TOP NEWS

Bagalkote: ಬಾಗಲಕೋಟೆ ನಮ್ಮ ಕ್ಲಿನಿಕ್ ವೈದ್ಯೆಯ ಪಿಜಿ ಗೋಲ್ ಮಾಲ್: ತನಿಖೆಗೆ ಗೈರಾದ MLA ಸೊಸೆಗೆ ಸಿಇಒ ಖಡಕ್ ಎಚ್ಚರಿಕೆ

Bagalkote Government Salary Plus Private Medical PG DHO Daughter Dr Ankita Skips Inquiry

ಬಾಗಲಕೋಟೆ: ಸರ್ಕಾರಿ ವ್ಯವಸ್ಥೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ತಿಂಗಳ ಕೊನೆಯಲ್ಲಿ ಲಕ್ಷಾಂತರ ರೂಪಾಯಿ ವೇತನ ಜೇಬಿಗಿಳಿಸಿಕೊಂಡು, ಇನ್ನೊಂದೆಡೆ ಯಾವುದೇ ತಡೆಯಿಲ್ಲದೆ Bagalkote) ಖಾಸಗಿಯಾಗಿ ಮೆಡಿಕಲ್ ಪಿಜಿ ವ್ಯಾಸಂಗ ಮಾಡುತ್ತಿದ್ದ ಬಾಗಲಕೋಟೆಯ ವೈದ್ಯೆ ಡಾ. ಅಂಕಿತಾ ಯರಗಲ್ (Ankita Yaragal) ಅವರ ಪ್ರಕರಣ ಇದೀಗ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಗಂಭೀರ ಸ್ವರೂಪದ ಕರ್ತವ್ಯ ಲೋಪ ಹಾಗೂ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಈ ವೈದ್ಯೆಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಗಜಾನನ ಬಾಲೆ ಅವರು ನೋಟಿಸ್ ಜಾರಿ ಮಾಡಿದ್ದು, ನಿನ್ನೆ ನಿಗದಿಯಾಗಿದ್ದ ವಿಚಾರಣೆಗೆ ಆರೋಪಿ ವೈದ್ಯೆ ಗೈರುಹಾಜರಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಉನ್ನತ ರಾಜಕೀಯ ಹಾಗೂ ಆಡಳಿತಾತ್ಮಕ ಹಿನ್ನೆಲೆ

ಈ ಪ್ರಕರಣದಲ್ಲಿ ಭಾಗಿಯಾಗಿರುವ ಡಾ. ಅಂಕಿತಾ ಯರಗಲ್ ಸಾಮಾನ್ಯ ಹಿನ್ನೆಲೆಯವರಲ್ಲ. ಈಕೆ ಬಾಗಲಕೋಟೆ ಜಿಲ್ಲೆಯ ಹಾಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ. ರಾಜಕುಮಾರ ಯರಗಲ್ ಅವರ ಪುತ್ರಿಯಾಗಿದ್ದು, ಕ್ಷೇತ್ರದ ಹಾಲಿ ಶಾಸಕ ಉಮೇಶ್ ಮೇಟಿ (Umesh Meti) ಅವರ ಸೊಸೆಯಾಗಿದ್ದಾರೆ. ಅಧಿಕಾರ ಮತ್ತು ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡು ಇಂತಹ ಕೃತ್ಯ ಎಸಗಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಾರ್ವಜನಿಕ ಸೇವೆಗೆ ಕುತ್ತು ಮತ್ತು ಅನಧಿಕೃತ ಗೈರು

ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿರುವ ಸರ್ಕಾರಿ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಅಂಕಿತಾ, ಕಳೆದ ಮಾರ್ಚ್ 3 ರಿಂದ ಯಾವುದೇ ಮುನ್ಸೂಚನೆ ಅಥವಾ ಅಧಿಕೃತ ರಜೆಯ ಅನುಮತಿಯಿಲ್ಲದೆ ಸೇವೆಗೆ ಗೈರುಹಾಜರಾಗಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತುರ್ತು ಚಿಕಿತ್ಸೆ ನೀಡಬೇಕಿದ್ದ ಕ್ಲಿನಿಕ್‌ನಲ್ಲಿ ವೈದ್ಯರಿಲ್ಲದೆ ಸಾರ್ವಜನಿಕರು ಪ್ರತಿದಿನ ಪರದಾಡುವಂತಾಗಿತ್ತು. ಈ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಡಳಿತ ಜಂಟಿಯಾಗಿ ತನಿಖೆಗೆ ಮುಂದಾಗಿತ್ತು.

ವಿಚಾರಣೆ ತಪ್ಪಿಸಿದ ವೈದ್ಯೆ

ವೈದ್ಯೆಯ ವಿರುದ್ಧ ವಿಚಾರಣೆ ನಡೆಸಲು ಬಾಗಲಕೋಟೆಯ ಎಸ್.ಎನ್. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಸಂಪೂರ್ಣ ಅನುಮತಿ ನೀಡಿದ್ದರು. ಆದಾಗ್ಯೂ, ಜಿಲ್ಲಾ ಪಂಚಾಯತ್ ಸಿಇಒ ಸಮ್ಮುಖದಲ್ಲಿ ನಿನ್ನೆ ನಿಗದಿಯಾಗಿದ್ದ ಮಹತ್ವದ ವಿಚಾರಣಾ ಸಭೆಗೆ ಡಾ. ಅಂಕಿತಾ ಹಾಜರಾಗದೆ ಗೈರಾಗುವ ಮೂಲಕ ಜಾರಿಕೊಂಡಿದ್ದಾರೆ. ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಇಒ ಗಜಾನನ ಬಾಲೆ, ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಖಡಕ್ ನೋಟಿಸ್‌ನಲ್ಲಿರುವ ಪ್ರಮುಖ ಅಂಶಗಳು:

ಆಖೈರು ಗಡುವು: ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಕೊಠಡಿ ಸಂಖ್ಯೆ 11 ರಲ್ಲಿ ನಿಗದಿಪಡಿಸಲಾಗಿದೆ. ಅಂದು ಅಗತ್ಯ ದಾಖಲೆಗಳೊಂದಿಗೆ ಖುದ್ದು ಹಾಜರಾಗದಿದ್ದರೆ ಯಾವುದೇ ನೆಪಗಳನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ವೃತ್ತಿಪರ ನೈತಿಕತೆ ಉಲ್ಲಂಘನೆ: ಕರ್ನಾಟಕ ವೈದ್ಯಕೀಯ ನೋಂದಣಿ ಕಾಯ್ದೆ 1961 ಹಾಗೂ ಎನ್‌ಎಂಸಿ (NMC) ವೃತ್ತಿಪರ ನೈತಿಕ ಸಂಹಿತೆಯನ್ನು ನೇರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ವೈದ್ಯೆಯ ನೋಂದಣಿ ರದ್ದುಗೊಳಿಸಲು ಹಾಗೂ ಶಿಸ್ತುಕ್ರಮಕ್ಕೆ ಕರ್ನಾಟಕ ವೈದ್ಯಕೀಯ ಮಂಡಳಿ (KMC) ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಶಿಫಾರಸು ಮಾಡಲಾಗುವುದು.

ವೇತನ ವಸೂಲಾತಿ: ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಅನಧಿಕೃತವಾಗಿ ಮೆಡಿಕಲ್ ಪಿಜಿ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲಿ ಸರ್ಕಾರದಿಂದ ಪಡೆದ ಸಂಪೂರ್ಣ ವೇತನ ಹಾಗೂ ಗೌರವಧನವನ್ನು ಕಾನೂನುಬದ್ಧವಾಗಿ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆ ಮಾನ್ಯತೆ ಸನ್ನಿಹಿತ!

Leave a Reply

Your email address will not be published. Required fields are marked *