ನವದೆಹಲಿ/ದುಬೈ: ಪಶ್ಚಿಮ ಏಷ್ಯಾದಲ್ಲಿ ಇರಾನ್ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಭಾರತ ಮತ್ತು ಸಂಯುಕ್ತ (Narendra Modi) ಅರಬ್ ಎಮಿರೇಟ್ಸ್ (UAE) ನಡುವಿನ ರಕ್ಷಣಾ ಮತ್ತು ಇಂಧನ ಬಾಂಧವ್ಯ ಹೊಸ ಎತ್ತರಕ್ಕೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ವ್ಯೂಹಾತ್ಮಕ ರಕ್ಷಣಾ ಪಾಲುದಾರಿಕೆಯ ಚೌಕಟ್ಟಿಗೆ ಅಂಕಿತ ಹಾಕಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪೆಟ್ರೋಲಿಯಂ ಮೀಸಲು ಮತ್ತು ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಪೂರೈಕೆಗೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದಗಳು ಏರ್ಪಟ್ಟಿವೆ.
ತೈಲ ಸಂಗ್ರಹಣೆ ವಿಸ್ತರಣೆ ಬಗ್ಗೆ ಮೋದಿ ಮಾತು
ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ಯುದ್ಧವು ಮೂರನೇ ತಿಂಗಳಿಗೆ ಕಾಲಿಟ್ಟಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರುಪೇರು ಉಂಟಾಗಿದೆ. ವಿಶೇಷವಾಗಿ ವಿಶ್ವದ ಶೇ. 20 ರಷ್ಟು ತೈಲ ಸಂಚಾರ ನಡೆಯುವ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದು ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಒತ್ತಡ ಹೇರಿದೆ. ಇಂತಹ ಕಠಿಣ ಸಮಯದಲ್ಲಿ ಯುಎಇ ‘ಒಪೆಕ್’ (OPEC) ಒಕ್ಕೂಟದಿಂದ ಹೊರಬಂದಿರುವುದು ತೈಲ ಉತ್ಪಾದನೆ ಹೆಚ್ಚಿಸಲು ದಾರಿಯಾಗಿದ್ದು, ಇದು ಭಾರತದಂತಹ ದೇಶಗಳಿಗೆ ವರದಾನವಾಗಲಿದೆ. ದೀರ್ಘಕಾಲೀನ ಇಂಧನ ಪೂರೈಕೆ ಮತ್ತು ನವದೆಹಲಿಯ ಆಯಕಟ್ಟಿನ ತೈಲ ಸಂಗ್ರಹಣೆಯನ್ನು ವಿಸ್ತರಿಸುವ ಕುರಿತು ಪ್ರಧಾನಿ ಮೋದಿ ಅವರು ಅಬುಧಾಬಿಯ ನಾಯಕರೊಂದಿಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ರಕ್ಷಣಾ ಒಪ್ಪಂದಗಳ ಹಿನ್ನೆಲೆಯಲ್ಲಿ ಭಾರತದ ಈ ನಡೆ ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಕಳೆದ ವರ್ಷ ಪಾಕಿಸ್ತಾನವು ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಭಾರತವು ಯುಎಇ ಜೊತೆ ರಕ್ಷಣಾ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಮುಂದಾಗಿದೆ. ಇತ್ತೀಚೆಗೆ ಎಮಿರೇಟ್ಸ್ ಎನ್ಬಿಡಿ ಬ್ಯಾಂಕ್ ಭಾರತದ ಆರ್ಬಿಎಲ್ ಬ್ಯಾಂಕ್ನ ಶೇ. 60 ರಷ್ಟು ಪಾಲನ್ನು ಖರೀದಿಸಿರುವುದು ಹಾಗೂ ಸಮ್ಮಾನ್ ಸಂಸ್ಥೆಯಲ್ಲಿ ಅಬುಧಾಬಿಯ ಐಎಚ್ಸಿ ಬಂಡವಾಳ ಹೂಡಿರುವುದು ಸೇರಿದಂತೆ ಒಟ್ಟು 5 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಯನ್ನು ಯುಎಇ ಭಾರತದಲ್ಲಿ ಮಾಡಲಿದೆ ಎಂದು ಸರ್ಕಾರ ಪ್ರಕಟಿಸಿದೆ.
ಕಳೆದ ಜನವರಿಯಲ್ಲಿ ನಡೆದ 3 ಬಿಲಿಯನ್ ಡಾಲರ್ ಮೌಲ್ಯದ ಎಲ್ಎನ್ಜಿ ಒಪ್ಪಂದದ ಮುಂದುವರಿದ ಭಾಗವಾಗಿ ಇಂದಿನ ಬೆಳವಣಿಗೆಗಳನ್ನು ನೋಡಲಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕಾರನಾಗಿ ಹೊರಹೊಮ್ಮುತ್ತಿರುವ ಬೆನ್ನಲ್ಲೇ, ಭಾರತವು ತನ್ನ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರವಾದ ಯುಎಇ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ತನ್ನ ಆರ್ಥಿಕ ಮತ್ತು ಸುರಕ್ಷತೆಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯುದ್ಧದ ಭೀತಿಯ ನಡುವೆಯೂ ಈ ಭೇಟಿಯು ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.
