BREAKING: ಮೋಸ್ಟ್ ವಾಂಟೆಡ್ ಉಗ್ರ ಅಮೀರ್ ಹಮ್ಜಾ ಮೇಲೆ ಭೀಕರ ಗುಂಡಿನ ದಾಳಿ

Breaking Terrorist Amir Hamza shot in Lahore

ಲಾಹೋರ್: ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ, ಲಷ್ಕರ್-ಎ-ತೈಬಾ (LeT) ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಸದಸ್ಯ ಅಮೀರ್ ಹಮ್ಜಾ ಮೇಲೆ ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು (Breaking) ಗುಂಡಿನ ದಾಳಿ ನಡೆಸಿದ್ದಾರೆ. ಲಾಹೋರ್‌ನ ಹಮ್ದರ್ದ್ ಚೌಕ್ ಬಳಿಯ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ಈ ಘಟನೆ ನಡೆದಿದ್ದು, ಸದ್ಯ ಹಮ್ಜಾನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ದಾಳಿ ನಡೆಸಿದ್ದ ಉಗ್ರ

ಲಷ್ಕರ್ ಸಂಘಟನೆಯ ಮತ್ತೊಬ್ಬ ಕುಖ್ಯಾತ ಉಗ್ರ ಹಫೀಜ್ ಸಯೀದ್ ಜೊತೆ ಸೇರಿ ಈ ಸಂಘಟನೆಯನ್ನು ಕಟ್ಟಿದ್ದ ಅಮೀರ್ ಹಮ್ಜಾ, ಭಾರತದಲ್ಲಿ ನಡೆದ ಹಲವು ಭೀಕರ ಭಯೋತ್ಪಾದಕ ದಾಳಿಗಳ ಹಿಂದೆ ಸಂಚು ರೂಪಿಸಿದ್ದನು. ವಿಶೇಷವಾಗಿ 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮೇಲೆ ನಡೆದ ದಾಳಿಯಲ್ಲಿ ಈತನ ಪಾತ್ರ ಪ್ರಮುಖವಾಗಿತ್ತು. ಈ ದಾಳಿಯ ನಂತರವೇ ಲಷ್ಕರ್ ಸಂಘಟನೆಯು ಕಾಶ್ಮೀರದ ಹೊರಗೆ ತನ್ನ ಕಬಂಧಬಾಹುವನ್ನು ಚಾಚಿದ್ದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಲಾಹೋರ್ ಪೊಲೀಸರು, ಹಮ್ಜಾ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಪರಿಚಿತರು ಗುಂಡಿನ ಮಳೆಗರೆದಿದ್ದಾರೆ ಎಂದು ತಿಳಿಸಿದ್ದಾರೆ. ದಾಳಿಯ ಬೆನ್ನಲ್ಲೇ ಆ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಅಮೆರಿಕ ಸರ್ಕಾರವು ಹಮ್ಜಾನನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿ ಹಲವು ವರ್ಷಗಳ ಹಿಂದೆಯೇ ನಿರ್ಬಂಧ ಹೇರಿತ್ತು. ಉಗ್ರರನ್ನು ಪ್ರಚೋದಿಸುವ ಪುಸ್ತಕಗಳನ್ನು ಬರೆಯುತ್ತಿದ್ದ ಈತ, ಲಷ್ಕರ್ ಸಂಘಟನೆಯ ಪ್ರಚಾರ ವಿಭಾಗದ ಮುಖ್ಯಸ್ಥನಾಗಿಯೂ ಕೆಲಸ ಮಾಡುತ್ತಿದ್ದನು.

2018ರಲ್ಲಿ ಲಷ್ಕರ್ ಸಂಘಟನೆಯ ಆರ್ಥಿಕ ಮೂಲಗಳ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದಾಗ, ಹಮ್ಜಾ ತಾಂತ್ರಿಕವಾಗಿ ಸಂಘಟನೆಯಿಂದ ದೂರ ಸರಿದು ‘ಜೈಶ್-ಎ-ಮಂಕಾಫ’ ಎಂಬ ಹೊಸ ಗುಂಪನ್ನು ಕಟ್ಟಿಕೊಂಡಿದ್ದನು. ಆದರೆ ಈ ಗುಂಪು ಕೇವಲ ಹೆಸರಿಗಷ್ಟೇ ಬೇರೆಯಾಗಿದ್ದು, ಪಾಕಿಸ್ತಾನದಲ್ಲಿ ಮುಕ್ತವಾಗಿ ಸಂಚರಿಸುತ್ತಾ ಕಾಶ್ಮೀರ ಸೇರಿದಂತೆ ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಲೇ ಇತ್ತು. ಈಗ ಆತನ ಮೇಲೆಯೇ ನಡೆದ ಈ ಪ್ರಾಣಾಂತಿಕ ದಾಳಿಯು ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿಲ್ಲ ಎಂದು ಟ್ರಂಪ್‌ಗೆ ಭರವಸೆ ನೀಡಿದ ಚೀನಾ

Leave a Reply

Your email address will not be published. Required fields are marked *