Tamil Nadu: ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ಕಟ್?

tamil nadu congress and dmk bond break

ಚೆನ್ನೈ: ತಮಿಳುನಾಡು (Tamil Nadu) ರಾಜಕಾರಣದಲ್ಲಿ ಆಡಳಿತಾರೂಢ ಡಿಎಂಕೆ (DMK) ಮತ್ತು ಕಾಂಗ್ರೆಸ್ (Congress) ಪಕ್ಷಗಳ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಿರುವುದು ಈಗ ಅಧಿಕೃತವಾಗಿ ಮುನ್ನೆಲೆಗೆ ಬಂದಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ನಟ ಜೋಸೆಫ್ ವಿಜಯ್ (Actor Vijay) ಅವರು ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನಕ್ಕೇರುವುದನ್ನು ತಡೆಯಲು ಡಿಎಂಕೆ ರೂಪಿಸಿದ್ದ ಎಲ್ಲಾ ರಹಸ್ಯ ತಂತ್ರಗಳು ಸಂಪೂರ್ಣವಾಗಿ ಹಳಿ ತಪ್ಪಿವೆ. ಆ ಹತಾಶೆಯಿಂದಲೇ ಡಿಎಂಕೆ ಈಗ ನಾಟಕವಾಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಡೆದ ಡಿಎಂಕೆ ಯುವ ಘಟಕದ ಸಭೆಯಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ನಿರ್ಣಯ ಅಂಗೀಕರಿಸಿದ್ದಕ್ಕೆ ಠಾಗೋರ್ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಬಿಜೆಪಿ-ಡಿಎಂಕೆ ಸೀಕ್ರೆಟ್‌ ನಂಟು

ಬಿಜೆಪಿಯ ಇಷ್ಟದಂತೆಯೇ ತಮಿಳುನಾಡಿನಲ್ಲಿ ನಟ ವಿಜಯ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯುವುದೇ ಡಿಎಂಕೆಯ ಪ್ರಮುಖ ಕಾರ್ಯಸೂಚಿಯಾಗಿತ್ತು. ಆದರೆ ಅವರ ಈ ದೊಡ್ಡ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದರಿಂದಲೇ, ಡಿಎಂಕೆ ಯುವ ಘಟಕವು ಈಗ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಗುರಿಯಾಗಿಸುತ್ತಿದೆ ಎಂದು ಮಾಣಿಕಂ ಠಾಗೋರ್ ವಿವರಿಸಿದ್ದಾರೆ. ತಮಿಳುನಾಡಿನ ಜನತೆ ಡಿಎಂಕೆಯ ಈ ಇರಾದೆಗೆ ಸಾಥ್ ನೀಡಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲದೆ, ಮೈತ್ರಿಕೂಟದಲ್ಲಿರುವ ಎಡಪಕ್ಷಗಳು, ವಿಸಿಕೆ (VCK) ಮತ್ತು ಐಯುಎಂಎಲ್ (IUML) ಪಕ್ಷಗಳ ನಾಯಕರು ಕೂಡ ಡಿಎಂಕೆಯ ತೆರೆಮರೆಯ ರಾಜಕೀಯ ಆಟಗಳನ್ನು ಸಾರ್ವಜನಿಕವಾಗಿ ಖಂಡಿಸುತ್ತಿದ್ದಾರೆ. ಹೊರನೋಟಕ್ಕೆ ಜಾತ್ಯತೀತ ತತ್ವಗಳ ಮುಖವಾಡ ಧರಿಸಿರುವ ಡಿಎಂಕೆ, ಒಳಗೊಳಗೆ ಕೇಸರಿ ಪಕ್ಷದೊಂದಿಗೆ (ಬಿಜೆಪಿ) ರಹಸ್ಯ ಮೈತ್ರಿ ಮುಂದುವರಿಸಿದೆ ಎಂದು ಠಾಗೋರ್ ಬಾಂಬ್ ಸಿಡಿಸಿದ್ದಾರೆ.

ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿದ್ದ ದಿನದಂದೇ ತಮಿಳುನಾಡಿನ ಪ್ರಮುಖ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ (AIADMK) ನಡುವೆ ಒಪ್ಪಂದಕ್ಕಾಗಿ ರಹಸ್ಯ ಮಾತುಕತೆಗಳು ಶುರುವಾಗಿದ್ದವು. ಬಿಜೆಪಿಯ ಪ್ರಭಾವಿ ಹಿರಿಯ ನಾಯಕರೊಬ್ಬರು ಈ ಎರಡೂ ಪಕ್ಷಗಳ ನಡುವೆ ಸಂಧಾನಕಾರರಾಗಿ ಕೆಲಸ ಮಾಡಿದ್ದರು ಎಂಬ ಆಘಾತಕಾರಿ ಸತ್ಯವನ್ನು ಠಾಗೋರ್ ಬಯಲು ಮಾಡಿದ್ದಾರೆ. ಈಗ ಆ ಎಲ್ಲಾ ರಹಸ್ಯಗಳು ಒಂದೊಂದಾಗಿ ಸಾರ್ವಜನಿಕರ ಮುಂದೆ ಅನಾವರಣಗೊಳ್ಳುತ್ತಿವೆ ಎಂದಿದ್ದಾರೆ. ತಮಿಳುನಾಡು ಚುನಾವಣೋತ್ತರ ರಾಜಕೀಯದ ಬೆನ್ನಲ್ಲೇ ಮೈತ್ರಿಕೂಟದ ಪ್ರಮುಖ ಪಾಲುದಾರರ ನಡುವೆ ಉಂಟಾಗಿರುವ ಈ ಭಿನ್ನಮತ ಮತ್ತು ತೀವ್ರ ವಾಕ್ಸಮರವು ತಮಿಳುನಾಡು ರಾಜಕಾರಣದಲ್ಲಿ ಹೊಸ ಬಿರುಗಾಳಿಯನ್ನು ಎಬ್ಬಿಸಿದ್ದು, ಮುಂಬರುವ ದಿನಗಳಲ್ಲಿ ಮೈತ್ರಿಕೂಟದ ಅಸ್ತಿತ್ವಕ್ಕೆ ಧಕ್ಕೆ ತರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಇದನ್ನೂ ಓದಿ: ಮೋದಿ ಸರ್ಕಾರ ಪತನ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಆಕ್ರೋಶ

Leave a Reply

Your email address will not be published. Required fields are marked *