TOP NEWS

Lokayukta: ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ: ಬೆಂಗಳೂರು ದಕ್ಷಿಣ ಆರ್‌ಟಿಒ ಅಧಿಕಾರಿಗಳಿಗೆ ಕ್ಲಾಸ್; ಹಾವೇರಿಯಲ್ಲಿ ಅಕ್ರಮ ಮರಳು ದಂಧೆಕೋರರು ಉಡೀಸ್!

Lokayukta raid on bengaluru RTO office and haveri sand mining handle

ರಾಮನಗರ: ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಾದೇಶಿಕ ಸಾರಿಗೆ (RTO) ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ಅವರ ನೇತೃತ್ವದಲ್ಲಿ ಮಿಂಚಿನ (Lokayukta) ದಾಳಿ ನಡೆದಿದೆ. ಕಚೇರಿಯ ಇಂಚಿಂಚೂ ಪರಿಶೀಲನೆ ನಡೆಸಿದ ಅಧಿಕಾರಿಗಳು, ಅಲ್ಲಿನ ಅವ್ಯವಸ್ಥೆ ಕಂಡು ಕಂಗಾಲಾಗಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಕಚೇರಿ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದ್ದು, ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುತ್ತಿದ್ದ ಅಧಿಕಾರಿಗಳಿಗೆ ಲೋಕಾಯುಕ್ತರು ಸರಿಯಾದ ಪಾಠ ಕಲಿಸಿದ್ದಾರೆ.

ತಾಯಿಯ ಬದಲು ಕೆಲಸಕ್ಕೆ ಬಂದ ಮಗಳು

ಈ ದಾಳಿಯ ವೇಳೆ ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲಿಗೆ ಆಕೆಯ ಮಗಳೇ ಅನಧಿಕೃತವಾಗಿ ಬಂದು ಸರ್ಕಾರಿ ಕೆಲಸ ನಿರ್ವಹಿಸುತ್ತಿದ್ದ ಆಘಾತಕಾರಿ ಸತ್ಯ ಬಯಲಾಗಿದೆ. ಇದರೊಂದಿಗೆ, ವಾಹನ ಸವಾರರು ಹಣ ಪಾವತಿಸಿ ಮೂರು ತಿಂಗಳು ಕಳೆದಿದ್ದರೂ ಅವರಿಗೆ ತಲುಪಿಸಬೇಕಾಗಿದ್ದ ನೂರಾರು ಸ್ಮಾರ್ಟ್ ಕಾರ್ಡ್‌ಗಳನ್ನು ಕಚೇರಿಯ ಒಳಗೇ ಶೇಖರಿಸಿಟ್ಟಿರುವುದು ಪತ್ತೆಯಾಗಿದೆ. ಇಡೀ ಕಚೇರಿಯಲ್ಲಿ ಕೇವಲ ಮಧ್ಯವರ್ತಿಗಳು ಹಾಗೂ ಗುತ್ತಿಗೆ ನೌಕರರ ದರ್ಬಾರ್ ನಡೆಯುತ್ತಿದ್ದು, ಬ್ರೋಕರ್‌ಗಳ ಮೂಲಕ ಬರುವ ಫೈಲ್‌ಗಳಿಗೆ ಮಾತ್ರ ಮೊದಲ ಆದ್ಯತೆ ನೀಡಲಾಗುತ್ತಿತ್ತು ಎಂಬ ಸಾರ್ವಜನಿಕರ ಆರೋಪ ಈ ದಾಳಿಯಿಂದ ಸಾಬೀತಾಗಿದೆ. ಈ ಹಿಂದೆ ಕಚೇರಿಯ ಆವರಣದಲ್ಲೇ ಏಜೆಂಟ್‌ಗಳ ನಡುವೆ ದೊಡ್ಡ ಗಲಾಟೆ ನಡೆದಿದ್ದರೂ ಸಹ ಸಾರಿಗೆ ಆಯುಕ್ತರು ಯಾವುದೇ ದೂರು ನೀಡದೆ ಮೌನ ವಹಿಸಿದ್ದರು. ಲೋಕಾಯುಕ್ತ ಎಸ್ಪಿ ಸ್ನೇಹಾ ಅವರು ಕೇಳಿದ ಖಾರವಾದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆರ್‌ಟಿಒ ಅಧಿಕಾರಿ ಟಿ.ಎ. ಸತೀಶ್ ಬಾಬು ಕಚೇರಿಯಲ್ಲೇ ತಬ್ಬಿಬ್ಬಾಗಿದ್ದಾರೆ.

ಇತ್ತ ರಾಜಧಾನಿಯಲ್ಲಿ ಆರ್‌ಟಿಒ ಕಚೇರಿಗೆ ಶಾಕ್ ನೀಡಿದ್ದರೇ, ಅತ್ತ ಹಾವೇರಿ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ದಂಧೆಗೆ ಲೋಕಾಯುಕ್ತ ಪೊಲೀಸರು ಬ್ರೇಕ್ ಹಾಕಿದ್ದಾರೆ. ರಾಣೇಬೆನ್ನೂರು ತಾಲ್ಲೂಕಿನ ನಿಟಪಳ್ಳಿ, ಚಂದಾಪುರ, ಬೆಲೂರು, ಐರಣಿ ಹರನಗಿರಿ, ಕೋಟಿಹಾಳ ಮತ್ತು ಚಿಕ್ಕಕುರವತ್ತಿ ಗ್ರಾಮಗಳ ವ್ಯಾಪ್ತಿಯ ನದಿ ತೀರ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ಅವರ ಸಾರಥ್ಯದಲ್ಲಿ ಏಕಕಾಲಕ್ಕೆ ರೇಡ್ ಮಾಡಲಾಗಿದೆ. ಈ ಭರ್ಜರಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಡಲಾಗಿದ್ದ ಸುಮಾರು 12,779 ಮೆಟ್ರಿಕ್ ಟನ್ ಮರಳು, ಮರಳು ಎತ್ತಲು ಬಳಸುತ್ತಿದ್ದ ಎರಡು ಜೆಸಿಬಿ ಯಂತ್ರಗಳು ಹಾಗೂ ನಾಲ್ಕು ತೆಪ್ಪಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಚಾರಿತ್ರ್ಯ ವಿಮರ್ಶಿಸಿ ಮತ್ತೆ ಕಿಡಿ ಹೊತ್ತಿಸಿದ ಪ್ರೊ. ಭಗವಾನ್; ಡಿಜಿಪಿಗೆ ದೂರು

Leave a Reply

Your email address will not be published. Required fields are marked *