ತಿರುವನಂತಪುರಂ: ಕೇರಳದ (Kerala) ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಈ ಮೂಲಕ ಸಿಎಂ ರೇಸ್‌ನಲ್ಲಿದ್ದ ಕೆ.ಸಿ. ವೇಣುಗೋಪಾಲ್ ಅವರು ಅಂತಿಮ ಕ್ಷಣದಲ್ಲಿ ಹಿಂದೆ ಸರಿದಿದ್ದು, ಅವರಿಗೆ ರಾಷ್ಟ್ರಮಟ್ಟದ ಪ್ರಮುಖ ಜವಾಬ್ದಾರಿಯ ಆಫರ್ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವೇಣುಗೋಪಾಲ್‌ಗೆ ಎಐಸಿಸಿ ಅಧ್ಯಕ್ಷ ಪಟ್ಟ? ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕೆ.ಸಿ. ವೇಣುಗೋಪಾಲ್ ಅವರನ್ನು ಸಮಾಧಾನಪಡಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಗಿದ ನಂತರ, ವೇಣುಗೋಪಾಲ್ ಅವರಿಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಪಟ್ಟ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗಿದೆ. ಈ ದೊಡ್ಡ ಆಫರ್‌ನ ಹಿನ್ನೆಲೆಯಲ್ಲಿಯೇ ಅವರು ಕೇರಳ ರಾಜಕಾರಣದಿಂದ ಹಿಂದೆ ಸರಿದು ಸತೀಶನ್ ಅವರಿಗೆ ದಾರಿ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಸತೀಶನ್ ಆಯ್ಕೆಗೆ ಕಾರಣವಾದ ಜನಬೆಂಬಲ ವಿಪಕ್ಷ ನಾಯಕರಾಗಿ ಕೆಲಸ ಮಾಡಿರುವ ವಿ.ಡಿ. ಸತೀಶನ್ ಪರವಾಗಿ ಕೇರಳದಲ್ಲಿ ದೊಡ್ಡ ಮಟ್ಟದ ಜನಬೆಂಬಲ ವ್ಯಕ್ತವಾಗಿತ್ತು. ಹೈಕಮಾಂಡ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಸತೀಶನ್ ಪರವಾಗಿ ಲಕ್ಷಾಂತರ ಜನರು ಒಲವು ತೋರಿದ್ದರು. ಜೊತೆಗೆ ಮುಸ್ಲಿಂ ಲೀಗ್ ಸೇರಿದಂತೆ ಮೈತ್ರಿಕೂಟದ ಪ್ರಮುಖ ಪಕ್ಷಗಳು ಕೂಡ ಸತೀಶನ್ ಅವರೇ ಮುಖ್ಯಮಂತ್ರಿಯಾಗಲಿ ಎಂದು ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದವು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕಮಾಂಡ್ ಸತೀಶನ್ ಅವರಿಗೆ ಮಣೆ ಹಾಕಿದೆ.
ರಾಹುಲ್ ಗಾಂಧಿ ಸಂಧಾನ ಯಶಸ್ವಿ ಕೇರಳ ಕಾಂಗ್ರೆಸ್‌ನಲ್ಲಿ ಭಿನ್ನಮತ ತಲೆದೋರದಂತೆ ತಡೆಯಲು ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ಮತ್ತು ಹಿರಿಯ ನಾಯಕ ಎ.ಕೆ. ಆಂಟನಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಸಂಧಾನ ಯಶಸ್ವಿಗೊಳಿಸಿದ್ದಾರೆ. ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸತೀಶನ್ ಅವರನ್ನು ಸಿಎಂ ಮಾಡಿ, ಪಕ್ಷದ ನಿಷ್ಠಾವಂತ ನಾಯಕ ವೇಣುಗೋಪಾಲ್ ಅವರಿಗೆ ರಾಷ್ಟ್ರಮಟ್ಟದ ಉನ್ನತ ಸ್ಥಾನ ನೀಡುವ ಮೂಲಕ ಹೈಕಮಾಂಡ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಿರ್ಧಾರ ಕೈಗೊಂಡಿದೆ. ಸದ್ಯ ವೇಣುಗೋಪಾಲ್ ಅವರು ಎಐಸಿಸಿಯ ಮುಂದಿನ ಸಾರಥಿಯಾಗುವ ಲಕ್ಷಣಗಳು ದಟ್ಟವಾಗಿವೆ.
ಇದನ್ನೂ ಓದಿ: ಮತ್ತೆ ಮಣಿಪುರದಲ್ಲಿ ಹಿಂಸಾಚಾರ, ಉಗ್ರರ ದಾಳಿಗೆ ಮೂವರು ಬಲಿ
