ಬೆಂಗಳೂರು: ಕಿರುತೆರೆ ವೀಕ್ಷಕರು ಅತ್ಯಂತ ಕಾತುರದಿಂದ ಕಾಯುತ್ತಿರುವ ಬ್ರಹತ್ ರಿಯಾಲಿಟಿ ಶೋ ‘ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13’ರ ಶುಭಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 6 ರಂದು ಪ್ರೇಕ್ಷಕರ ನೆಚ್ಚಿನ ಈ ರಿಯಾಲಿಟಿ ಶೋದ ಅದ್ಧೂರಿ ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದ್ದು, ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಕಾಲಿಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮುಗಿಲು ಮುಟ್ಟಿದೆ. ಒಂದೆಡೆ ‘ಅಗ್ನಿಪರೀಕ್ಷೆ’ ಮೂಲಕ ಜನಸಾಮಾನ್ಯರಿಗೆ ಅವಕಾಶ ಸಿಗುತ್ತಿದ್ದರೆ, ಇನ್ನೊಂದೆಡೆ ಬಣ್ಣದ ಲೋಕದ ಪ್ರಸಿದ್ಧ ತಾರೆಯರು ಸೆಲೆಬ್ರಿಟಿ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಲಿದ್ದಾರೆ. ಈ ಮಧ್ಯೆ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಸ್ಪರ್ಧಿಗಳ ಮುಖವನ್ನು ಪೂರ್ಣವಾಗಿ ರಿವೀಲ್ ಮಾಡದೆ ಕೇವಲ ಝಲಕ್ ತೋರಿಸುವ ಮೂಲಕ ವೀಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ಕುತೂಹಲ ಮೂಡಿಸಿದ ಪ್ರೋಮೋ
ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಹಿಂಟ್ಗಳನ್ನು ಗಮನಿಸಿದರೆ, ಕಿರುತೆರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಹಲವು ಪ್ರಮುಖ ಮುಖಗಳು ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮಂಗಳೂರು ಮೂಲದ ಸೌಂದರ್ಯ ಶೆಟ್ಟಿ (ಸ್ಯಾಂಡಿ) ಹಿಂದಿಯ ‘ಸ್ಪ್ಲಿಟ್ಸ್ವಿಲ್ಲಾ’ ಕಾರ್ಯಕ್ರಮದ ಮೂಲಕ ಹೆಸರು ಗಳಿಸಿದ್ದು, ತಮ್ಮ ಬೋಲ್ಡ್ ಹಾಗೂ ಬೊಂಬಾಟ್ ವ್ಯಕ್ತಿತ್ವದಿಂದ ‘ಬಿಗ್ ಬಾಸ್’ ಮನೆಗೆ ಹೇಳಿಮಾಡಿಸಿದ ಸ್ಪರ್ಧಿಯಾಗಲಿದ್ದಾರೆ. ಇನ್ನು ಇತ್ತೀಚೆಗಷ್ಟೇ ‘ಗೌರಿಶಂಕರ’ ಧಾರಾವಾಹಿಯಿಂದ ಹೊರಬಂದಿದ್ದ ದಿವ್ಯಾ ವಾಗುಕರ್ ಸೀರೆಯಲ್ಲಿ ಲಕ್ಷಣವಾಗಿ ಕಾಣಿಸಿಕೊಂಡಿದ್ದರೆ, ‘ಕನ್ಯಾಕುಮಾರಿ’ ಖ್ಯಾತಿಯ ಆಸಿಯಾ ಫಿರ್ದೋಸ್ ಹಾಗೂ ‘ಕ್ವಾಟ್ಲೆ ಕಿಚನ್’ ಮೂಲಕ ಜನಪ್ರಿಯರಾದ ನಟಿ ಆಸಿಯಾ ಬೇಗಂ ಅವರ ಹೆಸರುಗಳು ಕೇಳಿಬರುತ್ತಿವೆ.
ಇದಷ್ಟೇ ಅಲ್ಲದೆ, ಪ್ರೋಮೋದಲ್ಲಿ ಮಿಂಚಿದ ಕುಸ್ತಿಪಟು ಬೇರೆ ಯಾರೂ ಅಲ್ಲ, ಇತ್ತೀಚೆಗಷ್ಟೇ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಟ ತಾಂಡವ್ ರಾಮ್ ಎಂಬುದು ಖಚಿತವಾಗಿದೆ. ಅಂಕಿತಾ ಅಮರ್ ಅವರ ಸಹೋದರಿ, ಗಾಯನ ಹಾಗೂ ನೃತ್ಯದಲ್ಲಿ ಗಟ್ಟಿಯಾದ ಪ್ರತಿಭೆ ಹೊಂದಿರುವ ಅನನ್ಯ ಅಮರ್ ಹಾಗೂ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ನಟಿ ಸಂಗೀತಾ ಭಟ್ ಸಹ ಈ ಬಾರಿ ದೊಡ್ಮನೆಯೊಳಗೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಮಿಡಿ ವಿಭಾಗದಿಂದ ಇಬ್ಬರ ಆಯ್ಕೆ?
ಹಾಸ್ಯ ವಿಭಾಗದಿಂದ ‘ಲವ್ ಮಾಕ್ಟೇಲ್ 3’ ಸಿನಿಮಾದ ‘ಜಗ್ಗ ಮಮ್ಮಿ’ ಖ್ಯಾತಿಯ ಜಗದೀಶ್ ಮತ್ತು ‘ಕಾಮಿಡಿ ಕಿಲಾಡಿಗಳು’ ಸೂರಜ್ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಇವುಗಳ ಜೊತೆಗೆ ಮೈತುಂಬಾ ಚಿನ್ನಾಭರಣ ಧರಿಸಿದ ಹೊಸ ಮುಖವೊಂದು ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಆ ಸ್ಪರ್ಧಿ ಯಾರೆಂಬ ರಹಸ್ಯ ವೀಕ್ಷಕರಲ್ಲಿ ಭಾರಿ ತಲೆಬುಡವಿಲ್ಲದ ಕುತೂಹಲ ಮೂಡಿಸಿದೆ. ಜೊತೆಗೆ ಗಾನವಿ ಗೌಡ, ಸುಷ್ಮಾ ರಾವ್, ಸೋನಿ ಮುಲೇವಾ, ರೇಚಲ್ ಡೇವಿಡ್ ಮತ್ತು ಡ್ರ್ಯಾಗನ್ ಮಂಜು ಅವರ ಹೆಸರುಗಳು ಸಹ ಸಂಭಾವ್ಯ ಪಟ್ಟಿಯಲ್ಲಿದ್ದು, ಯಾರಿಗೆ ದೊಡ್ಮನೆಯ ಭಾಗ್ಯ ಸಿಗಲಿದೆ ಎಂಬುದಕ್ಕೆ ಸೆಪ್ಟೆಂಬರ್ 6 ರ ಪ್ರೀಮಿಯರ್ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್-ಆದಿತ್ಯ ಧರ್ ಬಿಗ್ ಕಾಂಬಿನೇಷನ್?: ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾ ವದಂತಿ ತೀವ್ರ
