ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ್ದ ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಾಗೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಹಾಗೂ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಈ ಅಕ್ರಮ ನೇಮಕಾತಿ ದಂಧೆಯ ಸತ್ಯಾಸತ್ಯತೆಯನ್ನು ಹೊರಹಾಕುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಅಭ್ಯರ್ಥಿಗಳಿಗೆ ಪರೀಕ್ಷೆಗಿಂತ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆಯ ಕೀ ಉತ್ತರಗಳನ್ನು ಒದಗಿಸಿ ಕೋಟ್ಯಂತರ ರೂಪಾಯಿ ಲಂಚ ವಸೂಲಿ ಮಾಡಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ.
ಒಂದು ದಿನ ಬಾಕಿ ಇರುವಾಗಲೇ ಸಿಕ್ಕಿತ್ತು ಉತ್ತರ
ಇಡಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ಈ ಇಡೀ ಅಕ್ರಮ ಜಾಲದ ಕೇಂದ್ರಬಿಂದುವಾಗಿ ಕೆಪಿಎಸ್‌ಸಿಯ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಾರ್ಯನಿರ್ವಹಿಸಿದ್ದರು. ಇವರಿಂದ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಆಯೋಗದ ಸದಸ್ಯೆ ಬಿ.ವಿ. ಗೀತಾ ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಭರ್ತಿ 80 ಪ್ರಶ್ನೆಗಳ ನಿಖರವಾದ ಸರಿ ಉತ್ತರಗಳನ್ನು (ಕೀ ಆನ್ಸರ್ಸ್) ಪಡೆದುಕೊಂಡಿದ್ದರು. ಹೀಗೆ ಲಭ್ಯವಾದ ಗೋಪ್ಯ ಉತ್ತರಗಳನ್ನು ಇಟ್ಟುಕೊಂಡು ಇಬ್ಬರೂ ನೇರವಾಗಿ ಆಯ್ಕೆಯಾಗ ಬಯಸಿದ್ದ ಅಭ್ಯರ್ಥಿಗಳೊಂದಿಗೆ ನೇರ ಹಣಕಾಸಿನ ಡೀಲ್‌ಗೆ ಇಳಿದಿದ್ದರು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಹಿರಂಗಗೊಂಡಿದೆ.
ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಅಕ್ರಮ ಹಣ ಪೀಕಲು ಇವರು ಹೆಣೆದಿದ್ದ ಜಾಲ ಅತ್ಯಂತ ಗಟ್ಟಿಯಾಗಿತತು. 1:3 ಮೆರಿಟ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮತ್ತು ಅಂತಿಮವಾಗಿ ಹುದ್ದೆ ಗಿಟ್ಟಿಸಲು ಪ್ರತಿಯೊಬ್ಬ ಅಭ್ಯರ್ಥಿಯಿಂದ ₹20 ಲಕ್ಷದಿಂದ ₹40 ಲಕ್ಷದವರೆಗೆ ಭಾರಿ ಮೊತ್ತದ ಲಂಚ ನಿಗದಿಪಡಿಸಲಾಗಿತ್ತು. ಉದಾಹರಣೆಗೆ, ಸದಸ್ಯೆ ಗೀತಾ ಅವರು ಒಬ್ಬ ಅಭ್ಯರ್ಥಿಯೊಂದಿಗೆ ₹40 ಲಕ್ಷಕ್ಕೆ ಮಾತುಕತೆ ಮುಗಿಸಿ, ಪರೀಕ್ಷೆಗೆ ಮುನ್ನವೇ ₹20 ಲಕ್ಷ ಮುಂಗಡ ನಗದನ್ನು ಸ್ವೀಕರಿಸಿದ್ದರು. ಅಂತೆಯೇ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಹ ಮತ್ತೊಬ್ಬ ಅಭ್ಯರ್ಥಿಯಿಂದ ₹20 ಲಕ್ಷದ ಡೀಲ್‌ನಲ್ಲಿ ₹10 ಲಕ್ಷ ಮುಂಗಡ ಪಡೆದಿದ್ದರು. ತನಿಖೆಯ ವೇಳೆ ಇಬ್ಬರೂ ಸೇರಿ ಒಟ್ಟು 6 ಅಭ್ಯರ್ಥಿಗಳೊಂದಿಗೆ ಕೋಟ್ಯಂತರ ರೂಪಾಯಿಗಳ ಮುಂಗಡ ಡೀಲ್ ಮಾಡಿಕೊಂಡಿರುವುದು ಸಾಕ್ಷ್ಯಾಧಾರಸಹಿತ ಪತ್ತೆಯಾಗಿದೆ.
ಹಣ ಕೊಟ್ಟವರಿಗೆಲ್ಲಾ ಸಿಕ್ಕಿದೆ ಉತ್ತಮ ನಂಬರ್
ವಿಶೇಷವೆಂದರೆ, ಹೀಗೆ ಹಣ ನೀಡಿ ಕೀ ಉತ್ತರಗಳನ್ನು ಪಡೆದುಕೊಂಡಿದ್ದ ಅಭ್ಯರ್ಥಿಗಳೆಲ್ಲರೂ ಅಂತಿಮ ಆಯ್ಕೆ ಪಟ್ಟಿಯಲ್ಲಿ ಉನ್ನತ ರ್ಯಾಂಕಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರದ ಕೃತ್ಯಗಳನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಸೆಪ್ಟೆಂಬರ್ 06 ರಂದು ಶಿವಶಂಕರಪ್ಪ ಸಾಹುಕಾರ್ ಹಾಗೂ ಬಿ.ವಿ. ಗೀತಾ ಇಬ್ಬರನ್ನೂ ಬಂಧಿಸಿತ್ತು. ಬಂಧಿತ ಆರೋಪಿಗಳನ್ನು ಪಿಎಂಎಲ್‌ಎ (PMLA) ಕಾಯ್ದೆಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರನ್ನೂ 14 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿದೆ. ಪ್ರಸ್ತುತ ಅಧಿಕಾರಿಗಳು ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ನೇಮಕಾತಿ ಅಕ್ರಮದಲ್ಲಿ ಇನ್ನುಳಿದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ತೀವ್ರಗೊಳಿಸಿದ್ದಾರೆ.
ಇದನ್ನೂಓದಿ: ಡಿಕೆಶಿ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ: ‘ಪಿತಾಮಹ’ ಯಾರೆಂದು ದೇಶಕ್ಕೇ ಗೊತ್ತು ಎಂದ ಮುಖ್ಯಮಂತ್ರಿ!