ನೆದರ್ಲ್ಯಾಂಡ್ಸ್ಗೆ ಪ್ರಯಾಣ ಬೆಳೆಸಿದ ಮೋದಿ
ಭಾರತ ಮತ್ತು ಯುಎಇ ನಡುವಿನ ಆಯಕಟ್ಟಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಅಬುಧಾಬಿ ಭೇಟಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ ಪ್ರಧಾನಿ ಮೋದಿ, ಇದೀಗ ತಮ್ಮ ಐದು ರಾಷ್ಟ್ರಗಳ ಪ್ರವಾಸದ ಮುಂದಿನ ಭಾಗವಾಗಿ ನೆದರ್ಲ್ಯಾಂಡ್ಸ್ಗೆ ಪ್ರಯಾಣ ಬೆಳೆಸಿದ್ದಾರೆ.

ಅಬುಧಾಬಿಗೆ ಆಗಮಿಸಿದ ಪ್ರಧಾನಿಯವರಿಗೆ ಅದ್ಧೂರಿ ಸ್ವಾಗತ ಹಾಗೂ ಗೌರವ ವಂದನೆ ಅರ್ಪಿಸಲಾಯಿತು. ಉಭಯ ನಾಯಕರು ವಿಶೇಷವಾಗಿ ಇಂಧನ ಭದ್ರತೆ, ಪ್ರಾದೇಶಿಕ ಸ್ಥಿರತೆ ಮತ್ತು ಅಂತರಾಷ್ಟ್ರೀಯ ಹಿತಾಸಕ್ತಿಗಳ ಕುರಿತು ಮಹತ್ವದ ವಿಚಾರ ವಿನಿಮಯ ಮಾಡಿಕೊಂಡರು. ಜಾಗತಿಕವಾಗಿ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಇರುವ ಈ ಸಮಯದಲ್ಲಿ ಭಾರತದ ಇಂಧನ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಮಾತುಕತೆಗಳು ಅತ್ಯಂತ ನಿರ್ಣಾಯಕವಾಗಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಒಂದು ವಾರದ ಅವಧಿಯ ಈ ಸುದೀರ್ಘ ರಾಜತಾಂತ್ರಿಕ ಪ್ರವಾಸದಲ್ಲಿ ಯುಎಇ ಹೊರತುಪಡಿಸಿ ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳೂ ಸೇರಿವೆ. ಯುರೋಪ್ ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ವಿಸ್ತರಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ವ್ಯಾಪಾರ, ಸುಧಾರಿತ ತಂತ್ರಜ್ಞಾನ, ನಾವೀನ್ಯತೆ ಮತ್ತು ಹಸಿರು ಇಂಧನದಂತಹ ಕ್ಷೇತ್ರಗಳಲ್ಲಿ ಹೊಸ ಪಾಲುದಾರಿಕೆಯನ್ನು ಕಂಡುಕೊಳ್ಳಲು ಭಾರತ ಈ ಪ್ರವಾಸದ ಮೂಲಕ ಯೋಜಿಸಿದೆ.
ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಪ್ರಕಾರ, ಪ್ರಧಾನಿಯವರ ಈ ಭೇಟಿಯು ಭಾರತದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ. ಇಂಜಿನಿಯರಿಂಗ್, ಔಷಧ ತಯಾರಿಕೆ, ಜವಳಿ ಮತ್ತು ಡಿಜಿಟಲ್ ವ್ಯಾಪಾರ ಕ್ಷೇತ್ರಗಳಲ್ಲಿ ಭಾರತೀಯ ರಫ್ತುದಾರರಿಗೆ ವಿದೇಶಿ ಮಾರುಕಟ್ಟೆಯಲ್ಲಿ ದೊಡ್ಡ ಅವಕಾಶಗಳು ತೆರೆದುಕೊಳ್ಳಲಿವೆ. ಒಟ್ಟಾರೆಯಾಗಿ, ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸಲು ಹಾಗೂ ತಂತ್ರಜ್ಞಾನ ಮತ್ತು ಹೂಡಿಕೆಯನ್ನು ಆಕರ್ಷಿಸಲು ಈ ಪ್ರವಾಸವು ಮಹತ್ವದ ಮೈಲಿಗಲ್ಲಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಭೋಜಶಾಲಾ ಮಂದಿರ ಎಂದು ಘೋಷಿಸಿದ ಹೈಕೋರ್ಟ್; ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಓವೈಸಿ ಸಜ್ಜು
