ಹೈದರಾಬಾದ್: ಕನ್ನಡದ ಕಿರಿಕ್ ಬೆಡಗಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಅವರೊಂದಿಗೆ ವಿವಾಹವಾದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ ಇದಾಗಿರುವುದರಿಂದ ರಶ್ಮಿಕಾ ಅವರಿಗೆ ಈ ದಿನ ಅತ್ಯಂತ ವಿಶೇಷವಾಗಿದೆ. ಈ ಸಂಭ್ರಮದ ಸಂದರ್ಭದಲ್ಲಿ ರಶ್ಮಿಕಾ ಅವರು ತಮ್ಮ ಪತಿ ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ರಶ್ಮಿಕಾಗೆ ಪತಿಯ ವಿಶ್
ರಶ್ಮಿಕಾ ಅವರ ಈ ವಿಶೇಷ ದಿನಕ್ಕೆ ಪತಿ ವಿಜಯ್ ದೇವರಕೊಂಡ ಅವರು ಅತ್ಯಂತ ಮುದ್ದಾದ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಮುಂಬರುವ ‘ರಣಬಾಲಿ’ ಚಿತ್ರದಲ್ಲಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರದ ಹೆಸರಾದ ‘ಜಯಮ್ಮ’ ಎಂಬ ಹೆಸರಿನಿಂದಲೇ ವಿಜಯ್ ವಿಶ್ ಮಾಡಿದ್ದಾರೆ. ವಿಡಿಯೋ ಕ್ಯಾಪ್ಶನ್‌ನಲ್ಲಿ “ಲವ್ ಯು ಜಯಮ್ಮ” ಎಂದು ಬರೆದುಕೊಳ್ಳುವ ಮೂಲಕ ಪತ್ನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾವು ಸೆಪ್ಟೆಂಬರ್ 11, 2026 ರಂದು ಜಾಗತಿಕವಾಗಿ ತೆರೆಕಾಣಲಿದೆ.
ಹುಟ್ಟುಹಬ್ಬದ ಸಂಭ್ರಮಕ್ಕೂ ಮುನ್ನ ರಶ್ಮಿಕಾ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಜಯ್ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದು, ಅವರು ವಿದೇಶದಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ತಮ್ಮ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡಿರುವ ರಶ್ಮಿಕಾ, ಪ್ರಸ್ತುತ ಜಪಾನ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಅನಿಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಸಾಧನೆಯು ಅವರ 30ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
