TOP NEWS

Kangana Ranaut: ಮುಂಬೈ ದಾಳಿ ಆದಾಗ ನಾನು ಪಾರ್ಟಿ ಮಾಡ್ತಿದ್ದೆ, ಶಾಕಿಂಗ್‌ ವಿಚಾರ ತಿಳಿಸಿದ ಕಂಗನಾ

Kangana Ranaut reveals she was partying and dancing when the 26 11 attacks happened

ನವದೆಹಲಿ: ಮುಂಬೈನಲ್ಲಿ ನಡೆದ ಭೀಕರ 26/11 ಭಯೋತ್ಪಾದನಾ ದಾಳಿಯ ಕಥಾಹಂದರ ಹೊಂದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರ ಮುಂಬರುವ ನೂತನ ಸಿನಿಮಾ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರದ ವೇಳೆ ಕಂಗನಾ ರಣಾವತ್ ಅವರು ಆ ಕರಾಳ ರಾತ್ರಿಯ ದಿನ ತಮಗಾದ ಒಂದು ವೈಯಕ್ತಿಕ ಅನುಭವವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಆ ರಾತ್ರಿ ತಾವು ಪಾರ್ಟಿ ಮೂಡ್‌ನಲ್ಲಿದ್ದಾಗ, ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರು ಬಂದು ವಿಷಯ ಮುಟ್ಟಿಸಿದ ಸಂಗತಿಯನ್ನು ಕಂಗನಾ ನೆನಪಿಸಿಕೊಂಡಿದ್ದಾರೆ.

ವಿಚಾರ ತಿಳಿದಾಗ ನಾವು ಡ್ಯಾನ್ಸ್‌ ಮಾಡ್ತಾ ಇದ್ವಿ

ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಂಗನಾ, 2008ರ ನವೆಂಬರ್ 26ರಂದು ಮುಂಬೈನಲ್ಲಿ ಉಗ್ರರ ಅಟ್ಟಹಾಸ ಶುರುವಾದಾಗ ತಾವು ಸಹನಟಿ ಶಹಾನಾ ಗೋಸ್ವಾಮಿ ಅವರ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾಗಿ ತಿಳಿಸಿದ್ದಾರೆ. ಆ ದಿನಗಳಲಿ ನಾವೆಲ್ಲರೂ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಹೋರಾಡುತ್ತಿದ್ದೆವು ಮತ್ತು ಮಹೇಶ್ ಭಟ್ ಅವರ ‘ವಿಶೇಷ್ ಫಿಲ್ಮ್ಸ್’ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೆವು. ಶಹಾನಾ ಗೋಸ್ವಾಮಿ ಅವರು ಯಾರಿ ರೋಡ್‌ನಲ್ಲಿ ಹೊಸ ಮನೆ ಖರೀದಿಸಿದ್ದರಿಂದ ನಮಗೆಲ್ಲ ಪಾರ್ಟಿಗೆ ಆಹ್ವಾನ ನೀಡಿದ್ದರು. ನಾವೆಲ್ಲರೂ ಅಲ್ಲಿ ನೃತ್ಯ ಮಾಡುತ್ತಾ ಮಜಾ ಮಾಡುತ್ತಿದ್ದೆವು. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಮಹೇಶ್ ಭಟ್ ಅವರು ತಕ್ಷಣ ಟಿವಿ ಆನ್ ಮಾಡುವಂತೆ ಹೇಳಿದರು. ಟಿವಿ ನೋಡಿದ ಬಳಿಕವೇ ಅವರು ಮುಂಬೈನಲ್ಲಿ ಉಗ್ರರ ದಾಳಿ ನಡೆಯುತ್ತಿರುವ ಆಘಾತಕಾರಿ ವಿಷಯವನ್ನು ನಮಗೆ ತಿಳಿಸಿದರು ಎಂದು ಕಂಗನಾ ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ನಾವೆಲ್ಲರೂ ಮನೆಗೆ ಹೋಗಬೇಕೇ ಅಥವಾ ಇಲ್ಲೇ ಇರಬೇಕೇ ಎಂದು ಗೊಂದಲದಲ್ಲಿದ್ದಾಗ, ಯಾರೂ ಹೊರಗೆ ಹೋಗದಂತೆ ಮಹೇಶ್ ಭಟ್ ಸಲಹೆ ನೀಡಿದರು. ಹೀಗಾಗಿ ಆ ರಾತ್ರಿ ಶಹಾನಾ ಅವರ ಮನೆಯಲ್ಲಿದ್ದ 20 ರಿಂದ 25 ಜನರ ತಂಡ ಅಲ್ಲೇ ಉಳಿಯಬೇಕಾಯಿತು. ಒಂದು ವೇಳೆ ಭಟ್ ಸಾಹೇಬರು ಬಂದು ಹೇಳದೇ ಹೋಗಿದ್ದರೆ ನಮಗೆ ಆ ಘಟನೆಯ ಬಗ್ಗೆ ತಕ್ಷಣಕ್ಕೆ ತಿಳಿಯುತ್ತಲೇ ಇರಲಿಲ್ಲ ಎಂದು ಕಂಗನಾ ಆ ರಾತ್ರಿಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಏನಿದು ಘಟನೆ?

ಅರಬ್ಬಿ ಸಮುದ್ರದ ಮೂಲಕ ಮುಂಬೈ ನಗರವನ್ನು ಪ್ರವೇಶಿಸಿದ್ದ ಪಾಕಿಸ್ತಾನಿ ಉಗ್ರರು ರೈಲ್ವೆ ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳು ಹಾಗೂ ಯಹೂದಿ ಕೇಂದ್ರವನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯು ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಮತ್ತು ಆಘಾತಕಾರಿ ಘಟನೆಯಾಗಿದೆ. ಈ ಭೀಕರ ದಾಳಿಗೆ ಒಟ್ಟು 166 ಅಮಾಯಕರು ಬಲಿಯಾಗಿದ್ದರು.

ಇನ್ನು ಕಂಗನಾ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಚಿತ್ರವು ಇದೇ 26/11ರ ದಾಳಿಯ ಸಂದರ್ಭದಲ್ಲಿ ಮುಂಬೈನ ಕಾಮಾ ಆಸ್ಪತ್ರೆಯಲ್ಲಿದ್ದ ದಾದಿಯರು (ನರ್ಸ್‌ಗಳು) ತೋರಿದ ಅಪ್ರತಿಮ ಧೈರ್ಯದ ಕಥೆಯನ್ನು ಆಧರಿಸಿದೆ. ಉಗ್ರರ ಅಟ್ಟಹಾಸ ಮತ್ತು ಗುಂಡಿನ ಸುರಿಮಳೆಯ ನಡುವೆಯೂ ಆಸ್ಪತ್ರೆಯಲ್ಲಿದ್ದ ನರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸುಮಾರು 400 ಜನ ರೋಗಿಗಳ ಜೀವವನ್ನು ಹೇಗೆ ರಕ್ಷಿಸಿದರು ಎಂಬುದನ್ನು ಈ ಚಿತ್ರದಲ್ಲಿ ಅತ್ಯಂತ ರೋಮಾಂಚಕಾರಿಯಾಗಿ ಚಿತ್ರಿಸಲಾಗಿದೆ.

ಇದನ್ನೂ ಓದಿ: ಜೂನ್ 8ರಂದು ಟಾಕ್ಸಿಕ್‌ ಅಪ್‌ಡೇಟ್, ಅಭಿಮಾನಿಗಳಿಗೆ ಗುಡ್‌ನ್ಯೂಸ್‌?

Leave a Reply

Your email address will not be published. Required fields are marked *