇ ತೆರೆಗೆ ಬರಬೇಕಿತ್ತಾದರೂ, ಸೆನ್ಸಾರ್ ಪ್ರಕ್ರಿಯೆಯ ತಾಂತ್ರಿಕ ಸಂಕೀರ್ಣತೆಗಳಿಗೆ ಸಿಲುಕಿ ನನೆಗುದಿಗೆ ಬಿದ್ದಿದೆ.
ಸೆನ್ಸಾರ್ ಮಂಡಳಿ ಅನುಮತಿ ಸಿಕ್ಕಿಲ್ಲ
ಇತ್ತೀಚೆಗೆ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕ ವೆಂಕಟ್ ಕೆ. ನಾರಾಯಣ, ಸಿನಿಮಾಕ್ಕೆ ಇನ್ನು ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಮಂಡಳಿಯಿಂದ ಅಂತಿಮ ಪ್ರಮಾಣಪತ್ರ ಕೈಸೇರಿದ ತಕ್ಷಣವೇ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ತಮ್ಮ ಸಂತಸ ಹಂಚಿಕೊಂಡ ಅವರು, ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ತಮಗೆ ಅಪಾರ ಹೆಮ್ಮೆಯಿದೆ ಎಂದು ತಿಳಿಸಿದರು. ನಾವು ಸಿನಿಮಾಗೆ ‘ಜನನಾಯಗನ್’ ಎಂದು ಹೆಸರಿಟ್ಟಿದ್ದೆವು, ಇಂದು ಅವರು ನಿಜ ಅರ್ಥದಲ್ಲಿ ತಮಿಳುನಾಡಿನ ಜನನಾಯಕರಾಗಿದ್ದಾರೆ ಎಂದು ಬಣ್ಣಿಸಿದರು. ಚಿತ್ರದ ವಿಳಂಬದ ಕುರಿತು ಚರ್ಚಿಸಲು ಕಾನ್ಸ್ ಚಲನಚಿತ್ರೋತ್ಸವದ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬರುವಂತೆ ವಿಜಯ್ ಅವರು ನಿರ್ಮಾಪಕರಿಗೆ ಸೂಚಿಸಿದ್ದರು ಎಂಬ ವದಂತಿಗಳ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.
2025 ರ ಕೊನೆಯ ಭಾಗದಿಂದಲೇ ಈ ಚಿತ್ರವು ಹಲವು ಕಾನೂನು ಮತ್ತು ತಾಂತ್ರಿಕ ಅಡೆತಡೆಗಳನ್ನು ಎದುರಿಸುತ್ತಿದೆ. ಸಿನಿಮಾದಲ್ಲಿರುವ ಕೆಲವು ಪ್ರಭಾವಿ ರಾಜಕೀಯ ವಿಷಯಗಳು, ದೃಶ್ಯಗಳು ಮತ್ತು ಸಂಭಾಷಣೆಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಚಿತ್ರವು ಸುದೀರ್ಘ ಪರಿಶೀಲನಾ ಸಮಿತಿಯ ತನಿಖೆಗೆ ಒಳಪಟ್ಟಿತ್ತು. ಈ ವಿಳಂಬದ ವಿರುದ್ಧ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತಾದರೂ, ನಂತರ ಅರ್ಜಿಯನ್ನು ಹಿಂಪಡೆದು ಸೆನ್ಸಾರ್ ಮಂಡಳಿಯ ನಿಯಮಾವಳಿಗಳಿಗೇ ಒಪ್ಪಿಕೊಂಡಿತ್ತು. ಈ ಮಧ್ಯೆ, ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾದ ಉನ್ನತ ಗುಣಮಟ್ಟದ (HD) ಆವೃತ್ತಿಯೊಂದು ಅಂತರ್ಜಾಲದಲ್ಲಿ ಸೋರಿಕೆಯಾಗಿ ಪೈರಸಿ ವಿವಾದ ಸೃಷ್ಟಿಸಿತ್ತು. ಇದು ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು. ಆದರೆ, ಈ ಸೋರಿಕೆಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದ ಸೆನ್ಸಾರ್ ಮಂಡಳಿ, ತಮ್ಮಲ್ಲಿ ಅತ್ಯಂತ ಸುರಕ್ಷಿತ ವ್ಯವಸ್ಥೆಯಿದೆ ಎಂದು ಹೇಳಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದರು.
ಎಚ್. ವಿನೋತ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಜಯ್ ಅವರು ಪೂರ್ಣ ಪ್ರಮಾಣದ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸಿರುವ ಕೊನೆಯ ಚಿತ್ರ ಇದಾಗಿರುವುದರಿಂದ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಸದ್ಯಕ್ಕೆ ಚಿತ್ರದ ಭವಿಷ್ಯ ಮತ್ತು ಥಿಯೇಟರ್ ಪ್ರವೇಶ ಸಂಪೂರ್ಣವಾಗಿ ಸೆನ್ಸಾರ್ ಮಂಡಳಿಯ ಅಂತಿಮ ನಿರ್ಧಾರದ ಮೇಲೆ ನಿಂತಿದೆ.
