ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡದ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡ (Yogesh Gowda) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಕೊಲೆಯ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿರುವ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿ ದೋಷಿಗಳಿಗೆ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 30 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ಸುಮಾರು ಒಂದು ದಶಕದ ಸುದೀರ್ಘ ಕಾನೂನು ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಂತಾಗಿದ್ದು, ಹತ್ಯೆಯಾದ ಯೋಗೀಶ್ ಗೌಡ ಅವರ ಮಕ್ಕಳ ಶಿಕ್ಷಣಕ್ಕಾಗಿ 16 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆಯೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಆದೇಶಿಸಿದ್ದಾರೆ.
ಕಳೆದ 2016ರ ಜೂನ್ 15 ರಂದು ಯೋಗೀಶ್ ಗೌಡ ಅವರನ್ನು ಅವರದ್ದೇ ಜಿಮ್‌ನಲ್ಲಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ, ವಿನಯ್ ಕುಲಕರ್ಣಿ ಅವರೇ ಈ ಕೊಲೆಯ ಮಾಸ್ಟರ್ ಮೈಂಡ್ ಎಂದು ಚಾರ್ಜ್‌ಶೀಟ್ ಸಲ್ಲಿಸಿ 2020 ರಲ್ಲಿ ಅವರನ್ನು ಬಂಧಿಸಿತ್ತು. ನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದ ಕುಲಕರ್ಣಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಕಾರಣಕ್ಕಾಗಿ 2025 ರ ಜೂನ್‌ನಲ್ಲಿ ಅವರ ಜಾಮೀನನ್ನು ರದ್ದುಗೊಳಿಸಲಾಗಿತ್ತು. ಪ್ರಸ್ತುತ ಕೋರ್ಟ್ ಕೊಲೆ ಮತ್ತು ಕ್ರಿಮಿನಲ್ ಸಂಚಿನ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯ ಜೊತೆಗೆ, ಸಾಕ್ಷ್ಯ ನಾಶಪಡಿಸಿದ ಆರೋಪಕ್ಕೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, ಎಲ್ಲಾ ಶಿಕ್ಷೆಗಳೂ ಏಕಕಾಲದಲ್ಲಿ ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಅವರಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿಯ ಆರೋಪಗಳಿಂದ ಮುಕ್ತಿ ನೀಡಲಾಗಿದ್ದು, ವಾಸುದೇವ ರಾಮ ನಿಲೇಕಣಿ ಹಾಗೂ ಸೋಮಶೇಖರ್ ಎಂಬ ಇಬ್ಬರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ತನಿಖೆಯ ಹಂತದಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ಕೋರ್ಟ್ ನಿರ್ದೇಶಿಸಿದೆ.
ಇದೇ ಪ್ರಕರಣದಲ್ಲಿ ಭಾರಿ ಸಾಕ್ಷ್ಯ ನಾಶ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಹೊತ್ತಿರುವ ಅಂದಿನ ತನಿಖಾಧಿಕಾರಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಅವರ ಜಾಮೀನು ಅರ್ಜಿಗೆ ಸಿಬಿಐ ಹೈಕೋರ್ಟ್‌ನಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಿಬಿಐ ಪರವಾಗಿ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ನ್ಯಾಯಾಲಯದಲ್ಲಿ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದು, ಇನ್ಸ್‌ಪೆಕ್ಟರ್ ಟಿಂಗರಿಕರ್ ಅವರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರೂ ಪ್ರಮುಖ ಆರೋಪಿಗಳನ್ನು ತಪ್ಪಿಸಿಕೊಳ್ಳಲು ಬಿಟ್ಟಿದ್ದರು. ಅಷ್ಟೇ ಅಲ್ಲದೆ, ವಿನಯ್ ಕುಲಕರ್ಣಿ ಅವರ ಹೆಸರನ್ನು ಎಲ್ಲಿಯೂ ಹೇಳದಂತೆ ಸಾಕ್ಷಿಗಳಿಗೆ ನೇರವಾಗಿ ಬೆದರಿಕೆ ಹಾಕಿದ್ದರು. ತಾವೇ ನಕಲಿ ಸಾಕ್ಷಿಗಳನ್ನು ಸೃಷ್ಟಿಸಲು ಮುಂದಾಗಿದ್ದ ಟಿಂಗರಿಕರ್, ಕೊಲೆಗೆ ಬಳಸಿದ್ದ ಅಸಲಿ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ಮರಣೋತ್ತರ ಪರೀಕ್ಷೆಯ ವೇಳೆ ಸಿಕ್ಕಿದ್ದ ಮೃತರ ರಕ್ತವನ್ನು ನಕಲಿ ಆಯುಧಗಳಿಗೆ ಸವರುವ ಮೂಲಕ ತನಿಖೆಯ ದಿಕ್ಕನ್ನೇ ತಪ್ಪಿಸಿದ್ದರು ಎಂದು ಸಿಬಿಐ ವಾದಿಸಿದೆ.
ಈ ಗಂಭೀರ ಅಪರಾಧಕ್ಕಾಗಿ ವಿಶೇಷ ನ್ಯಾಯಾಲಯದಿಂದ 7 ವರ್ಷಗಳ ಗರಿಷ್ಠ ಜೈಲು ಶಿಕ್ಷೆಗೆ ಗುರಿಯಾಗಿರುವ ಟಿಂಗರಿಕರ್, ಸದ್ಯ ಜೈಲಿನಲ್ಲಿ ಕಳೆದಿರುವುದು ಕೇವಲ 70 ದಿನಗಳು ಮಾತ್ರ ಆಗಿರುವುದರಿಂದ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ ಒತ್ತಾಯಿಸಿದೆ. ಟಿಂಗರಿಕರ್ ಪರ ವಕೀಲರು ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದ್ದು, ಈಗಾಗಲೇ ಅವರು ಅಮಾನತ್ತಿನಲ್ಲಿ ಇರುವುದರಿಂದ ಶಿಕ್ಷೆ ಅಮಾನತುಗೊಳಿಸಬೇಕು ಎಂದು ಮನವಿ ಮಾಡಿದ್ದು, ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಗ್ ಆಕ್ಷನ್: ಸಭೆಗೆ ಗೈರಾದ ನಾಯಕರು ಪಕ್ಷದ ಹುದ್ದೆಗಳಿಂದ ವಜಾ!
