ಮುಂಬೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಭರ್ಜರಿ ಗೆಲುವು ಇಡೀ ದೇಶದ ಗಮನ ಸೆಳೆದಿದೆ. ಇದರ ನಡುವೆಯೇ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಅವರ ನಡುವಿನ ಸ್ನೇಹದ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಕುತೂಹಲಕಾರಿ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಮದುವೆ ಆಸೆ ವ್ಯಕ್ತಪಡಿಸಿದ ರಾಖಿ: ಸಂದರ್ಶನವೊಂದರಲ್ಲಿ ಮಾತನಾಡಿದ ರಾಖಿ ಸಾವಂತ್, ವಿಜಯ್ ಮತ್ತು ತ್ರಿಷಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. “ನೋಡಲು ಅದ್ಭುತವಾಗಿ ಕಾಣುವ ಈ ಜೋಡಿ ಶೀಘ್ರವೇ ವಿವಾಹವಾಗಲಿ. ಅವರ ಮದುವೆಯ ಮೆಹೆಂದಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ” ಎಂದು ರಾಖಿ ತಮಾಷೆ ಮಾಡಿದ್ದಾರೆ. ಇದೇ ವೇಳೆ ವಿಜಯ್ ಅವರ ರಾಜಕೀಯ ಸಾಧನೆಯನ್ನು ಮೆಚ್ಚಿರುವ ಅವರು, ವಿಜಯ್ ನೇತೃತ್ವದ ಪಕ್ಷವನ್ನು ಸೇರುವ ಇಚ್ಛೆಯನ್ನೂ ಹೊರಹಾಕಿದ್ದಾರೆ.
ದಶಕಗಳ ಸ್ನೇಹ ಮತ್ತು ಸಿನಿ ಪಯಣ: ‘ಗಿಲ್ಲಿ’ ಮತ್ತು ‘ಕುರುವಿ’ ಅಂತಹ ಮೆಗಾ ಹಿಟ್ ಸಿನಿಮಾಗಳ ಮೂಲಕ ಈ ಜೋಡಿ ದಕ್ಷಿಣ ಭಾರತದ ಮನೆಮಾತಾಗಿದೆ. 2008ರ ನಂತರ ಸುಮಾರು 15 ವರ್ಷಗಳ ಕಾಲ ಇಬ್ಬರೂ ಜೊತೆಯಾಗಿ ನಟಿಸಿರಲಿಲ್ಲ. ಇದು ಅನೇಕ ಗಾಸಿಪ್‌ಗಳಿಗೆ ದಾರಿ ಮಾಡಿಕೊಟ್ಟಿತ್ತು. ಆದರೆ 2023ರಲ್ಲಿ ತೆರೆಕಂಡ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾದ ಈ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾವು ಕೇವಲ ಉತ್ತಮ ಸ್ನೇಹಿತರು ಎಂದು ಇಬ್ಬರೂ ಸ್ಪಷ್ಟಪಡಿಸಿದ್ದರೂ, ಇವರ ಬಾಂಧವ್ಯದ ಬಗ್ಗೆ ಜನರ ಕುತೂಹಲ ಮಾತ್ರ ಕಡಿಮೆಯಾಗಿಲ್ಲ.
ತ್ರಿಷಾ ಕೃಷ್ಣನ್ ರಾಜಕೀಯ ಪ್ರವೇಶದ ಗುಸುಗುಸು: ಇನ್ನೊಂದೆಡೆ, ವಿಜಯ್ ಅವರ ಟಿವಿಕೆ (TVK) ಪಕ್ಷವು ತ್ರಿಷಾ ಅವರನ್ನು ರಾಜಕೀಯಕ್ಕೆ ತರಲು ಸಿದ್ಧತೆ ನಡೆಸುತ್ತಿದೆ ಎಂಬ ಚರ್ಚೆಗಳು ಜೋರಾಗಿವೆ. ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ನಿಯಮದ ಪ್ರಕಾರ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಿದೆ. ಈ ತೆರವಾಗುವ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ತ್ರಿಷಾ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಪಕ್ಷದ ಮುಖಂಡರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತ್ರಿಷಾ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಒಂದು ವೇಳೆ ಅವರು ರಾಜಕೀಯಕ್ಕೆ ಬಂದರೆ ತಮಿಳುನಾಡಿನಲ್ಲಿ ಹೊಸ ಸಮೀಕರಣಗಳು ಸೃಷ್ಟಿಯಾಗಲಿವೆ.
ಇದನ್ನೂ ಓದಿ: ವಿಜಯ್ ‘ಮೌನ’ದ ರಹಸ್ಯ ಬಿಚ್ಚಿಟ್ಟಿದ್ದ ತ್ರಿಷಾ: ಅಂದು ಅಸಹನೀಯ ಎಂದಿದ್ದ ಗುಣವೇ ಇಂದು ರಾಜಕೀಯಕ್ಕೆ ಆಸರೆ!
