ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಅವರ ಸುತ್ತ ವಿವಾದಗಳ ಸುಳಿಯು ದಿನದಿಂದ ದಿನಕ್ಕೆ ಬಿಗಿಯುತ್ತಿದ್ದು, ಒಂದರ ಮೇಲೊಂದರಂತೆ ಗಂಭೀರ ಸ್ವರೂಪದ ಅಕ್ರಮಗಳು ಮತ್ತು ವಂಚನೆ ಪ್ರಕರಣಗಳು ಬಹಿರಂಗಗೊಳ್ಳುತ್ತಿವೆ. ಈಗಾಗಲೇ ವಿವಿಧ ನೇಮಕಾತಿ ಹಗರಣಗಳ ಮೂಲಕ ಕಾನೂನಿನ ಕುಣಿಕೆಗೆ ಸಿಲುಕಿರುವ ಇವರ ವಿರುದ್ಧ ಇದೀಗ ಮತ್ತೊಂದು ಹೊಸ ಮತ್ತು ಗಂಭೀರ ಭೂಕಬಳಿಕೆ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಬಡ ರೈತ ಮಹಿಳೆಯೊಬ್ಬರಿಗೆ ಸೇರಿದ ಬೃಹತ್ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂಬ ದೂರು ದಾಖಲಾಗಿದೆ. ಜಮೀನಿನ ಮೂಲ ಮಾಲಕಿ ಬಸಮ್ಮ ಅವರ ಪುತ್ರ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಮೊದಲು ತನ್ನ ಅಳಿಯ ಶಂಕರಗೌಡ ಎಂಬುವವರ ಹೆಸರಿಗೆ ಭೂಮಿಯನ್ನು ನೋಂದಣಿ ಮಾಡಿಸಿಕೊಳ್ಳಲಾಗಿದೆ. ನಂತರ ಅದೇ ಜಮೀನನ್ನು ಅಳಿಯನ ಮೂಲಕ ಅಂತಿಮವಾಗಿ ತನ್ನ ಸ್ವಂತ ಹೆಸರಿಗೆ ಶಿವಶಂಕರಪ್ಪ ಅವರು ವರ್ಗಾಯಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂತ್ರಸ್ತ ಭೂಮಾಲಕಿ ಬಸಮ್ಮ ಅವರ ಕುಟುಂಬಸ್ಥರು ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಏನಿದು ಹೊಸ ವಿವಾದ?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಪಿ ಶಿವಶಂಕರಪ್ಪ ಅವರ ಅಳಿಯ ಶಂಕರಗೌಡ, ತಾನು ಜಮೀನಿನ ಮೂಲ ಮಾಲಕಿ ಬಸಮ್ಮ ಅವರ ದತ್ತು ಪುತ್ರ ಎಂದು ವಾದಿಸಿದ್ದಾರೆ. ಬಸಮ್ಮ ಅವರು ಮೃತಪಟ್ಟ ನಂತರವೇ ತಮ್ಮ ಕುಟುಂಬದ ವಿರುದ್ಧ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಮರ್ಥನೆ ನೀಡಿಕೊಂಡಿದ್ದಾರೆ. ತಾವು ಕೂಡ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮದವರೇ ಆಗಿದ್ದು, ಬಸಮ್ಮ ಅವರು ತಮ್ಮ ಜೊತೆಗೆ ಒಂದೇ ಊರಿನಲ್ಲಿ ವಾಸವಾಗಿದ್ದರು ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ. ಆದರೆ ಈ ವಿವಾದ ಮತ್ತು ಭೂವಂಚನೆ ಪ್ರಕರಣದ ಕುರಿತು ಮಾಜಿ ಅಧ್ಯಕ್ಷ ಶಿವಶಂಕರಪ್ಪ ಅವರ ಅಧಿಕೃತ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳ ಪರವಾಗಿ ನಿರಂತರ ಪ್ರಯತ್ನ ನಡೆಸಲಾಗಿದ್ದರೂ, ಅವರಿಂದ ಯಾವುದೇ ಸ್ಪಷ್ಟನೆ ಅಥವಾ ಅಧಿಕೃತ ಉತ್ತರ ದೊರೆತಿಲ್ಲ.
ಮತ್ತೊಂದೆಡೆ, ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಬಂಧನದ ಭೀತಿ ತೀವ್ರಗೊಂಡಿದೆ. ಸಿಐಡಿ (CID) ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ಮೂರನೇ ವಿಚಾರಣಾ ನೋಟಿಸ್ಗೆ ಶಿವಶಂಕರಪ್ಪ ಅವರು ಗೈರುಹಾಜರಾಗಿದ್ದಾರೆ. ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠವು ಶಿವಶಂಕರಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಟ್ಟುನಿಟ್ಟಾಗಿ ವಜಾಗೊಳಿಸಿತ್ತು. ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಎಚ್ಚೆತ್ತ ಸಿಐಡಿ ಅಧಿಕಾರಿಗಳ ತಂಡವು ತಕ್ಷಣವೇ ಶಿವಶಂಕರಪ್ಪ ಅವರ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಆದರೆ ವಿಚಾರಣೆಗೆ ಹಾಜರಾಗಬೇಕಿದ್ದ ಶಿವಶಂಕರಪ್ಪ ಅವರು ಮನೆಯಲ್ಲೂ ಇಲ್ಲದೆ ತಲೆಮರೆಸಿಕೊಂಡಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ.
ಕಳವಳ ವ್ಯಕ್ತಪಡಿಸಿದ ಕೋರ್ಟ್
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ನೀಟ್ (NEET) ಪರೀಕ್ಷೆಯ ಅಕ್ರಮಗಳ ವಿಚಾರವನ್ನ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಇಂತಹ ಪರೀಕ್ಷಾ ಅಕ್ರಮಗಳಿಂದಾಗಿ ಹಗಲು-ರಾತ್ರಿ ಕಷ್ಟಪಟ್ಟು ಓದುವ ಅರ್ಹ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿ ಕೆಲವರು ಆತ್ಮಹತ್ಯೆಯಂತಹ ದುರಂತ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇಂತಹ ಕೃತ್ಯಗಳಿಂದಾಗಿ ಸಾಂಸ್ಥಿಕ ನೇಮಕಾತಿಗಳ ಮೇಲಿನ ಜನರ ನಂಬಿಕೆ ಸಂಪೂರ್ಣವಾಗಿ ನಾಶವಾಗುತ್ತಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ನಿಮ್ಮ ಸ್ವಂತ ಕುಟುಂಬದ ಸದಸ್ಯರೇ ಈ ಅಕ್ರಮಗಳಲ್ಲಿ ಭಾಗಿಯಾಗಿರುವುದು ಇದು ಅತ್ಯಂತ ವ್ಯವಸ್ಥಿತವಾಗಿ ನಡೆದ ಫ್ರಾಡ್ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅಭಿಪ್ರಾಯಪಟ್ಟು ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದರಿಂದಾಗಿ ಮಾಜಿ ಅಧ್ಯಕ್ಷರಿಗೆ ಕಾನೂನಿನ ಉರುಳು ಬಿಗಿಯುತ್ತಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಮಕ್ಕಳಿಂದ ಕೆಲಸ ಮಾಡಿಸಿದರೆ ಪೊಲೀಸರ ಅಮಾನತು: ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ತಾಕೀತು
