High Court: KKRTCಗೆ ಹೈಕೋರ್ಟ್‌ ತರಾಟೆ, 25 ಸಾವಿರ ದಂಡ

High Court takes class to KKRTC on accident case

ಬೆಂಗಳೂರು: ಅಪಘಾತದ ಪ್ರಕರಣವೊಂದರಲ್ಲಿ ಸತ್ಯಾಂಶಗಳನ್ನು ಮುಚ್ಚಿಟ್ಟು, ನ್ಯಾಯಾಲಯದ ಹಾದಿ ತಪ್ಪಿಸಲು ಯತ್ನಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಹೈಕೋರ್ಟ್ (High Court) 25,000 ರೂಪಾಯಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ಘಟನೆಯ ವಿವರ: 2023ರ ಜೂನ್ ತಿಂಗಳಲ್ಲಿ ಕಂದಾಯ ಇಲಾಖೆಯ ಉದ್ಯೋಗಿ ವಿನೋದ್ ಕುಮಾರ್ ಅವರು ಕೆಕೆಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕ ಅತಿ ವೇಗವಾಗಿ ತಿರುವು ಪಡೆದ ಪರಿಣಾಮ ಬಸ್ಸಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಈ ಸಂಬಂಧ ಕಲಬುರಗಿಯ ನ್ಯಾಯಮಂಡಳಿಯು ಮೃತರ ಕುಟುಂಬಕ್ಕೆ 1.1 ಕೋಟಿ ರೂಪಾಯಿ ಪರಿಹಾರ ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಸಂಸ್ಥೆಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾದ ಸಂಸ್ಥೆ: ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಚಿಲ್ಲಾಕೂರು ಸುಮಲತಾ ಅವರಿದ್ದ ಪೀಠಕ್ಕೆ ಸಂಸ್ಥೆಯ ದ್ವಂದ್ವ ನಿಲುವುಗಳು ಕಂಡುಬಂದಿವೆ. ಸಾರಿಗೆ ಸಂಸ್ಥೆಯು ನ್ಯಾಯಾಲಯದಲ್ಲಿ “ಮೃತ ವಿನೋದ್ ಅವರೇ ಬಾಗಿಲ ಬಳಿ ನಿಂತು ನಿರ್ಲಕ್ಷ್ಯ ತೋರಿದ್ದರಿಂದ ಅಪಘಾತ ನಡೆದಿದೆ” ಎಂದು ವಾದಿಸಿತ್ತು. ಆದರೆ ಆಂತರಿಕವಾಗಿ ಇದೇ ಪ್ರಕರಣಕ್ಕಾಗಿ ಬಸ್ ಚಾಲಕನನ್ನು ಕೆಲಸದಿಂದ ವಜಾಗೊಳಿಸಿ, ನಿರ್ವಾಹಕನಿಗೆ ದಂಡ ವಿಧಿಸಿತ್ತು.

ತನ್ನದೇ ಸಿಬ್ಬಂದಿ ತಪ್ಪು ಮಾಡಿದ್ದಾರೆ ಎಂದು ಅವರ ವಿರುದ್ಧ ಕ್ರಮ ಕೈಗೊಂಡು, ಇತ್ತ ನ್ಯಾಯಾಲಯದಲ್ಲಿ ಮೃತ ವ್ಯಕ್ತಿಯದ್ದೇ ತಪ್ಪು ಎಂದು ವಾದಿಸುವುದು ಕಾನೂನಿನ ದೃಷ್ಟಿಯಲ್ಲಿ ಸರಿಯಲ್ಲ ಎಂದು ಹೈಕೋರ್ಟ್ ಆಕ್ಷೇಪಿಸಿದೆ. ಸಂಸ್ಥೆಯ ಇಂತಹ ನಡೆಯನ್ನು “ಅಪ್ರಾಬೆಟ್ ಮತ್ತು ರಿಪ್ರೊಬೇಟ್” (ಒಂದೇ ಸಮಯದಲ್ಲಿ ಹೌದು ಮತ್ತು ಅಲ್ಲ ಎನ್ನುವ ನಿಲುವು) ಎಂದು ಕರೆದಿರುವ ಪೀಠವು, ವಿಧಿಸಲಾದ ದಂಡವನ್ನು ಈ ಅಪೀಲು ಸಲ್ಲಿಸಲು ಅನುಮತಿ ನೀಡಿದ ಅಧಿಕಾರಿಗಳಿಂದಲೇ ವಸೂಲಿ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದರೊಂದಿಗೆ ಸಂಸ್ಥೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲು ವ್ಯವಸ್ಥಾಪಕ ನಿರ್ದೇಶಕರಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಹೈಟೆಕ್‌ ಭದ್ರತೆ, ಬಯೋಮೆಟ್ರಿಕ್‌ ಜಾರಿ

Leave a Reply

Your email address will not be published. Required fields are marked *