TOP NEWS

Karnataka Dams: ಕರ್ನಾಟಕದ ಜಲಾಶಯಗಳಲ್ಲಿ ಶೇ.60ಕ್ಕೆ ಕುಸಿದ ನೀರು: ಕಳೆದ ವರ್ಷಕ್ಕಿಂತ 291.53 ಟಿಎಂಸಿ ಭಾರಿ ಕೊರತೆ!

Reservoir Levels Drop to 60 Massive Deficit of 291 TMC Compared to Last Year

ಬೆಂಗಳೂರು: ರಾಜ್ಯಾದ್ಯಂತ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಭಾರಿ ಪ್ರಮಾಣದಲ್ಲಿ (Karnataka Dams) ಕುಸಿತ ಕಂಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 895.65 ಟಿಎಂಸಿ ಆಗಿದ್ದು, ಪ್ರಸ್ತುತ ಜಲಾಶಯಗಳಲ್ಲಿ ಕೇವಲ 533.84 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಅಂದರೆ ಒಟ್ಟು ಸಾಮರ್ಥ್ಯದ ಶೇ. 60ರಷ್ಟು ನೀರು ಮಾತ್ರ ಪ್ರಸ್ತುತ ಲಭ್ಯವಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯದ ಜಲಾಶಯಗಳಲ್ಲಿ ಬರಪೂರ ಅಂದರೆ ಸುಮಾರು 825.37 ಟಿಎಂಸಿ ನೀರು ಇತ್ತು. ಕಳೆದ ವರ್ಷದ ಅಂಕಿ-ಅಂಶಗಳಿಗೆ ಹೋಲಿಸಿದರೆ ಈ ಬಾರಿ ಸುಮಾರು 291.53 ಟಿಎಂಸಿಯಷ್ಟು ಬೃಹತ್ ಪ್ರಮಾಣದ ನೀರಿನ ಕೊರತೆ ಎದುರಾಗಿದೆ.

ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಜಲಾಶಯಗಳ ಪ್ರಸ್ತುತ ಸ್ಥಿತಿಗತಿ:

ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಿನ್ನವಾಗಿದೆ. ಘಟಪ್ರಭಾ ಜಲಾಶಯವು ತನ್ನ ಒಟ್ಟು 51 ಟಿಎಂಸಿ ಸಾಮರ್ಥ್ಯದಲ್ಲಿ 50.75 ಟಿಎಂಸಿ ನೀರನ್ನು ಹೊಂದಿದ್ದು, ಶೇ. 100ರಷ್ಟು ಭರ್ತಿಯಾಗಿ ಪೂರ್ಣ ಮಟ್ಟ ತಲುಪಿದೆ. ಭದ್ರಾ ಜಲಾಶಯದಲ್ಲಿ 71.54 ಟಿಎಂಸಿ ಗರಿಷ್ಠ ಸಾಮರ್ಥ್ಯಕ್ಕೆ ಪ್ರತಿಯಾಗಿ 56.17 ಟಿಎಂಸಿ (ಶೇ. 79) ನೀರು ಲಭ್ಯವಿದೆ. ಇನ್ನು ಆಲಮಟ್ಟಿ ಜಲಾಶಯದಲ್ಲಿ 123.08 ಟಿಎಂಸಿ ಸಾಮರ್ಥ್ಯಕ್ಕೆ ಎದುರಾಗಿ 89.27 ಟಿಎಂಸಿ (ಶೇ. 73) ನೀರು ಸಂಗ್ರಹವಾಗಿದೆ. ವಾಣಿ ವಿಲಾಸ ಸಾಗರದಲ್ಲಿ 30.42 ಟಿಎಂಸಿಗೆ ಎದುರಾಗಿ 19.84 ಟಿಎಂಸಿ (ಶೇ. 65) ಹಾಗೂ ನಾರಾಯಣಪುರ ಜಲಾಶಯದಲ್ಲಿ 33.31 ಟಿಎಂಸಿಗೆ ಎದುರಾಗಿ 18.88 ಟಿಎಂಸಿ ನೀರು ದಾಸ್ತಾನಿದೆ.

