ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಅರ್ಹ ನಾಗರಿಕರಿಗಾಗಿ ಮತ್ತೊಂದು ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಪ್ರಕಟಿಸಿದ್ದಾರೆ. ಯಾವುದೇ ಕಾರಣಕ್ಕೂ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ಹೊಸ ಅಭಿಯಾನ ಆಯೋಜಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಬಿಟ್ಟುಹೋದವರು ಫಾರ್ಮ್-6 ಸಲ್ಲಿಸುವ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಮತ್ತೊಂದು ಅವಕಾಶ ಸಿಗಲಿದೆ.
ಇತ್ತೀಚೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆಯುತ್ತಿದೆ ಹಾಗೂ ಫಾರ್ಮ್-7 ಬಳಸಿ ದುರುದ್ದೇಶಪೂರ್ವಕವಾಗಿ ಹೆಸರುಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು. ಈ ಆರೋಪಗಳಿಗೆ ಆಯೋಗದ ಬಳಿಯಿರುವ ಅಧಿಕೃತ ಅಂಕಿಅಂಶಗಳ ಮೂಲಕವೇ ಉತ್ತರ ನೀಡಿದ ಮುಖ್ಯ ಚುನಾವಣಾಧಿಕಾರಿಗಳು, ಪ್ರಕ್ರಿಯೆಯ ಪಾರದರ್ಶಕತೆಯನ್ನು ಸ್ಪಷ್ಟಪಡಿಸಿದರು. ಆಯೋಗದ ಅಂಕಿಅಂಶಗಳ ಪ್ರಕಾರ, ಹೆಸರು ವಜಾಗೊಳಿಸಲು ಸಲ್ಲಿಕೆಯಾಗಿರುವುದು ಕೇವಲ 91,278 ಫಾರ್ಮ್-7 ಅರ್ಜಿಗಳು ಮಾತ್ರ. ಆದರೆ, ನೂತನವಾಗಿ ಮತದಾರರ ಪಟ್ಟಿಗೆ ಸೇರಲು ಬರೋಬ್ಬರಿ 9,10,732 ಫಾರ್ಮ್-6 ಅರ್ಜಿಗಳು ಬಂದಿವೆ. ಇದಲ್ಲದೆ, ಅನಿವಾಸಿ ಭಾರತೀಯ ಮತದಾರರಿಂದ (NRI) 4,677 ಫಾರ್ಮ್-6ಎ ಅರ್ಜಿಗಳು ಹಾಗೂ ತಿದ್ದುಪಡಿ ಅಥವಾ ವರ್ಗಾವಣೆಗೆ ಸಂಬಂಧಿಸಿದಂತೆ 11,98,484 ಫಾರ್ಮ್-8 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ವಿವರ ನೀಡಿದರು.
ನೋಟಿಸ್ ವಿತರಣೆ ಮತ್ತು ಕಾನೂನಾತ್ಮಕ ವಿಚಾರಣೆ: ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಭಾಗವಾಗಿ ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ಗಳನ್ನು ಆಯೋಗ ಜಾರಿ ಮಾಡಿತ್ತು. ಸ್ಥಳೀಯ ಬಿಎಲ್‌ಒ (BLO) ಸಿಬ್ಬಂದಿ ಮೂಲಕ ಈಗಾಗಲೇ 43,55,818 ನೋಟಿಸ್‌ಗಳನ್ನು ಯಶಸ್ವಿಯಾಗಿ ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಕೇವಲ 26,498 ನೋಟಿಸ್‌ಗಳ ನೀಡಿಕೆ ಮಾತ್ರ ಪ್ರಸ್ತುತ ಬಾಕಿ ಉಳಿದಿದೆ. ಇನ್ನು ವಿತರಿಸಲಾದ ನೋಟಿಸ್‌ಗಳ ಪೈಕಿ 36,89,063 ಪ್ರಕರಣಗಳಲ್ಲಿ ನಿಯಮಾನುಸಾರ ವಿಚಾರಣೆ ಮತ್ತು ಪರಿಶೀಲನೆ ಪೂರ್ಣಗೊಂಡಿದೆ ಎಂದು ಸಿಇಒ ತಿಳಿಸಿದರು.
ಬೆಂಗಳೂರಿನಲ್ಲಿ ನೂತನ ಮತದಾರರ ದಾಖಲೆ ಸ್ಪಂದನೆ: ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಮತದಾನದ ಹಕ್ಕು ಪಡೆಯಲು ನೂತನ ಮತದಾರರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ನಗರದಲ್ಲಿ ಒಟ್ಟು 1,10,594 ಫಾರ್ಮ್-6 ಅರ್ಜಿಗಳು ಬಂದಿವೆ. ಕ್ಷೇತ್ರವಾರು ಅಂಕಿಅಂಶಗಳನ್ನು ಗಮನಿಸುವುದಾದರೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 57,111, ಬೆಂಗಳೂರು ದಕ್ಷಿಣದಲ್ಲಿ 40,050 ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 42,083 ನೂತನ ಅರ್ಜಿಗಳು ಸಲ್ಲಿಕೆಯಾಗಿವೆ.
ಫಾರ್ಮ್-7 ದುರ್ಬಳಕೆ ತಡೆಗೆ ಸ್ಪಷ್ಟ ಎಚ್ಚರಿಕೆ: ಫಾರ್ಮ್-7 ದುರ್ಬಳಕೆ ಆರೋಪಕ್ಕೆ ಖಡಕ್ ಉತ್ತ ನೀಡಿದ ಅನ್ಬುಕುಮಾರ್, “ಕಾನೂನುಬದ್ಧವಾಗಿ ನೋಟಿಸ್ ತಲುಪಿಸದೆ ಹಾಗೂ ಸಂಬಂಧಪಟ್ಟ ವ್ಯಕ್ತಿಯ ವಿಚಾರಣೆ ನಡೆಸದೆ ಆಯೋಗವು ಯಾವುದೇ ಒಬ್ಬ ಅರ್ಹ ಮತದಾರನ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಬಿಎಲ್‌ಒಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಸ್ವಯಂಪ್ರೇರಿತವಾಗಿ ಹೆಸರುಗಳನ್ನು ವಜಾ ಮಾಡಿಲ್ಲ,” ಎಂದು ದೃಢವಾಗಿ ಹೇಳಿದರು.
ಪ್ರಸ್ತುತ ಆಕ್ಷೇಪಣೆ ಸಲ್ಲಿಸಲು ಮತ್ತು ಪರಿಶೀಲನೆಗೆ ಅಕ್ಟೋಬರ್ 22 ಅಂತಿಮ ದಿನಾಂಕವಾಗಿದೆ. ಪ್ರಕ್ರಿಯೆಯು ಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ತಾಂತ್ರಿಕ ಕಾರಣದಿಂದ ಹೆಸರು ಬಿಟ್ಟುಹೋಗಿದ್ದರೆ ಅಂತಹ ಅರ್ಹ ಮತದಾರರನ್ನು ಮರುಪರಿಶೀಲಿಸಿ ಸೇರಿಸಲಾಗುವುದು. ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕನ್ನು ರಕ್ಷಿಸಲು ಆಯೋಗ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮತದಾರರ ಪಟ್ಟಿ ಅಕ್ರಮ ಆರೋಪಕ್ಕೆ ಬ್ರೇಕ್: ಕಾಂಗ್ರೆಸ್ ದೂರಿಗೆ ಅಧಿಕೃತ ಅಂಕಿಅಂಶಗಳೊಂದಿಗೆ ಆಯೋಗದ ತಿರುಗೇಟು
