ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಭಾರಿ ಆಕ್ಷನ್ ತೆಗೆದುಕೊಂಡಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಾದ ಅತ್ಯಂತ ಪ್ರಮುಖ ಸಭೆಗೆ ಗೈರುಹಾಜರಾದ ಕೆಪಿಸಿಸಿ ಪದಾಧಿಕಾರಿಗಳಿಗೆ ಬಿಗ್ ಶಾಕ್ ನೀಡಲಾಗಿದ್ದು, ಇಬ್ಬರು ಪ್ರಮುಖ ವಕ್ತಾರರು ಸೇರಿದಂತೆ ಹಲವು ಹಿರಿಯ ನಾಯಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಹುದ್ದೆಗಳಿಂದ ವಜಾಗೊಳಿಸಲಾಗಿದೆ.
ಯಾರಿಗೆಲ್ಲಾ ಗೇಟ್‌ಪಾಸ್?
ಪಕ್ಷದ ಅತ್ಯಂತ ಪ್ರಮುಖ ಸಭೆಯನ್ನು ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರರಾದ ನಿಕೇತ್ ರಾಜ್ ಮೌರ್ಯ, ಚಿತ್ರನಟಿ ಭಾವನಾ ರಾಮಣ್ಣ ಹಾಗೂ ಪ್ರಮುಖ ನಾಯಕರಾದ ಶಿವಮೂರ್ತಿ ನಾಯಕ್, ಎಂ.ಸಿ. ವೇಣುಗೋಪಾಲ್, ಷಣ್ಮುಖ ಶಿವಳ್ಳಿ, ಸಿ.ಆರ್. ಮನೋಹರ್ ಅವರಿಗೆ ಡಿ.ಕೆ. ಶಿವಕುಮಾರ್ ನೇರವಾಗಿ ಗೇಟ್ ಪಾಸ್ ನೀಡಿದ್ದಾರೆ. ಇವರ ಜೊತೆಗೆ ಮೂವರು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಬರೋಬ್ಬರಿ ೨೯ ಪ್ರಧಾನ ಕಾರ್ಯದರ್ಶಿಗಳನ್ನು ಪಕ್ಷದ ಹುದ್ದೆಗಳಿಂದ ತಕ್ಷಣವೇ ಕೈಬಿಟ್ಟು ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಈ ಮಹತ್ವದ ಸಭೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೂಡ ಆಗಮಿಸಿದ್ದರು. ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದ್ದ ಈ ಸಭೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪದಾಧಿಕಾರಿಗಳು ಗೈರಾಗಿರುವುದನ್ನು ಸುರ್ಜೇವಾಲಾ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು. ಸಭೆಯನ್ನು ಲಘುವಾಗಿ ಪರಿಗಣಿಸಿದ ನಾಯಕರ ವಿರುದ್ಧ ತಕ್ಷಣವೇ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಿದ್ದರು. ವರಿಷ್ಠರ ಸೂಚನೆ ಬೆನ್ನಲ್ಲೇ ಆಕ್ಷನ್ ಮೋಡ್‌ಗೆ ಇಳಿದ ಡಿ.ಕೆ. ಶಿವಕುಮಾರ್, ಇಷ್ಟೂ ಜನ ನಾಯಕರಿಗೆ ಹುದ್ದೆಯಿಂದ ಕೋಕ್ ನೀಡುವ ಮೂಲಕ ಇಡೀ ಪಕ್ಷಕ್ಕೆ ಖಡಕ್ ಬಿಸಿ ಮುಟ್ಟಿಸಿದ್ದಾರೆ.
ಒಂದೆಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ನಾಯಕತ್ವ ಬದಲಾವಣೆಯ ಹೈವೋಲ್ಟೇಜ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇಂತಹ ಸೂಕ್ಷ್ಮ ಸಮಯದಲ್ಲೇ ಡಿ.ಕೆ. ಶಿವಕುಮಾರ್ ಅವರು ಸಭೆಗೆ ಗೈರಾದವರ ವಿರುದ್ಧ ಇಷ್ಟೊಂದು ಕಠಿಣ ಕ್ರಮ ಕೈಗೊಂಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪಕ್ಷದಲ್ಲಿ ಎಷ್ಟೇ ದೊಡ್ಡ ನಾಯಕರಾಗಿದ್ದರೂ ಶಿಸ್ತು ಮತ್ತು ಜವಾಬ್ದಾರಿ ಮುಖ್ಯ ಎಂಬುದನ್ನು ಈ ಆದೇಶದ ಮೂಲಕ ಸಾರಲಾಗಿದೆ.
ಇದನ್ನೂ ಓದಿ: ರಾಜೀನಾಮೆ ವದಂತಿ ಬೆನ್ನಲ್ಲೇ ಆಡಳಿತದ 3 ವರ್ಷದ ಸಾಧನೆ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