ಮಲೆನಾಡು ಹಾಗೂ ಕರಾವಳಿ ಭಾಗದ ವಿದ್ಯುತ್ ಉತ್ಪಾದನಾ ಪ್ರಮುಖ ಜಲಾಶಯಗಳ ಪೈಕಿ ಲಿಂಗನಮಕ್ಕಿ ಜಲಾಶಯದಲ್ಲಿ 151.75 ಟಿಎಂಸಿ ಗರಿಷ್ಠ ಸಾಮರ್ಥ್ಯಕ್ಕೆ ಎದುರಾಗಿ 77.52 ಟಿಎಂಸಿ (ಶೇ. 51) ಹಾಗೂ ಸೂಪಾ ಜಲಾಶಯದಲ್ಲಿ 145.33 ಟಿಎಂಸಿ ಸಾಮರ್ಥ್ಯಕ್ಕೆ ಎದುರಾಗಿ 75.91 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ವರಾಹಿ ಜಲಾಶಯದಲ್ಲಿ 31.13 ಟಿಎಂಸಿಗೆ ಪ್ರತಿಯಾಗಿ 15.35 ಟಿಎಂಸಿ (ಶೇ. 49) ಮತ್ತು ಮಲಪ್ರಭಾ ಜಲಾಶಯದಲ್ಲಿ 37.73 ಟಿಎಂಸಿಗೆ ಎದುರಾಗಿ 21.07 ಟಿಎಂಸಿ (ಶೇ. 56) ನೀರಿದೆ.

ಕಾವೇರಿ ಕೊಳ್ಳದ ಜಲಾಶಯಗಳ ಕಳವಳಕಾರಿ ಸ್ಥಿತಿ ಮತ್ತು ಕೆಆರ್‌ಎಸ್ ನೀರು ಬಿಡುಗಡೆ ವಿವಾದ:

ದಕ್ಷಿಣ ಒಳನಾಡಿನ ಜೀವನಾಡಿಯಾಗಿರುವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕಳವಳಕಾರಿಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್ (ಕೃಷ್ಣರಾಜಸಾಗರ) ಜಲಾಶಯದ ಒಟ್ಟು ಸಾಮರ್ಥ್ಯ 49.45 ಟಿಎಂಸಿ ಆಗಿದ್ದರೂ, ಪ್ರಸ್ತುತ ಕೇವಲ 23.81 ಟಿಎಂಸಿ (ಶೇ. 48) ನೀರು ಮಾತ್ರ ಸಂಗ್ರಹವಾಗಿದೆ. ಕಬಿನಿ ಜಲಾಶಯದಲ್ಲಿ 19.52 ಟಿಎಂಸಿಗೆ ಎದುರಾಗಿ 11.12 ಟಿಎಂಸಿ (ಶೇ. 57), ಹೇಮಾವತಿಯಲ್ಲಿ 37.10 ಟಿಎಂಸಿಗೆ ಎದುರಾಗಿ 15.90 ಟಿಎಂಸಿ (ಶೇ. 43) ಮತ್ತು ಹಾರಂಗಿ ಜಲಾಶಯದಲ್ಲಿ 8.50 ಟಿಎಂಸಿ ಸಾಮರ್ಥ್ಯಕ್ಕೆ ಎದುರಾಗಿ 4.77 ಟಿಎಂಸಿ (ಶೇ. 56) ನೀರಷ್ಟೇ ಇದೆ. ಇನ್ನೊಂದೆಡೆ ತುಂಗಭದ್ರಾ ಜಲಾಶಯದಲ್ಲಿ 105.79 ಟಿಎಂಸಿಗೆ ಎದುರಾಗಿ 53.48 ಟಿಎಂಸಿ (ಶೇ. 51) ನೀರು ಲಭ್ಯವಿದೆ.

ರಾಜ್ಯವೇ ನೀರಿನ ಅಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ, ನ್ಯಾಯಾಲಯವು ಕೆಆರ್‌ಎಸ್ ಜಲಾಶಯದಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 3000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಭೀತಿ ಇರುವಾಗ ಈ ರೀತಿ ನೀರು ಹರಿಸಲು ಹೊರಟಿರುವುದು ಕರ್ನಾಟಕದ ಜನತೆಗೆ ಹಾಗೂ ರೈತ ಸಮುದಾಯಕ್ಕೆ ಎಸಗಿದ ಭಾರಿ ಅನ್ಯಾಯ ಎಂದು ರೈತ ಸಂಘಟನೆಗಳು ಕಟುವಾಗಿ ಆಕ್ಷೇಪಿಸಿದ್ದು, ಹೋರಾಟಕ್ಕೆ ಮುನ್ನುಡಿ ಬರೆದಿವೆ.

ಇದನ್ನೂ ಓದಿ: ಜಾಮಿಯಾವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ: ಕಾಂಗ್ರೆಸ್‌ ಸಂಸದ ಪೋಲಿಸರ ವಶಕ್ಕೆ!

Leave a Reply

Your email address will not be published. Required fields are marked *