ಮುಂಬೈ: ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸಿಹಿ ಸುದ್ದಿಯ ಬೆನ್ನಲ್ಲೇ, ಅವರು ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ‘ರಾಕಾ’ ಚಿತ್ರದಿಂದ ಹೊರಬರಲಿದ್ದಾರೆ ಅಥವಾ ಅವರ ಪಾತ್ರವನ್ನು ಬದಲಾಯಿಸಲಾಗುವುದು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡಿದ್ದವು. ಆದರೆ, ಈ ಎಲ್ಲಾ ವದಂತಿಗಳನ್ನು ಚಿತ್ರತಂಡ ಇದೀಗ ಸ್ಪಷ್ಟವಾಗಿ ತಳ್ಳಿಹಾಕಿದೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ನಿಖರವಾಗಿಲ್ಲ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.
ಶೂಟಿಂಗ್ ಚೆನ್ನಾಗಿ ನಡೆಯುತ್ತಿದೆ
ಈ ಕುರಿತು ಮಾಹಿತಿ ನೀಡಿರುವ ಚಿತ್ರತಂಡ, ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎಂದು ಖಚಿತಪಡಿಸಿದೆ. ‘ರಾಕಾ’ ಚಿತ್ರದಲ್ಲಿ ದೀಪಿಕಾ ಅವರದು ಅತ್ಯಂತ ಪ್ರಮುಖ ಪಾತ್ರವಾಗಿದ್ದು, ಚಿತ್ರೀಕರಣದ ಸೆಟ್‌ನಲ್ಲಿ ಅವರು ಅದ್ಭುತ ಶಕ್ತಿಯೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದೀಪಿಕಾ ಅವರು ತಮ್ಮ ಗರ್ಭಾವಸ್ಥೆಯಲ್ಲೂ ಚಿತ್ರದ ಶೂಟಿಂಗ್ ಮುಂದುವರಿಸಲು ನಿರ್ಧರಿಸಿದ್ದು, ಚಿತ್ರದಲ್ಲಿನ ತೀವ್ರತರವಾದ ಆಕ್ಷನ್ ದೃಶ್ಯಗಳನ್ನು ಕೂಡ ಅವರೇ ನಿರ್ವಹಿಸುತ್ತಿದ್ದಾರೆ. ಈ ಸಮಯದಲ್ಲಿ ಅವರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಚಿತ್ರತಂಡ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ.
ಕಿಂಗ್ ಸಿನಿಮಾದಲ್ಲಿ ದೀಪಿಕಾ ನಟನೆ
‘ರಾಕಾ’ ಮತ್ತು ‘ಕಿಂಗ್’ ಸೇರಿದಂತೆ ದೀಪಿಕಾ ಅವರ ಕೈಯಲ್ಲಿರುವ ಬಹುತೇಕ ಯೋಜನೆಗಳ ಚಿತ್ರೀಕರಣವು ನಿಗದಿತ ವೇಳಾಪಟ್ಟಿಯಲ್ಲೇ ನಡೆಯುತ್ತಿದ್ದು, ಯಾವುದೇ ಬದಲಾವಣೆಗಳಿಲ್ಲದೆ ಶೂಟಿಂಗ್ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. ಅಟ್ಲೀ ನಿರ್ದೇಶನದಲ್ಲಿ, ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಭ್ರಹ್ಮಾಂಡದ ಚಿತ್ರವು 2027ರಲ್ಲಿ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅವರ 44ನೇ ಹುಟ್ಟುಹಬ್ಬದಂದು ಬಿಡುಗಡೆಯಾದ ಅವರ ಬೋಲ್ಡ್ ಲುಕ್ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಮೊದಲ ಮಗು ದುವಾಳ ಫೋಟೋದೊಂದಿಗೆ, ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಜಗತ್ತಿಗೆ ತಿಳಿಸಿದ್ದರು.
ಇದನ್ನೂ ಓದಿ: ಜೈಲರ್ 2 ಸೆಟ್‌ನಿಂದ ದೃಶ್ಯ ಸೋರಿಕೆ: ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಸನ್ ಪಿಕ್ಚರ್ಸ್ ಗರಂ
