ನವದೆಹಲಿ: ದೆಹಲಿಯ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆಗಳ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿನ್ನೆ ಸುಮಾರು 33 ಸಾವಿರದ 500 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.
ನೂತನ ಕಾರಿಡಾರ್ ಉದ್ಘಾಟನೆ
ಈ ವೇಳೆ ಕೇಂದ್ರ ಸಚಿವ ಮನೋಹರ್ ಲಾಲ್, ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ, ಸಚಿವರಾದ ತೋಕನ್ ಸಾಹು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ 18 ಸಾವಿರದ 300 ಕೋಟಿ ರೂಪಾಯಿ ಮೌಲ್ಯದ ದೆಹಲಿ ಮೆಟ್ರೋದ ಎರಡು ನೂತನ ಕಾರಿಡಾರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಪ್ರಧಾನಿ, ದೇಶ ಪ್ರಗತಿಯ ಹೊಸ ವೇಗದಲ್ಲಿ ಮುನ್ನಡೆಯುತ್ತಿದ್ದು, ಎಲ್ಲ ವಲಯಗಳಲ್ಲಿ ಗಣನೀಯವಾಗಿ ಮುನ್ನಡೆಯುತ್ತಿದೆ. ಎಲ್ಲರನ್ನೊಳಗೊಂಡ ಅಭಿವೃದ್ಧಿ ಪರಿಕಲ್ಪನೆ ಯಶಸ್ವಿಯಾಗಿ ಜನಮನವನ್ನು ಮುಟ್ಟಿತ್ತಿದೆ. ಒಂದು ಕಾಲದಲ್ಲಿ ಭರವಸೆಗಷ್ಟೇ ಸೀಮಿತವಾಗಿದ್ದ ಯೋಜನೆಗಳು ಇಂದು ಕಾರ್ಯಗತವಾಗಿ ಜನತೆಯ ಆಶೋತ್ತರಗಳಿಗೆ ಧನಿಯಾಗಿವೆ ಎಂದರು.
ದೆಹಲಿಯ ವಿಸ್ತೃತ ಮೆಟ್ರೋ ಜಾಲ ರಾಜಧಾನಿಯ ಜನತೆಗೆ ಆಧುನಿಕ ಸುರಕ್ಷಿತ, ತ್ವರಿತ ಪ್ರಯಾಣಕ್ಕೆ ವೇದಿಕೆಯಾಗಿದೆ. ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯ ಜತೆಗೆ ಜೀವನ ಭದ್ರತೆಯನ್ನು ತನ್ನ ಆದ್ಯತೆಯಾಗಿ ಪರಿಗಣಿಸಿದೆ. ಆದ್ಯತಾ ವಲಯದ ಕುಟುಂಬಗಳಿಗೆ ಹೊಸ ಭರವಸೆ ಮತ್ತು ವಿಶ್ವಾಸದೊಂದಿಗೆ ಆಧುನಿಕ ಸುರಕ್ಷಿತ ಮತ್ತು ಸುಸಜ್ಜಿತ ವಸತಿ ಫ್ಲಾಟ್ ಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ನಿನ್ನೆ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದ್ದು, ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಆದರೆ ನಿನ್ನೆ ಪಶ್ಚಿಮ ಬಂಗಾಳದಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಅಲ್ಲಿನ ಸರ್ಕಾರ ಅಗೌರವ ತೋರಿರುವುದು ಕಳವಳಕಾರಿಯಾಗಿದೆ. ಬುಡಕಟ್ಟು ಸಮುದಾಯದಿಂದ ಬಂದ ಮಹಿಳೆ ಹಾಗೂ ದೇಶದ ಪ್ರಥಮ ಪ್ರಜೆಗೆ ಅಪಮಾನ ಮಾಡುವುದು ಖಂಡನಾರ್ಹ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉದಾತ್ತ ಸಂಪ್ರದಾಯಕ್ಕೆ ಇದರಿಂದ ಅವಮಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ಫಲಾನುಭವಿಗಳಿಗೆ ಮನೆಗಳ ಕೀಲಿ ಕೈ ಹಸ್ತಾಂತರ
ಇದಕ್ಕೂ ಮುನ್ನ, GPRA ಯೋಜನೆಯಡಿ ಸರೋಜಿನಿ ನಗರ, ನೇತಾಜಿ ನಗರ ಮತ್ತು ಕಸ್ತೂರ್ ಬಾ ನಗರಗಳಲ್ಲಿ 15 ಸಾವಿರದ 200 ಕೋಟಿ ರೂಪಾಯಿ ಮೊತ್ತದ ಆಧುನಿಕ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಮನೆಗಳ ಕೀಲಿ ಕೈ ವಿತರಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಫಲಾನುಭವಗಳೊಂದಿಗೆ ಸಂವಾದ ನಡೆಸಿದರು. ಈ ಯೋಜನೆಯಡಿ ಸರ್ಕಾರಿ ನೌಕರರಿಗೆ 9 ಸಾವಿರದ 350ಕ್ಕೂ ಹೆಚ್ಚು ಆಧುನಿಕ ವಸತಿ ಸಮುಚ್ಛಯಗಳು ಮತ್ತು 48 ಲಕ್ಷ ಚದರ ಅಡಿ ಕಚೇರಿ ಸ್ಥಳ ಲಭ್ಯವಾಗಲಿದೆ.
