ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ನಡುವಿನ ರಾಜಕೀಯ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹರಿಯಾಣದ ಕರ್ನಾಲ್ನಲ್ಲಿ ಬಿಜೆಪಿ ಆಯೋಜಿಸಿದ್ದ ‘ಲೋಕತಂತ್ರ ಬಚಾವೋ, ಅರಾಜಕತಾ ಹಟಾವೋ’ ಬೃಹತ್ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ ಅವರ ನಿರಂತರ ವಿದೇಶಿ ಪ್ರವಾಸಗಳು ಹಾಗೂ ಅವರ ರಾಜಕೀಯ ಸವಾಲುಗಳ ವಿರುದ್ಧ ಕಡಕ್ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ವಿದೇಶಿ ಪ್ರವಾಸಕ್ಕೆ ಅಮಿತ್ ಶಾ ಪ್ರಶ್ನೆ
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿಯೆಟ್ನಾಂ ಪ್ರವಾಸವನ್ನು ಉಲ್ಲೇಖಿಸಿ ಮಾತನಾಡಿದ ಗೃಹಸಚಿವ ಅಮಿತ್ ಶಾ, “ವಿದೇಶಿ ಪ್ರವಾಸ ಮಾಡುವುದು ನಿಮ್ಮ ವೈಯಕ್ತಿಕ ವಿಚಾರ ಇರಬಹುದು. ಆದರೆ ನೀವು ದೇಶದ ಮುಖ್ಯ ವಿರೋಧ ಪಕ್ಷದ ನಾಯಕ ಎಂಬುದನ್ನು ಮರೆಯಬಾರದು. ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದ್ದಂತೆ ನೀವು ಭಾರತದ ಜನರಿಗೆ ನಿಮ್ಮ ಪ್ರವಾಸ ಹಾಗೂ ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲೇಬೇಕಾದ ಜವಾಬ್ದಾರಿ ನಿಮಗಿದೆ,” ಎಂದು ನೇರವಾಗಿ ಸವಾಲು ಎಸೆದರು.
ಪ್ರಧಾನಿ ಮೋದಿಗೆ ಸವಾಲು ಹಾಕುವ ಮುನ್ನ ಪತ್ರ ಬರೆಯಿರಿ
ಯಾವುದೇ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿ ಹಾಕಿದ್ದ ಸವಾಲಿಗೆ ಪ್ರತ್ಯುತ್ತರ ನೀಡಿದ ಅಮಿತ್ ಶಾ, “ಪ್ರಧಾನಿ ಮೋದಿಯವರೊಂದಿಗೆ ನೇರ ಚರ್ಚೆ ಮಾಡಲು ನಿಮಗಷ್ಟೊಂದು ಆಸೆಯಿದ್ದರೆ ಮೊದಲು ಅವರಿಗೆ ಅಧಿಕೃತ ಪತ್ರ ಬರೆಯಿರಿ. ಅದನ್ನು ಬಿಟ್ಟು ಸುಮ್ಮನೆ ಮಾಧ್ಯಮಗಳ ಮುಂದೆ ಸವಾಲು ಹಾಕುವುದು ಸೂಕ್ತವಲ್ಲ,” ಎಂದು ಲೇವಡಿ ಮಾಡಿದರು.
ಅಲ್ಲದೆ, ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಮಾತನಾಡಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ ಅವರು, ಸಂಸತ್ತಿನ ಒಳಗಡೆ ಬಂದು ಧೈರ್ಯವಾಗಿ ಚರ್ಚೆಯಲ್ಲಿ ಭಾಗವಹಿಸುವಂತೆ ವಿಪಕ್ಷಗಳಿಗೆ ಆಹ್ವಾನ ನೀಡಿದರು.
‘ಎಸ್ಐಆರ್ ಇಲ್ಲದಿದ್ದಾಗಲೂ ಕಾಂಗ್ರೆಸ್ ಸೋತಿದೆ’: ಅಂಕಿಅಂಶಗಳ ಸಮೇತ ತಿರುಗೇಟು
ಚುನಾವಣಾ ಸೋಲಿಗೆ ಎಸ್ಐಆರ್ ಅಥವಾ ಇತರ ತಾಂತ್ರಿಕ ಕಾರಣಗಳನ್ನು ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಗೃಹಸಚಿವರು ಅಂಕಿಅಂಶಗಳ ಮೂಲಕ ತಿರುಗೇಟು ನೀಡಿದರು. “2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಯಾವುದೇ ಎಸ್ಐಆರ್ ಪ್ರಕ್ರಿಯೆ ಇರಲಿಲ್ಲ. ಆದರೂ ದೇಶದ ಜನ ನಿಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಇತ್ತೀಚೆಗೆ ನಡೆದ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲೂ ಎಸ್ಐಆರ್ ಇರಲಿಲ್ಲ, ಅಲ್ಲೂ ನೀವು ಹೀನಾಯವಾಗಿ ಸೋತಿದ್ದೀರಿ. ಸೋಲಿಗೆ ತಾಂತ್ರಿಕ ನೆಪ ಹುಡುಕುವುದನ್ನು ಬಿಡಿ,” ಎಂದು ವ್ಯಂಗ್ಯವಾಡಿದರು.
ಸಂಸತ್ತಿನ ಕಾರ್ಯಕಲಾಪಕ್ಕೆ ಅಡ್ಡಿ ಹಾಗೂ ಖಾಲಿ ಮೈದಾನದ ವ್ಯಂಗ್ಯ
ಕಾಂಗ್ರೆಸ್ ಪಕ್ಷದ ಹೋರಾಟದ ವೈಖರಿಯನ್ನು ಖಂಡಿಸಿದ ಅಮಿತ್ ಶಾ, “ನೀವು ಸಂಸತ್ತಿನ ಒಳಗಡೆ ಚರ್ಚೆಗೆ ಅವಕಾಶ ನೀಡದೆ ಬಹಿಷ್ಕಾರ ಹಾಕುತ್ತೀರಿ. ಬೀದಿಗಳಲ್ಲಿ ಜನರನ್ನು ಸೇರಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದೀರಿ,” ಎಂದು ಆರೋಪಿಸಿದರು.
ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ಸಮಾವೇಶದ ಬಗ್ಗೆ ಮಾತನಾಡುತ್ತಾ, “ಇಡೀ ದೇಶಾದ್ಯಂತ 10 ಲಕ್ಷ ಜನರನ್ನು ಕರೆಸುವುದಾಗಿ ಹೇಳಿ ದೆಹಲಿಗೆ ಬಂದಿದ್ದೀರಿ. ಆದರೆ ಕೇವಲ 70,000 ಸಾಮರ್ಥ್ಯವಿದ್ದ ಮೈದಾನವೂ ಅರ್ಧದಷ್ಟು ಖಾಲಿಯಿತ್ತು. ದೇಶದ ಜನತೆ ರಾಹುಲ್ ಗಾಂಧಿ ಮತ್ತು ಅವರ ಮೈತ್ರಿಕೂಟದ ಜೊತೆಗಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ,” ಎಂದು ಕಿಡಿಕಾರಿದರು.
ಇದನ್ನೂ ಓದಿ: ರಾಜ್ಯಗಳಿಗೆ ಕೇಂದ್ರ ಸರ್ಕಾರದ ದೀಪಾವಳಿ ಬಂಪರ್ ಗಿಫ್ಟ್: 1.09 ಲಕ್ಷ ಕೋಟಿ ರೂಪಾಯಿ ತೆರಿಗೆ ಹಂಚಿಕೆ ಹಣ ಮುಂಗಡ ಬಿಡುಗಡೆ!
