ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟ್ನಲ್ಲಿ ತೀವ್ರ ಹಿನ್ನಡೆಯಾದ ಬೆನ್ನಲ್ಲೇ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಮಹತ್ವದ ಶಿಫಾರಸೊಂದನ್ನು ಮಾಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 2,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸಮಿತಿಯು ಶಿಫಾರಸು ಮಾಡಿದೆ. ಶುಕ್ರವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ 147ನೇ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು (CWRC) ಅರ್ಜಿ ವಜಾ ಬೆನ್ನಲ್ಲೇ ಹೊಸ ಬೆಳವಣಿಗೆ
ಶುಕ್ರವಾರ ಬೆಳಿಗ್ಗೆಯಷ್ಟೇ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿತ್ತು. ಕರ್ನಾಟಕದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಜಾಗೊಳಿಸಿತ್ತು. ಅಷ್ಟೇ ಅಲ್ಲದೆ, ತಮಿಳುನಾಡು ಸಲ್ಲಿಸಿದ್ದ ಮೂರನೇ ಅರ್ಜಿಯನ್ನೂ ವಜಾಗೊಳಿಸುವುದಾಗಿ ನ್ಯಾಯಪೀಠ ಎಚ್ಚರಿಕೆ ನೀಡಿತ್ತು. ಈ ವೇಳೆ ತಮಿಳುನಾಡು ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಒಂದು ವಾರಗಳ ಕಾಲ ಮುಂದೂಡಲಾಗಿತ್ತು. ನ್ಯಾಯಾಲಯದಲ್ಲಿ ತಮಿಳುನಾಡಿಗೆ ಹಿನ್ನಡೆಯಾದ ಕೆಲವೇ ಗಂಟೆಗಳಲ್ಲಿ ಸಿಡಬ್ಲ್ಯೂಆರ್ಸಿ ಮಾಡಿರುವ ಈ ಶಿಫಾರಸು ಸಾಕಷ್ಟು ಕುತೂಹಲ ಹಾಗೂ ಮಹತ್ವ ಪಡೆದುಕೊಂಡಿದೆ.
ನವೆಂಬರ್ 25ರ CWMA ಸಭೆಯತ್ತ ಉಭಯ ರಾಜ್ಯಗಳ ಚಿತ್ತ
ನವದೆಹಲಿಯಲ್ಲಿ ವಿನೀತ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಾವೇರಿ ಕಣಿವೆಯ ಪ್ರಸ್ತುತ ಜಲಾಶಯಗಳ ಒಳಹರಿವು, ಮಳೆಯ ಪ್ರಮಾಣ ಹಾಗೂ ಲಭ್ಯವಿರುವ ನೀರಿನ ಸಂಗ್ರಹದ ಕುರಿತು ಸುದೀರ್ಘವಾಗಿ ಪರಿಶೀಲನೆ ನಡೆಸಿದ ಬಳಿಕ, ಮುಂದಿನ 15 ದಿನಗಳವರೆಗೆ ನಿತ್ಯ 2,000 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿಯು ಕೇವಲ ತಾಂತ್ರಿಕ ಶಿಫಾರಸುಗಳನ್ನು ಮಾಡುವ ಸಮಿತಿಯಾಗಿರುವುದರಿಂದ, ಈ ನಿರ್ಣಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಅಂತಿಮ ಮುದ್ರೆ ಒತ್ತಬೇಕಾಗಿದೆ. ಈಗಾಗಲೇ ನವೆಂಬರ್ 25ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆ ನಿಗದಿಯಾಗಿದ್ದು, ಆ ಸಭೆಯಲ್ಲಿ ಯಾವ ಅಂತಿಮ ತೀರ್ಮಾನ ಹೊರಬೀಳಲಿದೆ ಎಂಬುದರತ್ತ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಚಿತ್ತ ನೆಟ್ಟಿದೆ.
ಇದನ್ನೂ ಓದಿ: ಪ್ರತಿ ಟನ್ ಕಬ್ಬಿಗೆ 4,300 ರೂ. ದರ ನಿಗದಿಗೆ ಪಟ್ಟು: ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ ಎಚ್ಚರಿಕೆ
