ಜುನಾಗಢ: ಭಕ್ತಿ ಮತ್ತು ಸಂಭ್ರಮದ ಹೆಸರಿನಲ್ಲಿ ಭಕ್ತರು ನೋಟುಗಳ ಮಳೆಯನ್ನೇ (Viral Video) ಸುರಿಸಿರುವ ಅಪರೂಪದ ಘಟನೆಯೊಂದು ಗುಜರಾತ್ನ ಜುನಾಗಢ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಖಂಭಾಲಿಯಾದಲ್ಲಿ ಆಯೋಜಿಸಲಾಗಿದ್ದ ‘ಭಾಗವತ್ ಜ್ಞಾನ ಯಜ್ಞ’ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಸಿದ್ಧ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ‘ದಾಯರೋ’ (ಗುಜರಾತಿ ಜಾನಪದ ಗಾಯನ) ಪ್ರದರ್ಶನದ ವೇಳೆ ಈ ದೃಶ್ಯ ಕಂಡುಬಂದಿದೆ. ಗಾಯಕ ಕೃಷ್ಣನ ಭಜನೆಗಳನ್ನು ಹಾಡುತ್ತಿದ್ದಂತೆ ಮೈಮರೆತ ಭಕ್ತರು, ಅಕ್ಷರಶಃ ವೇದಿಕೆಯ ಮೇಲೆ ಹಣದ ರಾಶಿಯನ್ನೇ ಸೃಷ್ಟಿಸಿದ್ದಾರೆ.
ಏನಿದೆ ವಿಡಿಯೋದಲ್ಲಿ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ಗಾಯಕ ಕವಿರಾಜ್ ಅವರು ಹಾಡುತ್ತಾ ಸಾಗುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸುವುದು ಕಂಡುಬಂದಿದೆ. ಕಾರ್ಯಕ್ರಮದ ಆರಂಭದಲ್ಲಿ ಜನರು ಬಿಡಿ ನೋಟುಗಳನ್ನು ಎಸೆಯುತ್ತಿದ್ದರೆ, ಕಾರ್ಯಕ್ರಮ ರಂಗೇರುತ್ತಿದ್ದಂತೆ ಭಕ್ತರ ಉದಾರತೆಯೂ ಮಿತಿ ಮೀರಿದೆ. ಕೆಲ ಭಕ್ತರು ಬ್ಯಾಗ್ ಮತ್ತು ದೊಡ್ಡ ಚೀಲಗಳಲ್ಲಿ ಹಣವನ್ನು ತುಂಬಿಕೊಂಡು ಬಂದು ವೇದಿಕೆಯ ಮೇಲೆ ಸುರಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವೇದಿಕೆಯ ಮೇಲೆ ನೋಟುಗಳ ಗುಡ್ಡವೇ ನಿರ್ಮಾಣವಾಗಿದ್ದರೂ, ಗಾಯಕರು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಗಾಯನ ಮುಂದುವರಿಸಿದ್ದರು.
Watch | A singer was nearly buried under a shower of currency notes during a Dayro event in Gujarat. The video is from last night’s performance at a Shrimad Bhagwat Saptah in Khambhaliya, Dwarka district. Organisers announced that after covering the event’s operational expenses,… pic.twitter.com/C3MQY3ht28
— DeshGujarat (@DeshGujarat) May 15, 2026
ವಿಶೇಷವೆಂದರೆ, ಈ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಕಲಾವಿದ ಮಾಯಾಭಾಯ್ ಅಹಿರ್ ಅವರ ಪುತ್ರ ಜಯರಾಜ್ ಅಹಿರ್ ಕೂಡ ಭಾಗವಹಿಸಿದ್ದು, ಅವರು ಕೂಡ ಇತರ ಭಕ್ತರಂತೆ ವೇದಿಕೆಯ ಮೇಲೆ ಹಣವನ್ನು ಸುರಿದು ಸಂಭ್ರಮಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹಣ ಸಂಗ್ರಹವಾಗಿರುವುದು ಈಗ ಅಂತರಜಾಲದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾರ್ಯಕ್ರಮದ ಆಯೋಜಕರು, ವೇದಿಕೆಯ ಮೇಲೆ ಹರಿದುಬಂದ ಈ ಹಣವು ಗಾಯಕರ ವೈಯಕ್ತಿಕ ಲಾಭಕ್ಕಲ್ಲ ಎಂದು ತಿಳಿಸಿದ್ದಾರೆ. ಸಂಗ್ರಹವಾದ ಮೊತ್ತವನ್ನು ಸಂಪೂರ್ಣವಾಗಿ ಧಾರ್ಮಿಕ ಚಟುವಟಿಕೆಗಳು, ದಾನ ಧರ್ಮಗಳು ಮತ್ತು ಸಮುದಾಯದ ಕಲ್ಯಾಣ ಕಾರ್ಯಗಳಿಗಾಗಿ ಬಳಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಗುಜರಾತ್ನ ಜಾನಪದ ಸಂಸ್ಕೃತಿಯಲ್ಲಿ ಇಂತಹ ಆಚರಣೆಗಳು ಸಾಮಾನ್ಯವಾಗಿದ್ದರೂ, ಈ ಬಾರಿ ಭಕ್ತರು ಸುರಿಸಿದ ಹಣದ ಪ್ರಮಾಣವು ಎಲ್ಲರನ್ನೂ ಬೆರಗುಗೊಳಿಸುವಂತಿದೆ.
ಇದನ್ನೂ ಓದಿ: ಹೈಕೋರ್ಟ್ ಮಹತ್ವದ ಆದೇಶ: ಭೋಜಶಾಲಾ ಮಂದಿರಕ್ಕೆ ವಾಗ್ದೇವಿ ವಿಗ್ರಹ ಮರಳುವ ಕಾಲ ಹತ್ತಿರ?
