ಬೆಂಗಳೂರು: ರಾಜಧಾನಿಯಲ್ಲಿ ಸೈಬರ್ ವಂಚಕರ ಜಾಲ ಮತ್ತಷ್ಟು ವಿಸ್ತರಿಸುತ್ತಿದ್ದು, ಜಯನಗರದ ಗೃಹಿಣಿಯೊಬ್ಬರು ಮತ್ತು ಅವರ ಮಗಳನ್ನು ಗುರಿಯಾಗಿಸಿಕೊಂಡು (Cyber Crime) ಬರೋಬ್ಬರಿ 2.1 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ತನಿಖಾ ಸಂಸ್ಥೆಯ ಅಧಿಕಾರಿಗಳಂತೆ ನಟಿಸಿ ಈ ಭಾರೀ ಮೊತ್ತದ ವಂಚನೆ ಎಸಗಲಾಗಿದೆ.
ನಕಲಿ ವಿಚಾರಣೆಯ ನಾಟಕ: ಏಪ್ರಿಲ್ 13ರಂದು ಸಂತ್ರಸ್ತ ಮಹಿಳೆಗೆ ವಾಟ್ಸಾಪ್ ಮೂಲಕ ಕರೆ ಮಾಡಿದ್ದ ಅಪರಿಚಿತನೊಬ್ಬ, ತನ್ನನ್ನು ‘ಪ್ರದೀಪ್ ಜಸ್ವಾಲ್’ ಎಂದು ಪರಿಚಯಿಸಿಕೊಂಡಿದ್ದ. ಮಹಿಳೆಯ ಡೆಬಿಟ್ ಕಾರ್ಡ್ ಅನ್ನು ದೇಶವಿರೋಧಿ ಸಂಘಟನೆಯಾದ ಪಿಎಫ್‌ಐ (PFI) ಬಳಕೆ ಮಾಡುತ್ತಿದೆ ಎಂದು ಬೆದರಿಸಿದ್ದ. ಸಂತ್ರಸ್ತರು ಇದನ್ನು ನಂಬುವಂತೆ ಮಾಡಲು, ವಂಚಕರು ಪೊಲೀಸ್ ಠಾಣೆಯಂತಹ ಹಿನ್ನೆಲೆ ಇರುವ ಜಾಗದಲ್ಲಿ ಕುಳಿತು ವಿಡಿಯೋ ಕಾಲ್ ಮಾಡಿದ್ದರು. ಈ ಮೂಲಕ ತಾಯಿ-ಮಗಳನ್ನು ಮಾನಸಿಕವಾಗಿ ಬೆದರಿಸಿ, “ಸಹಕರಿಸದಿದ್ದರೆ ನಿಮ್ಮನ್ನು ಬಂಧಿಸುತ್ತೇವೆ” ಎಂದು ಹೆದರಿಸಿದ್ದರು.
ಪರಿಶೀಲನೆಯ ನೆಪದಲ್ಲಿ ಹಣ ವರ್ಗಾವಣೆ: ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಪರಿಶೀಲಿಸಬೇಕು ಮತ್ತು ಆರ್‌ಬಿಐ ನಿಯಮದಂತೆ ಅದನ್ನು ನಂತರ ಮರಳಿ ನೀಡಲಾಗುವುದು ಎಂದು ವಂಚಕರು ನಂಬಿಸಿದ್ದರು. ಇದನ್ನು ಸತ್ಯವೆಂದು ಭಾವಿಸಿದ ಮಹಿಳೆ, ತಮ್ಮ ಜೀವನದ ಇಡೀ ಉಳಿತಾಯದ ಹಣವನ್ನು ಆರೋಪಿಗಳ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಚಿನ್ನವನ್ನು ಗಿರವಿ ಇಟ್ಟು ಪಡೆದ ಸಾಲದ ಹಣವನ್ನೂ ಸೇರಿಸಿ ಏಪ್ರಿಲ್ 15ರಿಂದ 23ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 2.1 ಕೋಟಿ ರೂಪಾಯಿಗಳನ್ನು ಕಳುಹಿಸಿದ್ದಾರೆ.
ಮೋಸ ಬಯಲಾದದ್ದು ಹೇಗೆ? ವಂಚಕರ ಹಣದ ದಾಹ ಅಷ್ಟಕ್ಕೇ ನಿಲ್ಲದಿದ್ದಾಗ, ಮೇ 2ರಂದು ಮಹಿಳೆ ತನ್ನ ಸಹೋದರನ ಬಳಿ ಹಣಕ್ಕಾಗಿ ಕೇಳಿದ್ದಾರೆ. ಇದರಿಂದ ಸಂಶಯಗೊಂಡ ಸಹೋದರ ಸರಿಯಾಗಿ ವಿಚಾರಿಸಿದಾಗ ಈ ಬೃಹತ್ ಜಾಲದ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಸೈಬರ್ ಸಹಾಯವಾಣಿ 1930ಕ್ಕೆ ದೂರು ನೀಡಲಾಗಿದ್ದು, ಜಯನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪೊಲೀಸ್ ಅಥವಾ ತನಿಖಾ ಸಂಸ್ಥೆಯವರು ಎಂದಿಗೂ ಆನ್‌ಲೈನ್ ಮೂಲಕ ಹಣಕ್ಕೆ ಬೇಡಿಕೆಯಿಡುವುದಿಲ್ಲ. ಇಂತಹ ಅನುಮಾನಾಸ್ಪದ ಕರೆಗಳು ಬಂದರೆ ಸಾರ್ವಜನಿಕರು ತಕ್ಷಣವೇ ಜಾಗರೂಕರಾಗಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ: ಒಂದೇ ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರ ಸ್ಕ್ಯಾನಿಂಗ್!
